ಶುಕ್ರವಾರ, ಜೂನ್ 13, 2025

ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು

  

 
    ಭದ್ರಾವತಿ : ಮನೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಬಜಾಜ್ ದ್ವಿಚಕ್ರ ವಾಹನ ಕಳವು ಮಾಡಿರುವ ಘಟನೆ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 
    ವೈ. ರಾಕೇಶ್ ಎಂಬುವರು ತಮ್ಮ ಸುಮಾರು ೫೦ ಸಾವಿರ ರು. ಮೌಲ್ಯದ ಬಜಾಜ್ ದ್ವಿಚಕ್ರ ವಾಹನ ಜು.೭ರಂದು ರಾತ್ರಿ ೮.೩೦ರ ಸಮಯದಲ್ಲಿ ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದು, ಬೆಳಿಗ್ಗೆ ೬ ಗಂಟೆ ಸಮಯದಲ್ಲಿ ನೋಡಿದಾಗ ವಾಹನ ಕಳುವಾಗಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ವಾಹನ ಪತ್ತೆ ಮಾಡಿಕೊಡುವಂತೆ ದೂರು ನೀಡಿದ್ದಾರೆ. 

ಜೂ.೨೦ರವರೆಗೆ ಆನ್‌ಲೈನ್ ಯೋಗಾಸನ ಶಿಬಿರ


    ಭದ್ರಾವತಿ: ಕರ್ನಾಟಕ ರಾಜ್ಯ ಪ್ರಸೂತಿ ಹಾಗು ಸ್ತ್ರೀ ರೋಗ ತಜ್ಞರ ಸಂಘದ ಪಿಎಸಿ ಮತ್ತು ಪಿವಿಎಡಬ್ಲ್ಯೂ ಕಮಿಟಿ ವತಿಯಿಂದ ಶಿವಮೊಗ್ಗ ಓಬಿಜಿ ಸೊಸೈಟಿ ಸಹಯೋಗದೊಂದಿಗೆ ಜೂ.೧೪ ರಿಂದ ೨೦ರ ವರೆಗೆ ಆನ್‌ಲೈನ್ ಯೋಗಾಸನ ಶಿಬಿರ ಆಯೋಜಿಸಲಾಗಿದೆ. 
    ಪಿಎಸಿ ಮತ್ತು ಪಿವಿಎಡಬ್ಲ್ಯೂ ಕಮಿಟಿ ಅಧ್ಯಕ್ಷರು ಹಾಗು ಯೋಗಾಸನ ಬೋಧಕಿ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ), ನಯನ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ. ವೀಣಾ ಎಸ್ ಭಟ್‌ರವರ ನೇತೃತ್ವದಲ್ಲಿ ಪ್ರತಿದಿನ ಬೆಳಿಗ್ಗೆ ೬ ರಿಂದ ೭ ಗಂಟೆವರೆಗೆ ಶಿಬಿರ ನಡೆಯಲಿದೆ. 
    ಓಬಿಜಿ ಸೊಸೈಟಿ ಶಿವಮೊಗ್ಗ ಕಾರ್ಯದರ್ಶಿ ಡಾ. ಸ್ವಾತಿ ಕಿಶೋರ್ ಮತ್ತು ಪಿಎಸಿ ಮತ್ತು ಪಿವಿಎಡಬ್ಲ್ಯೂ ಕಮಿಟಿ ಕಾರ್ಯದರ್ಶಿ ಡಾ. ರಾಜಲಕ್ಷ್ಮಿ ಸೇರಿದಂತೆ ಇನ್ನಿತರರು ಶಿಬಿರದಲ್ಲಿ ಉಪಸ್ಥಿತರಿರುವರು. ಹೆಚ್ಚಿನ ಮಾಹಿತಿ ಹಾಗು ಆನ್‌ಲೈನ್ ಸಂಪರ್ಕದಲ್ಲಿ ಪಾಲ್ಗೊಳ್ಳಲು ಡಾ. ವೀಣಾಭಟ್ ಮೊ: ೯೪೮೦೩೫೩೮೭೮ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

ವಿಜೃಂಭಣೆಯಿಂದ ಜರುಗಿದ ಕಾರೇಹಳ್ಳಿ ಜಾತ್ರಾ ಮಹೋತ್ಸವ

ಭದ್ರಾವತಿ ತಾಲೂಕಿನ ಕಾರೇಹಳ್ಳಿಯ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. 
    ಭದ್ರಾವತಿ : ತಾಲೂಕಿನ ಕಾರೇಹಳ್ಳಿಯ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. 
    ಭಕ್ತರು ಹರಕೆ, ಪ್ರಾರ್ಥನೆಗಳನ್ನು ಸಂತರ ಮುಂದೆ ಸಲ್ಲಿಸಲು ಹೂವಿನ ಹಾರ ಹಾಗೂ ಮೊಂಬತ್ತಿಗಳನ್ನು ಹಿಡಿದು ಬೆಳಗ್ಗೆ ೭ ಗಂಟೆಯಿಂದಲೇ ದೇವಾಲಯಕ್ಕೆ ಆಗಮಿಸುತ್ತಿದ್ದರು. 
    ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಧ್ಯಕ್ಷರಾದ ಫ್ರಾನ್ಸಿಸ್ ಸೆರಾವೋ ರವರಿಂದ ಪೂಜಾ ವಿಧಿವಿಧಾನಗಳು ನೆರವೇರಿದವು. ಹಳೇನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಗುರುಗಳಾದ ಫಾದರ್ ಸ್ಟೀವನ್ ಡೇಸಾರವರಿಂದ ಪ್ರಭೋದನೆ, ಶಿವಮೊಗ್ಗ ಕ್ಷೇತ್ರದ ಗುರು ಶ್ರೇಷ್ಠರಾದ ಫಾದರ್ ಸ್ಟ್ಯಾನಿ ಡಿಸೋಜ, ಫಾದರ್ ಸ್ಟೀವನ್ ಅಲ್ಬುಕರ್ಕ್‌ರವರಿಂದ ಆಶೀರ್ವಚನ ನೀಡಲಾಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯ ನೆರವೇರಿತು. 
    ಧರ್ಮಕೇಂದ್ರದ ಗುರುಗಳಾದ ಫಾದರ್ ಸಂತೋಷ್ ಅಲ್ ಮೇಡಾ, ನೆರೆಯ ಧರ್ಮಕೇಂದ್ರದ ಗುರುಗಳು, ಸೈಂಟ್ ಚಾರ್ಲ್ಸ್ ಸೈಂಟ್ ಡೊಮಿನಿಕ್ ಧರ್ಮಭಗಿನಿಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.