Saturday, December 17, 2022

ನ್ಯಾಯಾಲಯದ ಮುಂಭಾಗ ರಸ್ತೆ ಅಗಲೀಕರಣ ಕೈಗೊಳ್ಳಿ : ವಕೀಲರ ಸಂಘ ಆಗ್ರಹ

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮಾತನಾಡಿದರು.
    ಭದ್ರಾವತಿ, ಡಿ. ೧೭: ನಗರದ ತಾಲೂಕು ಕಛೇರಿ ರಸ್ತೆ ನ್ಯಾಯಾಲಯದ ಮುಂಭಾಗದಲ್ಲಿ ಅಗಲೀಕರಣಗೊಳ್ಳದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ತಕ್ಷಣ ಜಿಲ್ಲಾಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಆಗ್ರಹಿಸಿದರು.
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಸ್ತೆ ಅಗಲೀಕರಣ ವಿಚಾರದಲ್ಲಿ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯತನ ವಹಿಸುತ್ತಿದೆ. ಈ ಹಿಂದೆ ರಸ್ತೆ ಅಗಲೀಕರಣಕ್ಕಾಗಿ ತಾಲೂಕು ಕಛೇರಿ ರಸ್ತೆಯಲ್ಲಿದ್ದ ಬೃಹತ್ ಮರಗಳನ್ನು ವಿರೋಧದ ನಡುವೆಯೂ ಕಡೆತಲೆ ಮಾಡಿ ರಸ್ತೆ ಅಗಲೀಕರಣ ಕೈಗೊಳ್ಳಲಾಗಿತ್ತು. ಆದರೆ ನ್ಯಾಯಾಲಯದ ಮುಂಭಾಗದಲ್ಲಿ ಮಾತ್ರ ಅಗಲೀಕರಣದಲ್ಲಿ ತಾರತಮ್ಯ ಮಾಡಲಾಗಿದೆ. ಇದನ್ನು ವಕೀಲರ ಸಂಘ ತೀವ್ರವಾಗಿ ಖಂಡಿಸಿ ಪ್ರತಿಭಟನೆ ಸಹ ನಡೆಸಿತ್ತು. ಈ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಉಪವಿಭಾಗಾಧಿಕಾರಿಗಳು ತಾರತಮ್ಯ ಸರಿಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ವಕೀಲರ ಸಂಘ ರಸ್ತೆ ಅಗಲೀಕರಣ ವಿಚಾರದಲ್ಲಿ ಯಾವುದೇ ದುರುದ್ದೇಶ ಅಥವಾ ರಾಜಕೀಯ ಹಿತಾಸಕ್ತಿ ಹೊಂದಿಲ್ಲ. ಸಾರ್ವಜನಿಕ ಹಿತಾಸಕ್ತಿಯಿಂದ ಹೋರಾಟ ನಡೆಸುತ್ತಿದೆ. ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಅಗಲೀಕರಣ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಆದೇಶಿಸಬೇಕು. ಈ ನಿಟ್ಟಿನಲ್ಲಿ ಶಾಸಕರು ಜಿಲ್ಲಾಧಿಕಾರಿಗಳ ಮೇಲೆ ಇನ್ನೂ ಹೆಚ್ಚಿನ ಒತ್ತಡ ಹಾಕಬೇಕೆಂದು ಮನವಿ ಮಾಡಿದರು.
    ಸಂಘದ ಉಪಾಧ್ಯಕ್ಷ ಡಿ.ಎಂ ವಿಶ್ವನಾಥ್, ಕಾರ್ಯದರ್ಶಿ ವಿ. ಉದಯ ಕುಮಾರ್, ನಿರ್ದೇಶಕರಾದ ಎಸ್. ಶ್ವೇತಾ, ಮಗೇಶ್‌ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂ. ನಿಂಗಯ್ಯ ನಿಧನ

ಎಂ. ನಿಂಗಯ್ಯ
    ಭದ್ರಾವತಿ, ಡಿ. ೧೭ : ನಗರದ ಕೇಶವಪುರ ಬಡಾವಣೆ ನಿವಾಸಿ, ಕಂದಾಯ ಇಲಾಖೆ ನಿವೃತ್ತ ನೌಕರರ ಎಂ. ನಿಂಗಯ್ಯ(೬೯) ನಿಧನ ಹೊಂದಿದರು.
    ಪತ್ನಿ, ೩ ಗಂಡು ಮಕ್ಕಳು ಇದ್ದರು. ಇವರ ಅಂತ್ಯಕ್ರಿಯೆ ಶನಿವಾರ ಸಂಜೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ನಿಂಗಯ್ಯರವರು ರಂಗಪ್ಪ ವೃತ್ತ ಸಮೀಪದ ಶ್ರೀ ಗುಳ್ಳಮ್ಮ ದೇವಸ್ಥಾನದ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದರು.
    ಇವರ ನಿಧನಕ್ಕೆ ಶ್ರೀ ಗುಳ್ಳಮ್ಮ ದೇವಸ್ಥಾನದ ಟ್ರಸ್ಟಿ ಹನುಮಂತರಾವ್ ಗಾಯಕ್ವಾಡ್ ಮತ್ತು ಸೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಮಂಜುನಾಥ್‌ರಾವ್ ಮಿಸಾಳೆ, ಸುನಿಲ್ ಗಾಯಕ್ವಾಡ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಕಾಗೆಕೋಡಮಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪನಾಲೆಗಳ ಪರಿಶೀಲನೆ

ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಭದ್ರಾವತಿ ತಾಲೂಕಿನ ಕಾಗೆಕೋಡಮಗ್ಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಉಪನಾಲೆಗಳನ್ನು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಶನಿವಾರ ಪರಿಶೀಲನೆ ನಡೆಸಿದರು.
    ಭದ್ರಾವತಿ, ಡಿ. ೧೭: ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ತಾಲೂಕಿನ ಕಾಗೆಕೋಡಮಗ್ಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಉಪನಾಲೆಗಳನ್ನು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಶನಿವಾರ ಪರಿಶೀಲನೆ ನಡೆಸಿದರು.
   ಉಪನಾಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಳು ಮತ್ತು ಜಂಗಲ್ ತುಂಬಿಕೊಂಡು ನೀರು ಸರಾಗವಾಗಿ ಹರಿಯಲು ತೊಂದರೆಯಾಗಿದ್ದು, ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸುತಿರುವ ನೀರನ್ನು ಈಗಾಗಲೇ ನಿಲ್ಲಿಸಿದ್ದು, ಈ ಬಿಡುವಿನ ಅವಧಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು ನಾಲೆ ಸ್ವಚ್ಛಗೊಳಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಈ ಹಿಂದೆ ಪವಿತ್ರ ರಾಮಯ್ಯ ನಿರ್ದೇಶನ ನೀಡಿದ್ದರು.
  ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಗೆಕೋಡಮಗ್ಗಿ ನೀರು ಬಳಕೆದಾರರ ಸಂಘದ ಉಪಾಧ್ಯಕ್ಷ ಮಂಜಣ್ಣ,  ಕಾರ್ಯದರ್ಶಿ ರವಿ ಕುಮಾರ್ ಹಾಗೂ ಸದಸ್ಯರುಗಳು, ಗ್ರಾಮದ ರೈತರು, ಮುಖಂಡರುಗಳು ಉಪಸ್ಥಿತರಿದ್ದರು.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ‘ವಿರಾಟಪುರ ವಿರಾಗಿ’

ಡಿ.೨೦ರಿಂದ ಶ್ರೀ ಕುಮಾರೇಶ್ವರ ರಥಯಾತ್ರೆ ಆರಂಭ : ಬಿಳಿಕಿ ಶ್ರೀ  


ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಭದ್ರಾವತಿ ತಾಲೂಕು ಗೌರವಧ್ಯಕ್ಷರಾದ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಜಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
   ಭದ್ರಾವತಿ, ಡಿ. ೧೭: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪನೆಯೊಂದಿಗೆ ೧೯ನೇ ಶತಮಾನದ ಆರಂಭದಲ್ಲಿಯೇ ಹೊಸ ಮನ್ವಂತರಕ್ಕೆ ಭದ್ರಾ ಬುನಾದಿ ಹಾಕಿದ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ಡಿ. ೨೦ರಂದು ನಗರದಿಂದ ಆರಂಭಗೊಳ್ಳಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಗೌರವಧ್ಯಕ್ಷರಾದ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಜಿ ತಿಳಿಸಿದರು.
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತ ಸಮಾಜ ಹಲವಾರು ಒಳಪಂಗಡ, ಜಾತಿಗಳಿಂದ ಕೂಡಿದೆ. ಎಲ್ಲಾ ಒಳಪಂಗಡ, ಜಾತಿಗಳನ್ನು ಒಗ್ಗೂಡಿಸಿದ ಮಹಾನ್ ಚೇತನ, ನೂರಾರು ವರ್ಷಗಳ ಹಿಂದೆಯೇ ವೀರಶೈವ ಲಿಂಗಾಯತ ಎಲ್ಲರೂ ಒಂದೇ ಎಂಬುದನ್ನು ತೋರಿಸಿಕೊಟ್ಟ ಪ್ರಪಂಚದ ಏಕೈಕ ವ್ಯಕ್ತಿ ಶ್ರೀ ಕುಮಾರ ಶಿವಯೋಗಿಗಳು. ಕೇವಲ ವೀರಶೈವ ಲಿಂಗಾಯತ ಸಮಾಜಕ್ಕೆ ಶಿವಯೋಗಿಗಳು ಸೀಮಿತವಾಗಿಲ್ಲ. ಅವರು ಎಲ್ಲಾ ಸಮಾಜದವರಿಗೂ ಬೇಕಾದ  ಮಹಾನ್ ವ್ಯಕ್ತಿಯಾಗಿದ್ದಾರೆ.  ಸಮ ಸಮಾಜ ನಿರ್ಮಾಣದ ರೂವಾರಿಗಳು,  ಸರ್ವರಿಗೂ ಶಿಕ್ಷಣ, ಅಂಧರ  ಬಾಳಿಗೆ ಸಂಗೀತ ಶಿಕ್ಷಣ, ಮಹಿಳಾ ಶಿಕ್ಷಣ ಮತ್ತು ಸ್ತ್ರೀ ಸಬಲೀಕರಣ, ಶಿವಯೋಗ ಮಂದಿರ ಸ್ಥಾಪನೆ, ವಚನ ತಾಡೋಲೆಗಳ ಸಂಗ್ರಹ ಮತ್ತು ಗೋಶಾಲೆ ಸ್ಥಾಪನೆ, ಹತ್ತಿ ಕಾರ್ಖಾನೆ ಸ್ಥಾಪನೆ, ಆಯುರ್ವೇದ ಚಿಕಿತ್ಸಾಲಯ ಸ್ಥಾಪನೆ, ಚಿತ್ರಮಂದಿರ ಪ್ರಾರಂಭ, ಪ್ರಾಣಿ ಬಲಿ ನಿಷೇಧ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಮಾದರಿ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. ಇವರ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಇಂದಿನ ಸಮಾಜಕ್ಕೆ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ನಾಡಿನಾದ್ಯಂತ ಶ್ರೀ ಕುಮಾರೇಶ್ವರ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.  
     ರಥಯಾತ್ರೆ ಡಿ.೨೦ರಂದು ಆರಂಭಗೊಳ್ಳಲಿದ್ದು, ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಸಮಾರಂಭ ನಡೆಯಲಿದೆ. ಶಿವಮೊಗ್ಗ ಜಿಲ್ಲೆ ವೀರಶೈವ ಲಿಂಗಾಯತ ಮಠಾಧೀಶರ ಮಹಾಸಭಾ ಅಧ್ಯಕ್ಷರಾದ ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮುರುಘರಾಜೇಂದ್ರ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದು, ಜಿಲ್ಲೆಯ ಎಲ್ಲಾ ವೀರಶೈವ ಲಿಂಗಾಯತ ಮಠಗಳ ಪೀಠಾಧ್ಯಕ್ಷರುಗಳು ಉಪಸ್ಥಿತರಿರುವರು. ಶಾಸಕ ಬಿ.ಕೆ ಸಂಗಮೇಶ್ವರ್ ಸಮಾರಂಭ ಉದ್ಘಾಟಿಸಲಿದ್ದು, ಎಲ್ಲಾ ಜಾತಿ, ಸಮಾಜದ ಮುಖಂಡರುಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.
     ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಉದ್ಯಮಿ ಬಿ.ಕೆ ಜಗನ್ನಾಥ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಜಿ. ಸುರೇಶಯ್ಯ, ಮಹಿಳಾ ಘಟಕದ ಅಧ್ಯಕ್ಷೆ ರೂಪನಾಗರಾಜ್, ಯುವ ಘಟಕದ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ತೀರ್ಥಯ್ಯ, ವಾಗೀಶ್, ರೇವಪ್ಪ, ಬಾರಂದೂರು ಮಂಜುನಾಥ್, ಕವಿತಾಸುರೇಶ್, ಕೂಡ್ಲಿಗೆರೆ ರುದ್ರೇಶ್, ಶೋಭಾ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.