![](https://blogger.googleusercontent.com/img/a/AVvXsEj1mmWISkOBhl6dNy-yZ4TGJpx62qOWeeCk6E6Js7vey62AYFv61DTA5dJ65ZwTB18xmZUzYP9nd-su2eNkGgJF9FbZ57QjMzXY9k_c1Bw4w3M0Tu-aurv2u3bU20lwbHTPInQ7VJRAGeFM8QRcwbpRg_GiiIwrx67HIdg919RPO2mCqaDhYI6F23_7SKbM=w400-h266-rw)
ಭದ್ರಾವತಿ ನಗರದ ನಿವಾಸಿ, ಕರ್ನಾಟಕ ಯೋಗ ರತ್ನ ಬಿ.ಓ ಸುದರ್ಶನ್ ೪೯ನೇ ಸಬ್-ಜೂನಿಯರ್ ಮತ್ತು ಜೂನಿಯರ್ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ.
ಭದ್ರಾವತಿ : ನಗರದ ನಿವಾಸಿ, ಕರ್ನಾಟಕ ಯೋಗ ರತ್ನ ಬಿ.ಓ ಸುದರ್ಶನ್ ೪೯ನೇ ಸಬ್-ಜೂನಿಯರ್ ಮತ್ತು ಜೂನಿಯರ್ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಯೋಗ ಫೆಡರೇಷನ್ ಆಫ್ ಇಂಡಿಯ ಹಾಗೂ ಹಿಮಾಚಲ ಯೋಗ ಸಂಸ್ಥೆ ವತಿಯಿಂದ ಹಿಮಾಚಲ ಪ್ರದೇಶದ ಊನ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ೪೯ನೇ ಸಬ್-ಜೂನಿಯರ್ ಮತ್ತು ಜೂನಿಯರ್ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಸಂಯೋಜಕರಾಗಿ ಮತ್ತು ತೀರ್ಪುಗಾರರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ.
ಇವರು ಏಷ್ಯನ್ ಯೋಗ ಫೆಡರೇಷನ್ ಆಶ್ರಯದಲ್ಲಿ ಮುಂದಿನ ವರ್ಷ ೨೦೨೫ ಜನವರಿ ತಿಂಗಳಿನಲ್ಲಿ ಸಿಂಗಾಪುರದಲ್ಲಿ ನಡೆಯಲಿರುವ ೧೦ನೇ ಏಷ್ಯನ್ ಯೋಗ ಕ್ರೀಡಾ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾರತೀಯ ತಂಡ ಪ್ರತಿನಿಧಿಸುತ್ತಿದ್ದು, ಅಲ್ಲದೆ ಏಷ್ಯದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಸುದರ್ಶನ್ ಅವರನ್ನು ಯೋಗ ಫೆಡರೇಷನ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷೆ ಇಂದು ಅಗರ್ವಾಲ್ ಸನ್ಮಾನಿಸಿದರು. ಹಿಮಾಚಲ ಪ್ರದೇಶದ ಸಂಸತ್ ಸದಸ್ಯ, ಕೇಂದ್ರ ಕ್ರೀಡಾ ಮತ್ತು ಯುವಜನ ಮಾಜಿ ಸಚಿವ ಅನುರಾಗ ಠಾಕೂರ್ ಮತ್ತು ಏಷ್ಯಯನ್ ಯೋಗ ಫೆಡರೇಷನ್ ಅಧ್ಯಕ್ಷ ಅಶೋಕ್ ಕುಮಾರ್ ಅಗರ್ವಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದರ್ಶನ್‌ರವರು ನಗರದಲ್ಲಿ ಬಾಲ್ಯದಿಂದಲೂ ಸುಮಾರು ೩೦ ವರ್ಷಗಳಿಂದ ಯೋಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ೧೯೮೯ ರಿಂದ ೨೦೦೦ರವರೆಗೆ ಯೋಗ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಹಲವಾರು ಪದಕಗಳನ್ನು ಗಳಿಸಿ ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಇವರು ಪ್ರಸ್ತುತ ಬೆಂಗಳೂರಿನಲ್ಲಿ ಬಿಎಸ್‌ಕೆ ೩ ಹಂತದಲ್ಲಿ ವೈಐಸಿ-ವಿಐಎಎಸ್‌ಎ ಶಿಕ್ಷಕರ ತರಬೇತಿ ನೀಡುತ್ತಿದ್ದು, ಅಲ್ಲದೆ ಡಾ|| ಬಿ.ಕೆ.ಎಸ್ ಅಯ್ಯಂಗಾರ್ ಯೋಗ ತರಗತಿಗಳನ್ನು ಕೂಡಾ ನಡೆಸುತ್ತಿದ್ದಾರೆ. ಇವರನ್ನು ನಗರದ ಯೋಗ ತರಬೇತಿದಾರರು, ಯೋಗ ಅಭಿಮಾನಿಗಳು, ಗಣ್ಯರು ಅಭಿನಂದಿಸಿದ್ದಾರೆ.