Wednesday, June 8, 2022

ಪ್ರಚೋದನಾಕಾರಿ ಹೇಳಿಕೆ ಮುತಾಲಿಕ್ ವಿರುದ್ಧ ದೂರು

ಪ್ರಚೋದನಾಕಾರಿ ಹೇಳಿಕೆ ನೀಡಿರುವ ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸಿ.ಎಂ ಖಾದರ್ ನೇತೃತ್ವದಲ್ಲಿ ಬುಧವಾರ ಭದ್ರಾವತಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. 
    ಭದ್ರಾವತಿ, ಜೂ. ೮: ಪ್ರಚೋದನಾಕಾರಿ ಹೇಳಿಕೆ ನೀಡಿರುವ ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸಿ.ಎಂ ಖಾದರ್ ನೇತೃತ್ವದಲ್ಲಿ ಬುಧವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
    ಅಜಾನ್ ಧ್ವನಿವರ್ಧಕ ತಡೆಯೊಡ್ಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮೋದ್ ಮುತಾಲಿಕ್‌ರವರು ನೀಡಿರುವ ಪ್ರಚೋದನಾಕಾರಿ ಹೇಳಿಕೆಯಿಂದ ಸಮಾಜದಲ್ಲಿ ಆಶಾಂತಿ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
    ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಅವರಿಗೆ  ದೂರು ಸಲ್ಲಿಸಲಾಯಿತು.  ರಾಜ್ಯ ಯುವ ಕಾಂಗ್ರೆಸ್ ಸಮಿತಿ ವಕ್ತಾರ ಆಮೋಸ್ ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಫ್ತಾಬ್ ಅಹಮದ್, ಉಪಾಧ್ಯಕ್ಷ ತಬ್ರೇಜ್‌ಖಾನ್, ಮುಖಂಡರಾದ ಸಯ್ಯದ್ ಮುಬಾರಕ್, ಫೈಜಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

೩ನೇ ಓಪನ್ ನ್ಯಾಷನಲ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಬಿಜಿಎಸ್ ಶಾಲೆಗೆ ಹಲವು ಬಹುಮಾನ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರಿಯ ವಿದ್ಯಾಲಯ(ಬಿಜಿಎಸ್ ಶಾಲೆ)ದ ವಿದ್ಯಾರ್ಥಿಗಳು ಪಾಂಡಿಚೆರಿಯಲ್ಲಿ ನಡೆದ ೩ನೇ ಓಪನ್ ನ್ಯಾಷನಲ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದು, ಬುಧವಾರ ನಗರಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ವಿಐಎಸ್‌ಎಲ್ ಕಾರ್ಮಿಕ ಸಂಘದ ಉಪಾಧ್ಯಕ್ಷ ಕುಮಾರ್ ಎಎಲ್‌ಡಬ್ಲ್ಯೂರವರು ಹೂವಿನ ಹಾರ ಹಾಕುವ ಮೂಲಕ ಅಭಿನಂದಿಸಿ ಸಿಹಿ ಹಂಚಿದರು.
    ಭದ್ರಾವತಿ, ಜೂ. ೮: ತಾಲೂಕಿನ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರಿಯ ವಿದ್ಯಾಲಯ(ಬಿಜಿಎಸ್ ಶಾಲೆ)ದ ವಿದ್ಯಾರ್ಥಿಗಳು ಪಾಂಡಿಚೆರಿಯಲ್ಲಿ ನಡೆದ ೩ನೇ ಓಪನ್ ನ್ಯಾಷನಲ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಯೂತ್ ಸ್ಪೋರ್ಟ್ಸ್ ಅಂಡ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಲಾಗಿದ್ದ ಪಂದ್ಯಾವಳಿಯಲ್ಲಿ ಕೆ. ಸಮಥ ಶಾಟ್‌ಪುಟ್‌ನಲ್ಲಿ ಪ್ರಥಮ, ಡಿ. ರುಷಿಕ ಯೋಗಾಸನ ಪ್ರಥಮ, ಸಮರ್ಥ್ ಚಕ್ರವರ್ತಿ ೧೦೦ ಮೀಟರ್ ಓಟದಲ್ಲಿ ಪ್ರಥಮ, ಜಸ್ವಂತ್ ರೆಡ್ಡಿ ಮತ್ತು ಶರಥ್ವಿ ಭಾಗ್ಸಲೆ ೨೦೦ ಮೀಟರ್ ಓಟದಲ್ಲಿ ಪ್ರಥಮ, ಮಹಮದ್ ರಯಾನ್ ೪೦೦ ಮೀಟರ್ ಓಟದಲ್ಲಿ ಪ್ರಥಮ, ಸಮರ್ಥ್ ಪುರಾಣಿಕ್ ಮತ್ತು ಜಿ. ಚಿನ್ಮಯ ಪ್ರಸಾದ್ ಚದುರಂಗದಲ್ಲಿ ಪ್ರಥಮ ಹಾಗು ಬಿ.ಎಂ ವೇದಾಂತ್ ಡಿಸ್ಕ್ ಥ್ರೋನಲ್ಲಿ ಪ್ರಥಮ ಸ್ಥಾನ ವೈಯಕ್ತಿಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಎಲ್. ಪ್ರಿನ್ಸ್, ಬಿ.ಜಿ ಸಿದ್ದಾರ್ಥ್, ಎಂ. ಚೇತನ್, ಎಸ್. ಪ್ರೀತಮ್ ಅವರನ್ನೊಳಗೊಂಡ ಖೋ ಖೋ ತಂಡ ಪ್ರಥಮ ಸ್ಥಾನದೊಂದಿಗೆ ಬಹುಮಾನ ತನ್ನದಾಗಿಸಿಕೊಂಡಿದೆ.  
    ಬುಧವಾರ ನಗರಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ವಿಐಎಸ್‌ಎಲ್ ಕಾರ್ಮಿಕ ಸಂಘದ ಉಪಾಧ್ಯಕ್ಷ ಕುಮಾರ್ ಎಎಲ್‌ಡಬ್ಲ್ಯೂರವರು ಹೂವಿನ ಹಾರ ಹಾಕುವ ಮೂಲಕ ಅಭಿನಂದಿಸಿ ಸಿಹಿ ಹಂಚಿದರು. ವಿದ್ಯಾರ್ಥಿಗಳೊಂದಿಗೆ ತರಬೇತಿದಾರ ಹಾಗು ಪೋಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ವಿದ್ಯಾರ್ಥಿಗಳಿಗೆ ಕೇಂದ್ರಿಯ ವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು, ವಿವಿಧ ಸಂಘ-ಸಂಸ್ಥೆಗಳು ಹಾಗು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.


ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಜಿ.ಆರ್ ನಾಗರಾಜ್ ಗೌಡ್ರು ಅವಿರೋಧ ಆಯ್ಕೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕೋಡಿಹಳ್ಳಿ ಗ್ರಾಮದ ಜಿ.ಆರ್. ನಾಗರಾಜ್ ಗೌಡ್ರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
    ಭದ್ರಾವತಿ, ಜೂ. ೮ : ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕೋಡಿಹಳ್ಳಿ ಗ್ರಾಮದ ಜಿ.ಆರ್. ನಾಗರಾಜ್ ಗೌಡ್ರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
    ಉಪಾಧ್ಯಕ್ಷರಾಗಿದ್ದ ಎಚ್. ಕುಬೇರನಾಯ್ಕರವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ.ಆರ್ ನಾಗರಾಜ್ ಗೌಡ್ರು ಅವಿರೋಧವಾಗಿ ಆಯ್ಕೆಯಾಗಿದ್ದು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಚುನಾವಣಾಧಿಕಾರಿ ಕರ್ತವ್ಯ ನಿರ್ವಹಿಸಿದರು.
    ಕೂಡ್ಲಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಚುಕ್ಕಾಣಿ ಹಿಡಿದಿದ್ದು,  ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಅಧಿಕಾರ ಹಂಚಿಕೆ ಸೂತ್ರದಡಿ ಒಡಂಬಡಿಕೆ ಮಾಡಿಕೊಂಡಿದ್ದು, ಅದರಂತೆ ಕುಬೇರನಾಯ್ಕರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
    ಪಂಚಾಯಿತಿ ಅಧ್ಯಕ್ಷೆ ಉಮಾದೇವಿ ತಿಪ್ಪೇಶ್, ಮಾಜಿ ಅಧ್ಯಕ್ಷರಾದ ಸಿ. ಮಲಕ್ ವೀರಪ್ಪನ್, ಎಂ. ಜಯಣ್ಣ, ನಿಕಟಪೂರ್ವ ಉಪಾಧ್ಯಕ್ಷ ಕುಬೇರ ನಾಯ್ಕ, ತಾಲೂಕು ಸುಗ್ರಾಮ ಅಧ್ಯಕ್ಷೆ ಗೌರಮ್ಮ ಮಹದೇವ್, ಸದಸ್ಯರಾದ ವಿಶ್ವನಾಥ್, ಸ್ವಾಮಿನಾಥನ್, ಆರ್.ಎನ್ ರುದ್ರೇಶ್, ನೀಲಾಬಾಯಿ, ಪಾರ್ವತಿ ಬಾಯಿ, ಬಿ. ಸಿದ್ದಮ್ಮ, ಭಾಗ್ಯ ಹಾಗು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್. ಅಶೋಕ್, ಕಾರ್ಯದರ್ಶಿ ಸಿ. ಸತೀಶ್ ಗೌಡ ಮತ್ತು ಗ್ರಂಥಾಲಯ ಮೇಲ್ವಿಚಾರಕ ಡಿ. ಮಹೇಶ್ವರನಾಯ್ಕ ಸೇರಿದಂತೆ ಗ್ರಾಮದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.