ಬುಧವಾರ, ಜುಲೈ 27, 2022

ಕೇಂದ್ರ ಸರ್ಕಾರದಿಂದ ಪೊಲೀಸ್, ಇ.ಡಿ ದುರ್ಬಳಕೆ : ವಿನಾಕಾರಣ ಕಾಂಗ್ರೆಸ್ ನಾಯಕರಿಗೆ ಕಿರುಕುಳ

ಜಾರಿ ನಿರ್ದೇಶನಾಲಯ(ಇ.ಡಿ) ಮತ್ತು ಪೊಲೀಸ್ ಇಲಾಖೆಯನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುವ ಮೂಲಕ ವಿನಾಕಾರಣ ಕಾಂಗ್ರೆಸ್ ಪಕ್ಷದ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಭದ್ರಾವತಿಯಲ್ಲಿ ಯುವ ಕಾಂಗ್ರೆಸ್ ಗ್ರಾಮಾಂತರ ಘಟಕದಿಂದ ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ. ಜು, ೨೭: ಜಾರಿ ನಿರ್ದೇಶನಾಲಯ(ಇ.ಡಿ) ಮತ್ತು ಪೊಲೀಸ್ ಇಲಾಖೆಯನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುವ ಮೂಲಕ ವಿನಾಕಾರಣ ಕಾಂಗ್ರೆಸ್ ಪಕ್ಷದ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಗ್ರಾಮಾಂತರ ಘಟಕದಿಂದ ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಪ್ರಮುಖರು ಮಾತನಾಡಿ, ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಇದನ್ನು ವಿರೋಧಿಸಿ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಯವರು ಮೌನ ಪ್ರತಿಭಟನೆಗೆ ಮುಂದಾದಾಗ ಅವರನ್ನು ಬಂಧಿಸಲು ಪೊಲೀಸರು ಯತ್ನಿಸಿದ್ದು, ಈ ಸಂದರ್ಭದಲ್ಲಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಬಿ. ವಿ. ಶ್ರೀನಿವಾಸ್ ಅವರ ಹಲ್ಲೆ ನಡೆಸಿ ಬಂಧಿಸಲಾಗಿದೆ ಇದನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.
    ಇ.ಡಿ ಮತ್ತು ಪೊಲೀಸ್ ಇಲಾಖೆಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ದೇಶಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು ಎಚ್ಚರಿಸಿದರು.
ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಅಫ್ತಾಬ್ ಅಹ್ಮದ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಯುವ ಮುಖಂಡ ಬಿ.ಎಸ್ ಗಣೇಶ್, ನಗರಸಭೆ ಸದಸ್ಯರಾದ ಬಿ.ಎಂ ಮಂಜುನಾಥ್(ಟೀಕು), ಬಷೀರ್ ಅಹ್ಮದ್, ಸೈಯದ್ ರಿಯಾಜ್ ಅಹ್ಮದ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಚಿನ್ ಸಿಂಧ್ಯಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣರಾಜು, ಕಾರ್ಯದರ್ಶಿಗಳಾದ ಕೇಶವ,  ನ್ಯಾಯವಾದಿ ಎಂ. ಶಿವಕುಮಾರ್. ಐಸಾಕ್ ಲಿಂಕನ್,  ಅಭಿಲಾಶ್, ತಬ್ರೆಜ್ ಖಾನ್, ರಜಿನಿ, ವಿನಯ್, ಹರೀಶ್, ಎಂ.ಡಿ ಸಜ್ಜಾದ್, ಸೈಯದ್ ಸರ್ಫರಾಜ್, ಶ್ರೀನಿವಾಸ್, ಮುನಾವರ್, ಲೋಕೇಶ್, ಉಮರ್, ನಾಗೇಶ್, ಮಂಜು, ಡೊನಾಲ್ಡ್, ಪೃಥ್ವಿರಾಜ್, ರವಿ, ಫೈಸಲ್, ಆಫೀಫ್, ಅಜ್ಗರ್, ಸಾಧಿಕ್, ಮೋನೋ ಮತ್ತು ದಿಲೀಪ್ ಕುಮಾರ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ನವೀಕರಣಗೊಂಡ ದೇವಾಲಯದ ಪ್ರಾಂಗಣ ಲೋಕಾರ್ಪಣೆ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ನವೀಕರಣಗೊಂಡ ಪ್ರಾಂಗಣವನ್ನು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೋ ಲೋಕಾರ್ಪಣೆಗೊಳಿಸಿದರು.
    ಭದ್ರಾವತಿ, ಜು. ೨೭ : ನಗರದ ಪ್ರಮುಖ ಕ್ರೈಸ್ತ ದೇವಾಲಯಗಳಲ್ಲಿ ಒಂದಾಗಿರುವ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ನವೀಕರಣಗೊಂಡ ಪ್ರಾಂಗಣವನ್ನು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೋ ಲೋಕಾರ್ಪಣೆಗೊಳಿಸಿದರು.
    ತನ್ನದೇ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡು ಬಂದಿರುವ ಅಮಲೋದ್ಭವಿ ಮಾತೆ ದೇವಾಲಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು, ಇಂಟರ್‌ಲಾಕ್ ಅಳವಡಿಕೆಯೊಂದಿಗೆ ನವೀಕರಣಗೊಳಿಸುವ ಮೂಲಕ ಪ್ರಾಂಗಣ ಮತ್ತಷ್ಟು ಆಕರ್ಷಕವಾಗಿ ಕಂಗೊಳಿಸುವಂತೆ ಮಾಡಲಾಗಿದೆ. ಲೋಕಾರ್ಪಣೆಗೊಳಿಸಿದ ಡಾ. ಫ್ರಾನ್ಸಿಸ್ ಸೆರಾವೋ ಅವರು ನವೀಕರಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


      ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ :
    ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೦೦ಕ್ಕೂ ಹೆಚ್ಚು ಅಂಕ ಪಡೆದ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
    ವೈಸಿಎಸ್/ಐಸಿವೈಎಂ, ಪೀಠ ಸೇವಕರು ಮತ್ತು ಮಹಿಳಾ ಸಂಘಟನೆಯ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ನಡೆಯಿತು.
    ದೇವಾಲಯದ ಧರ್ಮಗುರು ಫಾದರ್ ಲಾನ್ಸಿ ಡಿಸೋಜ,  ಪಾಲನ ಪರಿಷತ್ ಕಾರ್ಯದರ್ಶಿ ಅಂತೋಣಿ ವಿಲ್ಸನ್, ಡಾನ್ ಬಾಸ್ಕೋ ಕೈಗಾರಿಕಾ ತರಬೇತಿ ಸಂಸ್ಥೆ ನಿರ್ದೇಶಕ ಫಾದರ್ ಆರೋಗ್ಯ ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.