ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ತೆರೆಯಲಾಗಿರುವ ಕೇಂದ್ರಗಳಿಗೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಚಾಲನೆ ನೀಡಿದರು.
ಭದ್ರಾವತಿ, ಜು. ೧೯ : ಕಾಂಗ್ರೆಸ್ ಸರ್ಕಾರ ಎಂದಿಗೂ ಮಹಿಳೆಯರ ಪರವಾಗಿದ್ದು, ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ಪ್ರಶಂಸೆಗೆ ಪಾತ್ರವಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಹೇಳಿದರು.
ಅವರು ಗುರುವಾರ ನಗರಸಭೆ ಸಭಾಂಗಣದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ತೆರೆಯಲಾಗಿರುವ ಕೇಂದ್ರಗಳಿಗೆ ಚಾಲನೆ ನೀಡಿದರು.
ಪ್ರಸ್ತುತ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ವಿಶೇಷವಾಗಿ ೨ ಯೋಜನೆಗಳನ್ನು ಜಾರಿಗೊಳಿಸಿದೆ. ಉಚಿತ ಬಸ್ ಪ್ರಯಾಣ ಸೇವೆ ಶಕ್ತಿ ಯೋಜನೆ ಹಾಗು ಪ್ರತಿ ಕುಟುಂಬದ ಯಜಮಾನಿಗೆ ರು. ೨೦೦೦ ನೀಡುವ ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಜನತೆ ಪರವಾಗಿ ಕಾಂಗ್ರೆಸ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿರುವ ಸರ್ಕಾರವಾಗಿದೆ. ಅತಿ ಕಡಿಮೆ ಅವಧಿಯಲ್ಲಿ ನಾಡಿನ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರುಸುತ್ತಿದೆ. ಜಾತಿ, ಧರ್ಮ, ಪಂಥ ಎಲ್ಲವನ್ನು ಮೀರಿದ ಯೋಜನೆಗಳಾಗಿವೆ. ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದರು.
ಪೌರಾಯುಕ್ತ ಮನುಕುಮಾರ್ ಮಾತನಾಡಿ, ಸರ್ಕಾರದ ಸೂಚನೆ ಮೇರೆಗೆ ಗೃಹಲಕ್ಷ್ಮಿ ಯೋಜನೆಯಡಿ ನಗರಸಭೆ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರಗಳನ್ನು ನಗರಸಭೆ ಕಛೇರಿ ಆವರಣದಲ್ಲಿ ಹಾಗು ಇತರೆಡೆ ತೆರೆಯಲಾಗಿದೆ. ಇದರ ಸದುಪಯೋಗ ಅರ್ಹರು ಪಡೆದುಕೊಳ್ಳುವಂತೆ ಕೋರಲಾಗಿದೆ.
ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಮಾಜಿ ಅಧ್ಯಕ್ಷರಾದ ಗೀತಾ ರಾಜ್‌ಕುಮಾರ್, ಅನುಸುಧಾ ಮೋಹನ್ ಪಳನಿ, ಸದಸ್ಯರಾದ ಆರ್. ಮೋಹನ್ ಕುಮಾರ್, ಜಾರ್ಜ್, ಬಸವರಾಜ್ ಬಿ. ಆನೆಕೊಪ್ಪ, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕೃ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.