Saturday, December 31, 2022

ಪತ್ರಕರ್ತರಿಗೆ ನೂತನ ವರ್ಷದ ಡೈರಿ ವಿತರಣೆ

ಪ್ರತಿವರ್ಷದಂತೆ ಈ ಬಾರಿ ಸಹ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೂತನ ವರ್ಷದ ಡೈರಿ ಬಿಡುಗಡೆಗೊಂಡಿದ್ದು, ಭದ್ರಾವತಿ ತಾಲೂಕು ಯೋಜನಾಧಿಕಾರಿ ಪ್ರಕಾಶ್‌ನಾಯ್ಕರವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ವಿತರಿಸಿದರು.
    ಭದ್ರಾವತಿ, ಡಿ. ೩೧: ಪ್ರತಿವರ್ಷದಂತೆ ಈ ಬಾರಿ ಸಹ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೂತನ ವರ್ಷದ ಡೈರಿ ಬಿಡುಗಡೆಗೊಂಡಿದ್ದು, ತಾಲೂಕು ಯೋಜನಾಧಿಕಾರಿ ಪ್ರಕಾಶ್‌ನಾಯ್ಕರವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ವಿತರಿಸಿದರು.
    ಶನಿವಾರ ಸಂಜೆ ಹಳೇನಗರದ ಪ್ರತಿಕಾಭವನದಲ್ಲಿ ಡೈರಿಯನ್ನು ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅವರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.  

ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಜ.೨ರಂದು ವೈಕುಂಠ ಏಕಾದಶಿ


ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಜ.೨ ಮತ್ತು ೩ರಂದು ವೈಕುಂಠ ಏಕಾದಶಿ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಮುಜರಾಯಿ ಅಧಿಕಾರಿ, ತಹಸೀಲ್ದಾರ್ ಆರ್. ಪ್ರದೀಪ್ ತಿಳಿಸಿದರು.
    ಭದ್ರಾವತಿ, ಡಿ. ೩೧: ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಜ.೨ ಮತ್ತು ೩ರಂದು ವೈಕುಂಠ ಏಕಾದಶಿ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಮುಜರಾಯಿ ಅಧಿಕಾರಿ, ತಹಸೀಲ್ದಾರ್ ಆರ್. ಪ್ರದೀಪ್ ತಿಳಿಸಿದರು.
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತಾಲೂಕು ಆಡಳಿತ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸಹಯೋಗದೊಂದಿಗೆ ಕೈಗೊಂಡಿದೆ. ಈ ಬಾರಿ ದೇವರ ದರ್ಶನಕ್ಕೆ ಯಾವುದೇ ಪಾಸ್ ವ್ಯವಸ್ಥೆ ಕಲ್ಪಿಸಿಲ್ಲ. ಬದಲಾಗಿ ಮುಜರಾಯಿ ಇಲಾಖೆ ವತಿಯಿಂದ ರು. ೫೦೦ ಮೌಲ್ಯದ ರಶೀದಿ ಪಡೆದು ನೇರ ದರ್ಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
    ಸರದಿ ಸಾಲಿನಲ್ಲಿ ಭಕ್ತರು ದೇವರ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹಳೇನಗರದ ಶ್ರೀ ಹಳದಮ್ಮ ದೇವಸ್ಥಾನದ ಬಳಿ ಹಾಗು ಬಸವೇಶ್ವರ ವೃತ್ತದಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಈ ಬಾರಿ ದೇವಸ್ಥಾನ ಆವರಣದಲ್ಲಿ ಸಿ.ಸಿ ಕ್ಯಾಮೇರಾ ಅಳವಡಿಸಲಾಗುವುದು. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಅಳವಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
    ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ.ಜಿ ಮಾರುತಿ ಹಾಗು ಸಹಾಯಕ ಅರ್ಚಕ ಎಸ್. ಶ್ರೀನಿವಾಸನ್‌ರವರು ಮಾತನಾಡಿ, ಜ.೨ರಂದು ಬೆಳಿಗ್ಗೆ ೪.೩೦ಕ್ಕೆ ಪ್ರಾಕಾರ ಉತ್ಸವ, ಪರಮಪದ ಮಹಾದ್ವಾರದ ಪೂಜೆ, ಶ್ರೀ ವೈಕುಂಠನಾಥನ ದರ್ಶನ ನಂತರ ಶ್ರೀ ಗೋದಾದೇವಿ ಅಮ್ಮನವರ ಉತ್ಸವದೊಂದಿಗೆ ನಗರದ ಎಲ್ಲಾ ಭಜನಾ ಮಂಡಳಿಯವರಿಂದ ನಗರ ಸಂಕೀರ್ತನೆ. ಶ್ರೀ ಕೃಷ್ಣ ಗೆಳೆಯರ ಬಳಗದಿಂದ ಚಂಡೇವಾದ್ಯ ನಡೆಯಲಿದೆ. ಜ.೩ರಂದು ಬೆಳಿಗ್ಗೆ ೪.೩೦ಕ್ಕೆ ನಿತ್ಯಪೂಜೆ, ಮಹಾಮಂಗಳಾರತಿ. ಸಂಜೆ ೬ಕ್ಕೆ ಮುಕ್ಕೋಟಿ ದ್ವಾದಶಿ ಪ್ರಯುಕ್ತ ರಥಬೀದಿಯಲ್ಲಿ ಶ್ರೀ ಸ್ವಾಮಿಯವರ ಉತ್ಸವ ವೈಕುಂಠನಾಥನ ದರ್ಶನ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
    ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಆರ್. ರವಿ, ವಿಶ್ವೇಶ್ವರರಾವ್ ಗಾಯ್ಕವಾಡ್, ಕೆ. ಗಜೇಂದ್ರ, ಎಸ್. ಸತೀಶ, ಆಶಾ ಪುಟ್ಟಸ್ವಾಮಿ, ಕೆ. ಲತಾ ಮತ್ತು ಬಿ.ಎಚ್ ರೇಣುಕಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಯಮ್ಮ ನಿಧನ

ಜಯಮ್ಮ
    ಭದ್ರಾವತಿ, ಡಿ. ೩೧ : ತಾಲೂಕಿನ ವೀರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ, ರಾಮನಗರ ನಿವಾಸಿ ಎಂ.ಎಲ್ ಯಶೋಧರಯ್ಯನವರ ತಾಯಿ ಜಯಮ್ಮ(೮೩) ನಿಧನ ಹೊಂದಿದರು.
      ೫ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಇದ್ದರು. ಇವರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ರಾಮನಗರ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ವೀರಾಪುರ ಗ್ರಾಮ ಪಂಚಾಯಿತಿ, ರಾಮನಗರ ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಯ್ಯಪ್ಪ ಸ್ವಾಮಿ ದೀಪೋತ್ಸವದ ಮೂಲಕ ಸೌಹಾರ್ದತೆ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ೫೧ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡು ದಾನಿಗಳು, ಸೇವಾಕರ್ತರನ್ನು ಸನ್ಮಾನಿಸಿದರು.
    ಭದ್ರಾವತಿ, ಡಿ. ೩೧ : ಅಯ್ಯಪ್ಪ ಸ್ವಾಮಿ ದೀಪೋತ್ಸವದ ಮೂಲಕ ಎಲ್ಲರನ್ನು ಒಗ್ಗೂಡಿಸುವ ಪ್ರಯತ್ನ ನಡೆಯುತ್ತಿದ್ದು, ಸೌಹಾರ್ದತೆಯಿಂದ ಪ್ರತಿಯೊಬ್ಬರು ಬದುಕುವಂತಾಗಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಶನಿವಾರ ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ ೫೧ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
    ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ಪ್ರತಿವರ್ಷ ವಿಜೃಂಭಣೆಯಿಂದ ದೀಪೋತ್ಸವ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಅಯ್ಯಪ್ಪಸ್ವಾಮಿ ಕೃಪೆಯಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವ ಜೊತೆಗೆ ಸಮಿತಿಗೆ ಎಲ್ಲಾ ರೀತಿಯ ಸಹಕಾರ ನೀಡುವುದು ಭರವಸೆ ನೀಡಿದರು.


ಭದ್ರಾವತಿ ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ೫೧ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ ಅಂಗವಾಗಿ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.
    ಪ್ರಮುಖರಾದ ಬಿ.ಕೆ ಜಗನ್ನಾಥ, ಟಿ. ಚಂದ್ರೇಗೌಡ, ಬಾಲಕೃಷ್ಣ, ಎಸ್. ಕುಮಾರ್, ಸುದೀಪ್‌ಕುಮಾರ್, ಬಿ.ಎಸ್ ಗಣೇಶ್, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಸ್. ಜಯಕೃಷ್ಣ, ಉಪಾಧ್ಯಕ್ಷ ವಿ. ಬಾಬು, ಪ್ರಧಾನ ಕಾರ್ಯದರ್ಶಿ ಟಿ.ಪಿ ಸುಬ್ರಮಣ್ಯ, ಕಾರ್ಯದರ್ಶಿ ಶೇಖ್ಯಾನಾಯ್ಕ, ಖಜಾಂಚಿ ರಾಮಮೊಗವೀರ, ಸದಸ್ಯರಾದ ಪಿ.ಆರ್ ಪ್ರಭಾಕರ್, ಆರ್. ರಾಧಕೃಷ್ಣನ್, ಡಿ. ಗಿರೀಶ್ ಪಿಳ್ಳೆ, ಕೆ.ಸಿ ರಾಜಶೇಖರ್, ಕೆ. ಮಧುಕುಮಾರ್ ಹಾಗು ಕೇರಳ ಸಮಾಜಂ ಹಾಗು ಮಹಿಳಾ ಘಟಕ ಮತ್ತು ಯುವ ಘಟಕದ ಪದಾಧಿಕಾರಿಗಳು ಹಾಗು ಅಯ್ಯಪ್ಪ ಸ್ವಾಮಿ ಗುರುಮೂರ್ತಿ, ಮಾಲಾಧಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು.
    ಕಾರ್ಯಕ್ರಮದಲ್ಲಿ ಸೇವಾಕರ್ತರು, ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಭಕ್ತಿಗೀತೆಗಳ ಗಾಯನ ನಡೆಯಿತು. ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.

ಆದಾಯ ಹೆಚ್ಚಿಸಿಕೊಳ್ಳುವ ಯೋಜನೆಗಳನ್ನು ರೂಪಿಸಿ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆಯಲ್ಲಿ ಆಯ-ವ್ಯಯ ಪೂರ್ವಭಾವಿ ಸಭೆಯಲ್ಲಿ ಪೌರಾಯುಕ್ತ ಎಚ್.ಎಂ ಮನುಕುಮಾರ್ ನಿರೀಕ್ಷಿತ ಆದಾಯ ಕುರಿತು ಹಾಗು ಕೈಗೊಳ್ಳಲು ಉದ್ದೇಶಿಸಲಾಗಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.  
    ಭದ್ರಾವತಿ, ಡಿ. ೩೧ :  ಆದಾಯ ಹೆಚ್ಚಿಸಿಕೊಳ್ಳುವ ಕಡೆಯ ಹೆಚ್ಚಿನ ಗಮನ ನೀಡುವ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ನಗರಸಭೆ ಆಡಳಿತಕ್ಕೆ ಸಲಹೆ ನೀಡಿದರು.
    ಶನಿವಾರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆಯ-ವ್ಯಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಅನಗತ್ಯವಾಗಿ ತೆರಿಗೆ ಹೆಚ್ಚು ಮಾಡುವ ಮೊದಲು ನಗರಸಭೆಗೆ ಆದಾಯ ಬರುವ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಕಳಪೆ ಕಾಮಗಾರಿಗಳಿಗೆ ಕಡಿವಾಣ ಹಾಕಬೇಕು. ಎಲ್ಲಾ ವಾರ್ಡ್‌ಗಳಲ್ಲೂ ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಕಲ್ಪಿಸಿಕೊಡಬೇಕು. ಎಲ್ಲೆಡೆ ನೈರ್ಮಲ್ಯ         ಕಾಪಾಡಿಕೊಳ್ಳುವ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಮನೆ ಮಾಲೀಕರ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ಎಲ್.ವಿ ರುದ್ರಪ್ಪ, ಜನ್ನಾಪುರ-ಹುತ್ತಾ ತೆರಿಗೆದಾರರ ಸಂಘದ ಅಧ್ಯಕ್ಷ ಬಿ. ಚಂದ್ರಶೇಖರಯ್ಯ, ಕೆ.ಎಂ ಸತೀಶ್, ವರ್ತಕರ ಸಂಘದ ಅಧ್ಯಕ್ಷ ಸಿ.ಎನ್ ಗಿರೀಶ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಬಿಜೆಪಿ ಮುಖಂಡ ಟಿ. ವೆಂಕಟೇಶ್ ಸೇರಿದಂತೆ ಪ್ರಮುಖರು ಸಲಹೆ-ಸೂಚನೆಗಳನ್ನು  ನೀಡಿದರು.
    ಇದಕ್ಕೂ ಮೊದಲು ಪೌರಾಯುಕ್ತ ಎಚ್.ಎಂ ಮನುಕುಮಾರ್ ಸುಮಾರು ೧೦,೩೬೫ ಲಕ್ಷ ರು. ನಿರೀಕ್ಷಿತ ಆದಾಯ ಕುರಿತು ಹಾಗು ಕೈಗೊಳ್ಳಲು ಉದ್ದೇಶಿಸಲಾಗಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಉಪಾಧ್ಯಕ್ಷ ಚನ್ನಪ್ಪ, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು.