Saturday, January 7, 2023

ನ್ಯಾ. ಸದಾಶಿವ ಆಯೋಗದ ವರದಿ ವಿರೋಧಿಸಿ ಜ.೧೦ರಂದು ಬೃಹತ್ ಪ್ರತಿಭಟನೆ

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ವಿರುದ್ಧ ಜ.೧೦ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಪ್ರತಿಭಟನೆ ಕುರಿತು ಭದ್ರಾವತಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಬಂಜಾರ ರೈತರ ಸಂಘದ ರಾಜ್ಯಾಧ್ಯಕ್ಷ ಕೃಷ್ಣನಾಯ್ಕ ಮಾಹಿತಿ ನೀಡಿದರು.
    ಭದ್ರಾವತಿ, ಜ. ೭: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ವಿರುದ್ಧ ಜ.೧೦ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಪ್ರತಿಭಟನೆಯಲ್ಲಿ ಬಣಜಾರ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಸಬೇಕೆಂದು  ಬಂಜಾರ ರೈತರ ಸಂಘದ ರಾಜ್ಯಾಧ್ಯಕ್ಷ ಕೃಷ್ಣನಾಯ್ಕ ಮನವಿ ಮಾಡಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅಸಂವಿಧಾನಿಕ ಹಾಗು ಅವೈಜ್ಞಾನಿಕವಾಗಿ ಕೂಡಿದೆ. ರಾಜ್ಯ ಸರ್ಕಾರ ಈ ವರದಿಯನ್ನು ಸಾರ್ವಜನಿಕವಾಗಿ ಚರ್ಚಿಸದೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮುಂದಾಗಿರುವುದು ಖಂಡನೀಯವಾಗಿದೆ ಎಂದರು.
    ಆಯೋಗದ ವರದಿ ತಕ್ಷಣ ಕೈ ಬಿಡಬೇಕು. ವರದಿಯಲ್ಲಿನ ಸಾಧಕ-ಬಾಧಕಗಳ ಕುರಿತು ಸಾರ್ವಜನಿಕವಾಗಿ ಚರ್ಚಿಸಬೇಕು. ಎಲ್ಲಾ ಸಮುದಾಯಗಳಿಗೂ ಸಂವಿಧಾನ ಬದ್ಧವಾಗಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಣಜಾರ, ಭೋವಿ ಸೇರಿದಂತೆ ಶೋಷಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
    ಪತ್ರಿಕಾಗೋಷ್ಠಿಯಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಮ್‌ಕುಮಾರ್, ಬಂಜಾರ ಪೀಠ ಅಭಿವೃದ್ಧಿ ಸಮಿತಿ ನಿರ್ದೇಶಕ ರಮೇಶ್‌ನಾಯ್ಕ, ಬಂಜಾರ ಯುವಕರ ಸಂಘದ ಗೌರವಾಧ್ಯಕ್ಷ ಶಂಕ್ರನಾಯ್ಕ, ಮಂಜ್ಯಾನಾಯ್ಕ, ಹಿರಿಯೂರು ಮಲ್ಲಿಕಾ, ಭೋವಿ ಸಮಾಜದ ಅಧ್ಯಕ್ಷ ಬಿ.ಟಿ ನಾಗರಾಜ್, ಶಿವು ಪಾಟೀಲ್, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಿ+೩ ಗುಂಪುಗಳ ಮನೆಗಳ ನಿರ್ಮಾಣಕ್ಕೆ ತಕ್ಷಣ ಶಂಕುಸ್ಥಾಪನೆ ನೆರವೇರಿಸಿ

ಭದ್ರಾವತಿಯಲ್ಲಿ ಜಿ+೩ ಗುಂಪುಗಳ ನಿರ್ಮಾಣಕ್ಕೆ ತಕ್ಷಣ ಶಂಕಸ್ಥಾಪನೆ ನೆರವೇರಿಸುವಂತೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ರಾಜೀವ್‌ಗಾಂಧಿ ವಸತಿ ನಿಗಮದ ಕಾರ್ಯಕ್ರಮ ಅನುಷ್ಠಾನ ಪ್ರಧಾನ ವ್ಯವಸ್ಥಾಪಕರಾದ ಅರುಣ್‌ಕುಮಾರ್ ಅಡಗಲಿ ಅವರಿಗೆ ಮನವಿ ಸಲ್ಲಿಸಲಾಗಿದೆ.
    ಭದ್ರಾವತಿ, ಜ. ೭: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಸರ್ವರಿಗೂ ಸೂರು ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ನಗರದಲ್ಲಿ  ಜಿ+೩ ಗುಂಪುಗಳ ನಿರ್ಮಾಣಕ್ಕೆ ತಕ್ಷಣ ಶಂಕಸ್ಥಾಪನೆ ನೆರವೇರಿಸುವಂತೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ರಾಜೀವ್‌ಗಾಂಧಿ ವಸತಿ ನಿಗಮದ ಕಾರ್ಯಕ್ರಮ ಅನುಷ್ಠಾನ ಪ್ರಧಾನ ವ್ಯವಸ್ಥಾಪಕರಾದ ಅರುಣ್‌ಕುಮಾರ್ ಅಡಗಲಿ ಅವರಿಗೆ ಮನವಿ ಸಲ್ಲಿಸಲಾಗಿದೆ.
    ಕ್ಷೇತ್ರದಲ್ಲಿ ವಸತಿರಹಿತ ಬಡ ಕುಟುಂಬಗಳ ಬಹಳ ವರ್ಷಗಳ ಬೇಡಿಕೆ ಇದೀಗ ಈಡೇರುತ್ತಿದ್ದು, ನಗರಸಭೆ ವ್ಯಾಪ್ತಿಯಲ್ಲಿ ತಿಮ್ಲಾಪುರ, ಬುಳ್ಳಾಪುರ, ಮೂಲೆಕಟ್ಟೆ, ಜೇಡಿಕಟ್ಟೆ ಪ್ರದೇಶಗಳಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದಿಂದ ಜಿ+ ೩ ಒಟ್ಟು ೨೦೪೮ ಗುಂಪು ಮನೆಗಳ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಶೀಘ್ರದಲ್ಲಿಯೇ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಸಾಧ್ಯತೆ ಇದೆ. ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ತಕ್ಷಣ ಕಾಮಗಾರಿ ಆರಂಭಿಸಲು ಶಂಕುಸ್ಥಾಪನೆ ನೆರವೇರಿಸುವಂತೆ ಮನವಿ ಮಾಡಲಾಗಿದೆ.
    ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸುವ ಸಂಬಂಧ ನಗರಸಭೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಅವರೊಂದಿಗೆ ನಿಗಮದ ಅಧಿಕಾರಿಗಳು ತುರ್ತಾಗಿ ಚರ್ಚಿಸುವಂತೆ ವೇದಿಕೆ ಮುಖಂಡ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕೋರಿದ್ದಾರೆ.

ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ರಂಭಾಪುರಿ ಶ್ರೀಗಳು ಸಂಚಾರಿ ಮೂರ್ತಿ

ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಬಿಳಿಕಿ ಶ್ರೀ

 ಶ್ರೀಮದ್ ರಂಭಾಪುರಿ ಜಗದ್ಗುರುಗಳ ಜನ್ಮದಿನೋತ್ಸವ ಪ್ರಯುಕ್ತ ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ವತಿಯಿಂದ ಶನಿವಾರ ಹಾಲು, ಹಣ್ಣು, ಬ್ರೆಡ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜ. ೬ : ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೆಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಂಚಾರಿ ಮೂರ್ತಿಗಳಾಗಿದ್ದು, ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರಿಗೆ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲೆಂದು ಪ್ರಾರ್ಥಿಸುವುದಾಗಿ ಬಿಳಿಕಿ ಹಿರೇಮಠದ ಶ್ರೀ ರಾಜೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 
  ಶ್ರೀಮದ್ ರಂಭಾಪುರಿ ಜಗದ್ಗುರುಗಳ ಜನ್ಮದಿನೋತ್ಸವ ಪ್ರಯುಕ್ತ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಹಾಲು, ಹಣ್ಣು, ಬ್ರೆಡ್ ವಿತರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. 
ರಂಭಾಪುರಿ ಜಗದ್ಗುರುಗಳು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಶ್ರೀ ರೇಣುಕಾಚಾರ್ಯರ ಆದರ್ಶತನಗಳನ್ನು ಮೈಗೂಡಿಸಿಕೊಂಡು ಶ್ರೀ ಮಠದಲ್ಲಿ ಹೆಚ್ಚು ಸಮಯ ವಾಸ್ತವ್ಯ ಮಾಡದೆ ನಾಡಿನಾದ್ಯಂತ ಸಂಚರಿಸುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣದಲ್ಲಿ ತೊಡಗಿದ್ದಾರೆ. ಸಮಾಜಕ್ಕೆ ಜಗದ್ಗುರುಗಳ ಸೇವೆ ಅನನ್ಯವಾಗಿದ್ದು, ಇವರ ಜನ್ಮದಿನ ಆಚರಣೆ ಮಾಡುತ್ತಿರುವುದು ಹೆಮ್ಮಯ ವಿಚಾರವಾಗಿದೆ ಎಂದರು. 
ಪ್ರಮುಖರಾದ ನಗರಸಭೆ ಮಾಜಿ ಬಿ.ಕೆ ಮೋಹನ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಜಿ. ಸುರೇಶಯ್ಯ, ತೀರ್ಥಯ್ಯ, ಸೇರಿದಂತೆ ಇನ್ನಿತರರು ಮಾತನಾಡಿದರು. 
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ವೈದ್ಯರಾದ ಡಾ. ಡಿ.ಎಸ್ ಶಿವಪ್ರಕಾಶ್, ಡಾ. ವೀರಭದ್ರಪ್ಪ, ಡಾ. ಮಂಜುನಾಥ್, ಡಾ. ಮಯೂರಿ ಸೇರಿದಂತೆ ಇನ್ನಿತರ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. 
ಶ್ರೀ ಮರುಳ ಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಉದ್ಯಮಿ ಬಿ.ಕೆ ಜಗನ್ನಾಥ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಉಪಾಧ್ಯಕ್ಷ ವಾಗೀಶ್, ಯುವ ಘಟಕದ ಖಜಾಂಚಿ ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ರೂಪನಾಗರಾಜ್, ಕಾರ್ಯದರ್ಶಿಗಳಾದ ಉಷಾ ವೀರಶೇಖರ್, ರೂಪ ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.