Tuesday, June 14, 2022

ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ವಿಶಿಷ್ಟವಾಗಿ ಪರಿಸರ ದಿನ ಆಚರಣೆ

ಸುಮಾರು ೬೨೫ ಸಸಿಗಳನ್ನು ವಿತರಿಸಿ ನೆಡಲು ಪ್ರೋತ್ಸಾಹ

    ಭದ್ರಾವತಿ, ಜೂ. ೧೪ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ, ಸೈಲ್ ಸ್ವರ್ಣ ಜಯಂತಿ ಮತ್ತು ವಿಶ್ವ ಪರಿಸರ ದಿನಾಚರಣೆ ವಿಶಿಷ್ಟವಾಗಿ ಆಚರಿಸಲಾಯಿತು.
    ತಹಸೀಲ್ದಾರ್ ಆರ್. ಪ್ರದೀಪ್, ಪೊಲೀಸ್ ಉಪಾಧೀಕ್ಷಕ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ನಗರಸಭೆ ಪೌರಾಯುಕ್ತ ಮನುಕುಮಾರ್, ವಲಯ ಅರಣ್ಯಾಧಿಕಾರಿ ಕೆ.ಆರ್ ರಾಜೇಶ್ ಮತ್ತು ಮನೋವೈದ್ಯ ಡಾ. ಹರೀಶ ದೇಲಂತಬೆಟ್ಟು ಸೇರಿದಂತೆ ನಗರದ ವಿವಿಧ ಗಣ್ಯರನ್ನು ಆಹ್ವಾನಿಸುವ ಜೊತೆಗೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ,  ಮುಖ್ಯ ಮಹಾವ್ಯವಸ್ಥಾಪಕ(ಕಾಯಾಚರಣೆ) ಕೆ.ಎಸ್ ಸುರೇಶ್, ಪ್ರಭಾರಿ ಮುಖ್ಯ ವ್ಯವಸ್ಥಾಪಕರ (ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ ಚಕ್ರವರ್ತಿ, ಮುಖ್ಯ ವ್ಯವಸ್ಥಾಪಕರು(ನಗರಾಡಳಿತ) ಮೋಹನ್‌ರಾಜ್ ಶೆಟ್ಟಿ, ಮುಖ್ಯ ವ್ಯವಸ್ಥಾಪಕ(ಪರಿಸರ ನಿರ್ವಹಣೆ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗ) ಡಿ. ಲೋಕೇಶ್ವರ್, ಮುಖ್ಯ ವ್ಯವಸ್ಥಾಪಕ(ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ಹಾಗು ಸಹಾಯಕ ಮುಖ್ಯ ವ್ಯವಸ್ಥಾಪಕ(ನಗರಾಡಳಿತ ಮತ್ತು ಅಗ್ನಿಶಾಮಕ ಸೇವೆಗಳು) ಉಮೇಶ್ ಮಧುಕರ್ ಉಕೆ ಸೇರಿದಂತೆ ಇನ್ನಿತರರು ಒಟ್ಟು ಸುಮಾರು ೫೦ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
    ಅಲ್ಲದೆ ಹಲಸು, ಮಾವು, ಜಾಮೂನ್, ಪೇರಲ, ಹೊಂಗೆ, ಬಿಲ್ವ, ನುಗ್ಗೆ, ಬೇವು, ಶ್ರೀಗಂಧ, ರಕ್ತಚಂದನ, ಕರಿಬೇವು, ನಿಂಬೆ, ಕಿತ್ತಳೆ, ಬೆಟ್ಟದ ನೆಲ್ಲಿಕಾಯಿ, ಬಿದಿರು ಇತ್ಯಾದಿ ಸುಮಾರು ೬೨೫ ಸಸಿಗಳನ್ನು ವಿತರಿಸಲಾಯಿತು.
     ವಿಐಎಸ್‌ಎಲ್ ಟೆನ್ನಿಸ್ ಕ್ಲಬ್ ಮತು ಸಹಕಾರಿ ಬ್ಯಾಂಕ್‌ಗೆ ೨೮ ಸಸಿಗಳನ್ನು, ವಿಐಎಸ್‌ಎಲ್ ಉದ್ಯೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ೨೨೫ ಸಸಿಗಳನ್ನು, ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ೪೦ ಸಸಿಗಳನ್ನು, ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ೪೦ ಸಸಿಗಳನ್ನು ಹಾಗು ವಿಐಎಸ್‌ಎಲ್ ನಗರಾಡಳಿತ ಇಲಾಖೆಗೆ ೨೩೨ ಸಸಿಗಳನ್ನು ವಿತರಿಸಿ ಸಸಿಗಳನ್ನು ನೆಡುವ ಮೂಲಕ ಪೋಷಿಸಲು ಕರೆ ನೀಡಲಾಯಿತು. ಈ ಬಾರಿ ವಿಐಎಸ್‌ಎಲ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.  


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ, ಸೈಲ್ ಸ್ವರ್ಣ ಜಯಂತಿ ಮತ್ತು ವಿಶ್ವ ಪರಿಸರ ದಿನಾಚರಣೆ ವಿಶಿಷ್ಟವಾಗಿ ಆಚರಿಸಲಾಯಿತು. ನಗರದ ವಿವಿಧ ಗಣ್ಯರನ್ನು ಆಹ್ವಾನಿಸಿ ಸಸಿಗಳನ್ನು ನೆಡಲಾಯಿತು.


ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪೂರಕ ಸ್ಪಂದನೆ

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣ. 
    ಭದ್ರಾವತಿ, ಜೂ. ೧೪ : ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಿ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಲ್ಲಿಸಲಾಗಿದ್ದ ಮನವಿಗೆ ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗದ ಆಯುಕ್ತ ಅನ್ಬುಕುಮಾರ್ ಅವರು ಪೂರಕವಾಗಿ ಸ್ಪಂದಿಸಿದ್ದಾರೆಂದು ಭದ್ರಾವತಿ ಕ್ಷೇತ್ರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಜಿ.ಟಿ ಬಸವರಾಜ್ ಹಾಗು ಕಾರ್ಯದರ್ಶಿ ಡಿ. ನರಸಿಂಹಮೂರ್ತಿ ತಿಳಿಸಿದ್ದಾರೆ.
    ವೇದಿಕೆ ವತಿಯಿಂದ ಇತ್ತೀಚೆಗೆ ಸುಮಾರು ೧೧ ಬೇಡಿಕೆಗಳನ್ನು ಈಡೇರಿಸುವಂತೆ ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗದ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಆಯುಕ್ತರು, ನಗರ ವ್ಯಾಪ್ತಿಯಲ್ಲಿ ಸಂಚರಿಸಲು ೨ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ, ಕೇಂದ್ರಿಯ ವಿಭಾಗದಿಂದ ಅನುಮತಿ ಪಡೆದು ಭದ್ರಾವತಿ ಡಿಪೋದಿಂದ ಮಣಿಪಾಲ್, ಉಡುಪಿಗೆ ಜುಲೈ ತಿಂಗಳಿನಲ್ಲಿ ಬಸ್ ಸಂಚಾರ ವ್ಯವಸ್ಥೆ, ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮಳೆಗಾಲದಲ್ಲಿ ನೀರು ಸೋರಿಕೆಯಾಗದಂತೆ ಕಟ್ಟಡದ ದುರಸ್ತಿ ಕಾರ್ಯ ಕೈಗೊಳ್ಳುವುದು, ವಿಕಲಚೇತನರಿಗೆ ಹಾಗು ಹಿರಿಯ ನಾಗರೀಕರಿಗೆ ಅನುಕೂಲವಾಗುವಂತೆ ಶೌಚಾಲಯಗಳಲ್ಲಿ ವೆಸ್ಟ್ರನ್ ಕಮೋಡ್‌ಗಳನ್ನು ಅಳವಡಿಸುವುದು, ವಿದ್ಯುತ್ ದೀಪಗಳ ದುರಸ್ತಿ ಹಾಗು ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಗೃಹ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
    ಸಾರ್ವಜನಿಕರ ಹಿತದೃಷ್ಟಿಯಿಂದ ವೇದಿಕೆ ವತಿಯಿಂದ ಸಲ್ಲಿಸಲಾಗಿದ್ದ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗದ ಆಯುಕ್ತ ಅನ್ಬುಕುಮಾರ್ ಅವರಿಗೆ ಜಿ.ಟಿ ಬಸವರಾಜ್ ಹಾಗು ಡಿ. ನರಸಿಂಹಮೂರ್ತಿ ಕೃತಜ್ಞತೆ ಸಲ್ಲಿಸಿದ್ದಾರೆ.

ಸತ್ಯಲಕ್ಷ್ಮಿ ನಿಧನ

ಸತ್ಯಲಕ್ಷ್ಮಿ 
    ಭದ್ರಾವತಿ ಜೂ ೧೪ : ಇಲ್ಲಿನ ಗಾಂಧಿನಗರದ ನಿವಾಸಿ ಸತ್ಯಲಕ್ಷ್ಮಿ(೬೯) ಸೋಮವಾರ ರಾತ್ರಿ  ನಿಧನ ಹೊಂದಿದ್ದು, ಇವರ ಅಂತ್ಯಕ್ರಿಯೆ ಮಂಗಳವಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
    ಸತ್ಯಲಕ್ಷ್ಮಿ ಅವರಿಗೆ ಪತಿ, ಓರ್ವ ಪುತ್ರಿ, ಇಬ್ಬರು ಪುತ್ರರು ಇದ್ದರು. ಇವರ ನಿಧನಕ್ಕೆ ಆರ್ಯವೈಶ್ಯ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.