Wednesday, December 1, 2021

ಹೊಸ ಸೇತುವೆ ರಸ್ತೆಗೆ ಪುನೀತ್‌ರಾಜ್‌ಕುಮಾರ್ ಹೆಸರು ನಾಮಕರಣಗೊಳಿಸಿ : ಶಾಸಕರಿಗೆ ಮನವಿ


ಸಾಮಾಜಿಕ ಕಳಕಳಿಯ ಅಪರೂಪದ ವ್ಯಕ್ತಿತ್ವ ಹೊಂದಿದ್ದ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ಸ್ಮರಣಾರ್ಥ ಭದ್ರಾವತಿಯಲ್ಲಿ ಹೊಸ ಸೇತುವೆ ರಸ್ತೆಗೆ ಪುನೀತ್ ರಾಜ್‌ಕುಮಾರ್ ಹೆಸರು ನಾಮಕರಣಗೊಳಿಸುವಂತೆ ಒತ್ತಾಯಿಸಿ  ಶ್ರೀ ನಾರಾಯಣ ಗುರು ವಿಚಾರ ವೇದಿಕೆ ವತಿಯಿಂದ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೧:   ಸಾಮಾಜಿಕ ಕಳಕಳಿಯ ಅಪರೂಪದ ವ್ಯಕ್ತಿತ್ವ ಹೊಂದಿದ್ದ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ಸ್ಮರಣಾರ್ಥ ನಗರದ ಹೊಸ ಸೇತುವೆ ರಸ್ತೆಗೆ ಪುನೀತ್ ರಾಜ್‌ಕುಮಾರ್ ಹೆಸರು ನಾಮಕರಣಗೊಳಿಸುವಂತೆ ಒತ್ತಾಯಿಸಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ವತಿಯಿಂದ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
    ಈಗಾಗಲೇ ವೇದಿಕೆ ವತಿಯಿಂದ ಪುನೀತ್ ರಾಜ್‌ಕುಮಾರ್ ಹೆಸರು ನಾಮಕರಣಗೊಳಿಸುವಂತೆ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ ಹಾಗು ಪೌರಾಯುಕ್ತ ಕೆ. ಪರಮೇಶ್ ಅವರಿಗೂ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಇದೀಗ ಶಾಸಕರಿಗೂ ಮನವಿ ಸಲ್ಲಿಸಿದ್ದು, ಪುನೀತ್ ರಾಜ್‌ಕುಮಾರ್ ಹೆಸರು ಅಜರಾಮರವಾಗಿಸಲು ಹೊಸ ಸೇತುವೆ ರಸ್ತೆಗೆ ಅವರ ಹೆಸರನ್ನು ನಾಮಕರಣಗೊಳಿಸಲು ಮನವಿ ಮಾಡಲಾಗಿದೆ.
    ವೇದಿಕೆ ಅಧ್ಯಕ್ಷ ನಟರಾಜ್, ಗೌರವಾಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಪ್ರಮುಖರಾದ ಲೋಕನಾಥ್, ವಸಂತ್ ಪೂಜಾರಿ, ಕಾರ್ಯದರ್ಶಿ ಶರವಣ ಹಾಗೂ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕನ್ನಡ ನಾಡಿನ ಇತಿಹಾಸ ಅರಿತುಕೊಳ್ಳದ ಹೊರತು ಭಾಷೆಯ ಮಹತ್ವ ತಿಳಿಯದು : ಡಾ. ಎಚ್.ವಿ ನಾಗರಾಜ್


ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಮಹಿಳಾ ಸೇವಾ ಸಮಾಜದವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಭದ್ರಾವತಿ, ಡಿ. ೧: ಕನ್ನಡ ನಾಡಿನ ಇತಿಹಾಸ ಅರಿತುಕೊಂಡಾಗ ಮಾತ್ರ ಭಾಷೆಯ ಮಹತ್ವ ತಿಳಿದುಕೊಳ್ಳಲು ಸಾಧ್ಯ ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಡಾ. ಎಚ್.ವಿ ನಾಗರಾಜ್ ಹೇಳಿದರು.
    ಅವರು ಹಳೇನಗರ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಮಹಿಳಾ ಸೇವಾ ಸಮಾಜದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಇತಿಹಾಸವನ್ನು ತಿಳಿಯದಿದ್ದರೆ ಇತಿಹಾಸವನ್ನು ನಿರ್ಮಿಸಲು ಸಾಧ್ಯವಿಲ್ಲ. ಕನ್ನಡ ಭಾಷೆಯ ಬೆಳೆವಣಿಗೆಯಲ್ಲಿ ನಾಡಿನ ವಿದ್ವಾಸಂರು, ಇತಿಹಾಸಕಾರರು, ಲೇಖಕರುಗಳ ಶ್ರಮವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದರು.
    ಜಾಗತೀಕರಣದ ಪ್ರಭಾವ ಎಲ್ಲಾ ಭಾಷೆಗಳ ಮೇಲೂ ತನ್ನ ಕರಿನೆರಳನ್ನು ಬೀರಿದೆ. ಕಾರ್ಪೋರೇಟ್ ಸಂಸ್ಕೃತಿ ಭಾಷೆಗೆ ಧಕ್ಕೆಯನ್ನುಂಟು ಮಾಡಿದ್ದು, ಇದರ ಪರಿಣಾಮದಿಂದಾಗಿ ಭಾಷೆಯ ಮೌಲ್ಯ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತ ಕನ್ನಡದಲ್ಲಿ ಉತ್ತಮ ಸಾಹಿತ್ಯ ಲೇಖನಗಳು ಹೊರಬರುತ್ತಿಲ್ಲ. ಬೇರೆ ಭಾಷೆಗಳ ಸಾಹಿತ್ಯಗಳು ಕನ್ನಡ ಭಾಷೆಗೆ ಭಾಷಾಂತರವಾಗಬೇಕಿದೆ. ಇಂತಹ ಸಂದರ್ಭದಲ್ಲಿ ಸ್ಪ್ಪರ್ಧತ್ಮಕವಾಗಿ ಭಾಷೆಯನ್ನು ಬೆಳೆಸಬೇಕಿದೆ. ಅಂದು ಕನ್ನಡ ಏಕೀಕರಣಕ್ಕಾಗಿ ಹೋರಾಡಿದ ನಾವು ಇಂದು ಅದೇ ಕನ್ನಡ ಭಾಷೆಯ ಉಳಿವಿಗಾಗಿ, ಬೆಳವಣಿಗೆಗಾಗಿ ಹೋರಾಟ ಮಾಡಬೇಕಾದಂತಹ ಅನಿವಾರ್ಯತೆ ಎದುರಾಗಿದೆ ಎಂದರು.  
    ಕನ್ನಡ ಭಾಷೆ ಉಳಿವು, ಬೆಳವಣಿಗೆಗಾಗಿ ರಾಜ್ಯ ಸರ್ಕಾರ ಸುಮಾರು ೨೦೦ಕ್ಕೂ ಹೆಚ್ಚಿನ ಆದೇಶಗಳನ್ನು ಹೊರಡಿಸಿದೆ. ಆದರೆ ಜನರು ಸ್ವ ಇಚ್ಚೆಯಿಂದ ಭಾಷೆಯನ್ನು ಬಳಸುವಲ್ಲಿ ಪಾಲ್ಗೊಳ್ಳದ ಹೊರತು ಭಾಷೆಯ ಬೆಳವಣಿಗೆ ಅಸಾಧ್ಯ ಎಂದರು.
    ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತೆ ಅನ್ನಪೂರ್ಣ ಸತೀಶ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
    ಆರಂಭದಲ್ಲಿ ಪುಟಾಣಿ ಮಕ್ಕಳಾದ ಬಿ.ಸಿ ಶಾನ್ವಿರಾವ್, ಬಿ.ಜೆ ರೊಚನಾರಾವ್, ಬಿ.ಜೆ ಕಾಶ್ವಿರಾವ್, ಸಾನ್ವಿ, ಆರೂಷ್ ಹುಲುಮಂಡೇರಿ, ಪಿ. ಧ್ಯಾನ್, ಮೊನಾಲ್ ಕೆ ಗೌಡ, ಕೃತಿ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷೆ ಹೇಮಾವತಿ ವಿಶ್ವನಾಥರಾವ್ ಅಧ್ಯಕ್ಷತೆ ವಹಿಸಿದ್ದರು.  ಕಮಲ ಕುಮಾರಿ, ಲತಾ ಗೋವಿಂದ ಪ್ರಾರ್ಥಿಸಿದರು.  ಶೋಭಾ ಗಂಗರಾಜ್ ಸ್ವಾಗತಿಸಿ ಶಾರದ ಶ್ರೀನಿವಾಸ್ ಅತಿಥಿ ಪರಿಚಯ ಮಾಡಿಕೊಟ್ಟರು. ಜಯಂತಿ ನಾಗರಾಜ್ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಕಮಲ ಕುಮಾರಿ ವಂದಿಸಿದರು.  

ಡಿ.೨ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಡಿ. ೧: ಮೆಸ್ಕಾಂ ಕೂಡ್ಲಿಗೆರೆ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿ ಕೊಂಡಿರುವುದರಿಂದ ನ.೨ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
     ಬದನೆಹಾಳು, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಹಳ್ಳಿ, ಕಲ್ಪನಹಳ್ಳಿ, ಕೂಡ್ಲಿಗೆರೆ, ಅರಳಿಹಳ್ಳಿ, ಗುಡ್ಡದ ನೇರಲಕೆರೆ, ಕಲ್ಲಾಪುರ, ದಾನವಾಡಿ, ಡಿ.ಬಿ ಹಳ್ಳಿ, ಅರಕೆರೆ,  ಮಾರಶೆಟ್ಟಿಹಳ್ಳಿ, ಕಲ್ಲಿಹಾಳ್, ಅರಬಿಳಚಿ ತಿಮ್ಲಾಪುರ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ಕಟ್ಟಡ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ನಾಗರಾಜ್ ನಿಧನ


ನಾಗರಾಜ್
    ಭದ್ರಾವತಿ, ಡಿ. ೧: ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ತಾಲೂಕು ಶಾಖೆ ಮಾಜಿ ಅಧ್ಯಕ್ಷ, ಆಂಜನೇಯ ಅಗ್ರಹಾರ ಕೂಲಿಬ್ಲಾಕ್ ಶೆಡ್ ನಿವಾಸಿ ನಾಗರಾಜ್(೬೫) ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರನನ್ನು ಹೊಂದಿದ್ದರು. ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಸಮೀಪದಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಹಲವಾರು ವರ್ಷಗಳಿಂದ ಯೂನಿಯನ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
    ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಜೊತೆಗೆ ಮಾದರಿ ಸಂಘಟನೆಯಾಗಿ ಯೂನಿಯನ್ ಮುನ್ನಡೆಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದರು.  ಇವರ ನಿಧನಕ್ಕೆ ಯೂನಿಯನ್ ಜಿಲ್ಲಾ ಹಾಗು ತಾಲೂಕು     ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಆರ್. ನಾರಾಯಣಸ್ವಾಮಿ ನಾಯ್ಡು


ಆರ್. ನಾರಾಯಣಸ್ವಾಮಿ

    ಭದ್ರಾವತಿ, ಡಿ. ೧: ನಗರದ ನಿವಾಸಿ, ಕೃಷಿಕ ಹಾಗು ಆಲೆಮನೆ ಮಾಲೀಕ ಆರ್. ನಾರಾಯಣಸ್ವಾಮಿ ನಾಯ್ಡು(೬೯) ನಿಧನ ಹೊಂದಿದರು.
    ಕಬ್ಬಿನ ಗಾಣ ಹೊಂದಿರುವ ರೈತರ ಸಹಕಾರ ಸಂಘದ ಪ್ರಧಾನ ಕಾರ್ಯದರ್ಶಿ, ಪುತ್ರ ಎನ್. ಶ್ರೀನಿವಾಸ್ ಹಾಗು ಪತ್ನಿ ಮತ್ತು ಮೂವರು ಪುತ್ರಿಯರನ್ನು ಹೊಂದಿದ್ದರು. ನಾಯ್ಡು ಅವರು ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿ ನೆರವೇರಿಸಲಾಯಿತು.
    ಇವರ ನಿಧನಕ್ಕೆ ಆಲೆಮನೆ ಮಾಲೀಕರು ಹಾಗು ನಾಯ್ಡು ಸಮಾಜದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.