Monday, May 29, 2023

ಹೆಚ್ಚುತ್ತಿರುವ ರಸ್ತೆ ನಿಯಮ ಉಲ್ಲಂಘನೆ ಪ್ರಕರಣಗಳು : ಸಂಚಾರಿ ಪೊಲೀಸರ ಆತಂಕ

    ಭದ್ರಾವತಿ, ಮೇ. ೨೯ : ಶಿವಮೊಗ್ಗ ಪೊಲೀಸ್ ವತಿಯಿಂದ ರಸ್ತೆ ನಿಯಮ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ.
    ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಇಲಾಖೆ ನಿರಂತರವಾಗಿ ತೊಡಗಿಸಿಕೊಂಡಿದೆ. ಅದರಲ್ಲೂ ಯುವ ಸಮೂಹಕ್ಕೆ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಸಂಚಾರಿ ಪೊಲೀಸರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
    ಪ್ರಮುಖವಾಗಿ ಹೆಲ್ಮೆಟ್ ಧರಿಸದಿರುವ ಹಾಗು ಚಾಲನಾ ಪರವಾನಗಿ ಇಲ್ಲದ ಪ್ರಕರಣಗಳು ಹೆಚ್ಚಾಗುತ್ತಿವೆ. ಸಂಚಾರಿ ಪೊಲೀಸ್ ಠಾಣಾಧಿಕಾರಿ ಭಾರತಿ ಅನಿಲ್ ಪತ್ರಿಕೆಗೆ ಮಾಹಿತಿ ನೀಡಿ, ಇಲಾಖೆವತಿಯಿಂದ ರಸ್ತೆ ಸುರಕ್ಷತೆ ಹಾಗು ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಸಹ ಹೆಲ್ಮೆಟ್ ಧರಿಸದಿರುವ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿ ದಿನ ಸುಮಾರು ೨೦ ಪ್ರಕರಣಗಳು ಹಾಗು ಚಾಲನಾ ಪರವಾನಗಿ ಇಲ್ಲದ ಸುಮಾರು ೨-೩ ಪಕರಣಗಳು ದಾಖಲಾಗುತ್ತಿವೆ. ಅಲ್ಲದೆ ಸರ್ಕಾರ ರಸ್ತೆ ಸುರಕ್ಷತೆ ಹಾಗು ನಿಯಮಗಳಿಗೆ ಸಂಬಂಧಿಸಿದಂತೆ ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಈ ಕಾನೂನುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇಲಾಖೆ ಮುಂದಾಗುತ್ತಿದೆ ಎಂದರು.
    ನಗರದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಚಾಲನಾ ಪರವಾನಗಿ ಇಲ್ಲದೆ ವಾಹನಗಳನ್ನು ಚಲಾಯಿಸುತ್ತಿದ್ದು, ಈ ಹಿನ್ನಲೆಯಲ್ಲಿ ಸುಮಾರು ೧೦೦೦ ಮಂದಿಗೆ ಉಚಿತವಾಗಿ ಚಾಲನಾ ಪರವಾನಗಿ ಮಾಡಿಸಿ ಕೊಡುವ ಬೃಹತ್ ಶಿಬಿರ ಆಯೋಜಿಸುವ ಅಗತ್ಯವಿದೆ.  ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಆಸಕ್ತರು ಮುಂದೆ ಬಂದಲ್ಲಿ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.  

ಉತ್ತಮ ಪ್ರಜೆಯಾಗಿ ಬಾಳಲು ಜ್ಞಾನ ದಾರಿ ದೀಪ : ವೇ.ಬ್ರ. ಜಿ. ರಾಘವೇಂದ್ರ ಉಪಾಧ್ಯಾಯ

ಭದ್ರಾವತಿ ಅಪ್ಪರ್ ಹುತ್ತಾ ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಸೋಮವಾರ ಅನನ್ಯ ಹ್ಯಾಪಿ ಹಾರ್ಟ್ಸ್ ಯುಕೆಜಿ ಹಾಗು ಎಲ್‌ಕೆಜಿ ವಿದ್ಯಾರ್ಥಿಗಳಿಗೆ ಶಾಸ್ತ್ರೋಕ್ತವಾಗಿ ಅಕ್ಷರಾಭ್ಯಾಸದ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು.
    ಭದ್ರಾವತಿ, ಮೇ. ೨೯:  ಜಗತ್ತಿನಲ್ಲಿ ಜ್ಞಾನ ಹೊಂದಿರುವ ಏಕೈಕ ಜೀವಿ ಮನುಷ್ಯ. ಆತ ಸರಿಯಾದ ಸಮಯದಲ್ಲಿ ಸೂಕ್ತ ಸಂಸ್ಕಾರಗಳನ್ನು ಪಡೆದು ಜ್ಞಾನವಂತ, ಬುದ್ದಿವಂತ, ವಿದ್ಯಾವಂತನಾಗಿ ಉತ್ತಮ ಪ್ರಜೆಯಾಗಿ ಬಾಳಲು ಜ್ಞಾನ ದಾರಿ ತೋರುತ್ತದೆ ಎಂದು ಹುತ್ತಾಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಆರ್ಚಕ ವೇ.ಬ್ರ ಜಿ. ರಾಘವೇಂದ್ರ ಉಪಾಧ್ಯಾಯ ಹೇಳಿದರು.
    ಅವರು ಸೋಮವಾರ ನಗರದ ಅಪ್ಪರ್ ಹುತ್ತಾ ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಅನನ್ಯ ಹ್ಯಾಪಿ ಹಾರ್ಟ್ಸ್ ಯುಕೆಜಿ ಹಾಗು ಎಲ್‌ಕೆಜಿ ವಿದ್ಯಾರ್ಥಿಗಳಿಗೆ ಶಾಸ್ತ್ರೋಕ್ತವಾಗಿ ಅಕ್ಷರಾಭ್ಯಾಸದ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿ ಮಾತನಾಡಿದರು.
    ಭಾರತೀಯ ಸಂಸ್ಕೃತಿಯಲ್ಲಿ ಮಗು ಜನನದಿಂದ ಅಂತಿಮ ದಿನದವರೆಗೆ ಹಲವಾರು ರೀತಿಯ ಷೋಡಶ ಸಂಸ್ಕಾರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಷೋಡಶ ಸಂಸ್ಕಾರ ೧೬ ವಿಧಿವಿಧಾನಗಳನ್ನು ಒಳಗೊಂಡಿದೆ. ಅವುಗಳಲ್ಲಿ ಅಕ್ಷರಾಭ್ಯಾಸ ಬಹುಮುಖ್ಯ ಹಾಗು ಮಹತ್ವದ್ದಾಗಿದೆ. ಕಾರಣ ಪ್ರಾರಂಭದಲ್ಲಿ ಇದನ್ನು ಕೈಗೊಂಡಾಗ ಮಕ್ಕಳು ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುವ ಮೂಲಕ ತಮ್ಮ ಓದಿನ ಬಗ್ಗೆ ಆಸಕ್ತಿ ತಾಳುತ್ತಾರೆ ಎಂದರು.
    ಮಕ್ಕಳು ಶಿಕ್ಷಣ ಪಡೆಯುವ ಶಾಲೆಯೇ ಅವರ ಜೀವನದ ಸರಸ್ವತಿ ದೇಗುಲವಾಗಿದೆ. ಈ ದೇಗುಲದಲ್ಲಿ ಇಂದು ಮಕ್ಕಳಿಗೆ ಅಕ್ಷರಾಭ್ಯಾಸ ಶಾಸ್ತ್ರೋಕ್ತವಾಗಿ ಕೈಗೊಂಡು ಉತ್ತಮ ಸಂಸ್ಕಾರ ನೀಡುವ ಮೂಲಕ ಶಾಲಾ ದಿನವನ್ನು ಪ್ರಾರಂಭ ಮಾಡಲಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
    ಸಮಾಜದಲ್ಲಿ ಸ್ಥಿತಿವಂತರು, ಶ್ರೀಮಂತರು, ಆರ್ಥಿಕವಾಗಿ ಸಬಲರಾಗಿರುವವರು ತಮ್ಮ ತಮ್ಮ ಮಕ್ಕಳಿಗೆ ಈ ರೀತಿಯ ಸಂಸ್ಕಾರವನ್ನು ಪ್ರಸಿಧ್ದ ಧಾರ್ಮಿಕ ಸ್ಥಳಗಳು, ದೇವಾಲಯಗಳಲ್ಲಿ ವೈಯುಕ್ತಿಕವಾಗಿ ಮಾಡಿಸುತ್ತಾರೆ. ಆದರೆ ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಎಲ್ಲಾ ಮಕ್ಕಳಿಗೂ ಈ ಸಂಸ್ಕಾರ ಸಾಮೂಹಿಕವಾಗಿ ಪ್ರತಿಯೊಬ್ಬರಿಗೂ ಮಾಡಿಸಿದ್ದು ಅಭಿನಂದನಾರ್ಹ ಎಂದರು.
    ಶಾಲಾ ಆಢಳಿತಾಧಿಕಾರಿ ಎನ್. ವೇಣುಗೋಪಾಲ್, ಮುಖ್ಯೋಪಾಧ್ಯಾಯರಾದ ಕಲ್ಲೇಶ್ ಕುಮಾರ್, ಸುನಿತಾ ನಟರಾಜ್, ತನುಜಾ, ಅನಿಲ್ ಹಾಗು ಶಾಲಾ ಅಧ್ಯಾಪಕ ಮತ್ತು ಇತರ ಸಿಬ್ಬಂದಿಗಳು, ಮಕ್ಕಳ ಪೋಷಕರು ,ಶಾಲಾ ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತರಿದ್ದರು.