Saturday, December 17, 2022

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ‘ವಿರಾಟಪುರ ವಿರಾಗಿ’

ಡಿ.೨೦ರಿಂದ ಶ್ರೀ ಕುಮಾರೇಶ್ವರ ರಥಯಾತ್ರೆ ಆರಂಭ : ಬಿಳಿಕಿ ಶ್ರೀ  


ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಭದ್ರಾವತಿ ತಾಲೂಕು ಗೌರವಧ್ಯಕ್ಷರಾದ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಜಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
   ಭದ್ರಾವತಿ, ಡಿ. ೧೭: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪನೆಯೊಂದಿಗೆ ೧೯ನೇ ಶತಮಾನದ ಆರಂಭದಲ್ಲಿಯೇ ಹೊಸ ಮನ್ವಂತರಕ್ಕೆ ಭದ್ರಾ ಬುನಾದಿ ಹಾಕಿದ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ಡಿ. ೨೦ರಂದು ನಗರದಿಂದ ಆರಂಭಗೊಳ್ಳಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಗೌರವಧ್ಯಕ್ಷರಾದ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಜಿ ತಿಳಿಸಿದರು.
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತ ಸಮಾಜ ಹಲವಾರು ಒಳಪಂಗಡ, ಜಾತಿಗಳಿಂದ ಕೂಡಿದೆ. ಎಲ್ಲಾ ಒಳಪಂಗಡ, ಜಾತಿಗಳನ್ನು ಒಗ್ಗೂಡಿಸಿದ ಮಹಾನ್ ಚೇತನ, ನೂರಾರು ವರ್ಷಗಳ ಹಿಂದೆಯೇ ವೀರಶೈವ ಲಿಂಗಾಯತ ಎಲ್ಲರೂ ಒಂದೇ ಎಂಬುದನ್ನು ತೋರಿಸಿಕೊಟ್ಟ ಪ್ರಪಂಚದ ಏಕೈಕ ವ್ಯಕ್ತಿ ಶ್ರೀ ಕುಮಾರ ಶಿವಯೋಗಿಗಳು. ಕೇವಲ ವೀರಶೈವ ಲಿಂಗಾಯತ ಸಮಾಜಕ್ಕೆ ಶಿವಯೋಗಿಗಳು ಸೀಮಿತವಾಗಿಲ್ಲ. ಅವರು ಎಲ್ಲಾ ಸಮಾಜದವರಿಗೂ ಬೇಕಾದ  ಮಹಾನ್ ವ್ಯಕ್ತಿಯಾಗಿದ್ದಾರೆ.  ಸಮ ಸಮಾಜ ನಿರ್ಮಾಣದ ರೂವಾರಿಗಳು,  ಸರ್ವರಿಗೂ ಶಿಕ್ಷಣ, ಅಂಧರ  ಬಾಳಿಗೆ ಸಂಗೀತ ಶಿಕ್ಷಣ, ಮಹಿಳಾ ಶಿಕ್ಷಣ ಮತ್ತು ಸ್ತ್ರೀ ಸಬಲೀಕರಣ, ಶಿವಯೋಗ ಮಂದಿರ ಸ್ಥಾಪನೆ, ವಚನ ತಾಡೋಲೆಗಳ ಸಂಗ್ರಹ ಮತ್ತು ಗೋಶಾಲೆ ಸ್ಥಾಪನೆ, ಹತ್ತಿ ಕಾರ್ಖಾನೆ ಸ್ಥಾಪನೆ, ಆಯುರ್ವೇದ ಚಿಕಿತ್ಸಾಲಯ ಸ್ಥಾಪನೆ, ಚಿತ್ರಮಂದಿರ ಪ್ರಾರಂಭ, ಪ್ರಾಣಿ ಬಲಿ ನಿಷೇಧ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಮಾದರಿ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. ಇವರ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಇಂದಿನ ಸಮಾಜಕ್ಕೆ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ನಾಡಿನಾದ್ಯಂತ ಶ್ರೀ ಕುಮಾರೇಶ್ವರ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.  
     ರಥಯಾತ್ರೆ ಡಿ.೨೦ರಂದು ಆರಂಭಗೊಳ್ಳಲಿದ್ದು, ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಸಮಾರಂಭ ನಡೆಯಲಿದೆ. ಶಿವಮೊಗ್ಗ ಜಿಲ್ಲೆ ವೀರಶೈವ ಲಿಂಗಾಯತ ಮಠಾಧೀಶರ ಮಹಾಸಭಾ ಅಧ್ಯಕ್ಷರಾದ ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮುರುಘರಾಜೇಂದ್ರ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದು, ಜಿಲ್ಲೆಯ ಎಲ್ಲಾ ವೀರಶೈವ ಲಿಂಗಾಯತ ಮಠಗಳ ಪೀಠಾಧ್ಯಕ್ಷರುಗಳು ಉಪಸ್ಥಿತರಿರುವರು. ಶಾಸಕ ಬಿ.ಕೆ ಸಂಗಮೇಶ್ವರ್ ಸಮಾರಂಭ ಉದ್ಘಾಟಿಸಲಿದ್ದು, ಎಲ್ಲಾ ಜಾತಿ, ಸಮಾಜದ ಮುಖಂಡರುಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.
     ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಉದ್ಯಮಿ ಬಿ.ಕೆ ಜಗನ್ನಾಥ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಜಿ. ಸುರೇಶಯ್ಯ, ಮಹಿಳಾ ಘಟಕದ ಅಧ್ಯಕ್ಷೆ ರೂಪನಾಗರಾಜ್, ಯುವ ಘಟಕದ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ತೀರ್ಥಯ್ಯ, ವಾಗೀಶ್, ರೇವಪ್ಪ, ಬಾರಂದೂರು ಮಂಜುನಾಥ್, ಕವಿತಾಸುರೇಶ್, ಕೂಡ್ಲಿಗೆರೆ ರುದ್ರೇಶ್, ಶೋಭಾ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment