ಸರ್ಕಾರವೇ ಪುನೀತ್‌ರಾಜ್‌ಕುಮಾರ್ ಹುಟ್ಟುಹಬ್ಬ ಆಚರಿಸುವಂತಾಗಲಿ : ಬಿ.ಕೆ ಮೋಹನ್
![](https://blogger.googleusercontent.com/img/a/AVvXsEgPlLD8Y9JClHayTishkQZDgCkCNKrouNh3wTIYTl27VAzGpgytiHN_KgLktzC0yIhuEPuT8OkMThaEG3CdBYI-7dcGI3TaDH-2qMhS1HJHQlOxxYkhJgyorUBG88MwD2FfzsYR-Cyy6UAq8JZIg60z8n7MrXRBVUCd-gQIYwhGhezntE304zlW0H6exg=w400-h300-rw)
ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬದ ಅಂಗವಾಗಿ ಭದ್ರಾವತಿ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಪವೃಕ್ಷ ಸೇವಾ ಟ್ರಸ್ಟ್ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು.
ಭದ್ರಾವತಿ, ಮಾ. ೧೭: ಪುನೀತ್‌ರಾಜ್‌ಕುಮಾರ್‌ರವರು ನಮ್ಮೆಲ್ಲರ ಮುಂದೆ ಇಂದು ಉಳಿದುಕೊಂಡಿರುವುದು ಅವರ ಸೇವಾ ಕಾರ್ಯದಿಂದಾಗಿ ಎಂಬುದನ್ನು ಯಾರು ಮರೆಯುವಂತಿಲ್ಲ. ಇಂತಹ ವ್ಯಕ್ತಿಯ ಜನ್ಮದಿನವನ್ನು ಸರ್ಕಾರದಿಂದ ಆಚರಿಸುವಂತಾಗಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
ಅವರು ಗುರುವಾರ ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬದ ಅಂಗವಾಗಿ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಪವೃಕ್ಷ ಸೇವಾ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು.
ಪುನೀತ್‌ರಾಜ್‌ಕುಮಾರ್‌ರವರು ಕೇವಲ ನಟರಾಗಿ ಉಳಿದುಕೊಳ್ಳದೆ ಬಡ ಮಕ್ಕಳ ಶಿಕ್ಷಣಕ್ಕೆ, ಗೋ ಶಾಲೆಗಳ ನಿರ್ಮಾಣಕ್ಕೆ ಹಾಗು ಅನಾಥಾಶ್ರಮಗಳಿಗೆ ನೆರವಾಗುವ ಜೊತೆಗೆ ಇನ್ನಿತರ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ನಿಧನದ ನಂತರ ಅವರ ವಾಸ್ತವ ಬದುಕು ನಮ್ಮೆಲ್ಲರಿಗೂ ತಿಳಿಯುತ್ತಿದೆ. ಆ ಮೂಲಕ ಅವರು ಇಂದು ನಮ್ಮೆಲ್ಲರ ಮುಂದೆ ಉಳಿದುಕೊಂಡಿದ್ದಾರೆ. ಇವರ ಸೇವಾ ಕಾರ್ಯಗಳು ಲಕ್ಷಾಂತರ ಅಭಿಮಾನಿಗಳ ಮನಸ್ಸನ್ನು ಬದಲಿಸಿದೆ. ಈ ಮೂಲಕ ನಾವು ಸಹ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕೆಂಬ ಮನೋಭಾವ ಬೆಳೆಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಪುನೀತ್‌ರಾಜ್‌ಕುಮಾರ್ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರ ಜನ್ಮದಿನ ಕೇವಲ ಸಂಘ-ಸಂಸ್ಥೆಗಳಿಂದ, ಅಭಿಮಾನಿಗಳಿಂದ ಆಚರಣೆ ಮಾಡಿದರೆ ಸಾಲದು ಸರ್ಕಾರದ ವತಿಯಿಂದ ಆಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಮುಂದಿನಗಳಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಭರವಸೆ ನೀಡಿದರು.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಪವೃಕ್ಷ ಟ್ರಸ್ಟ್ ಪ್ರಾಮಾಣಿಕವಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದೇನೆ. ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯದೆ ಮುನ್ನಡೆಯುವ ಮೂಲಕ ಇತರರಿಗೆ ಟ್ರಸ್ಟ್ ಮಾದರಿಯಾಗಬೇಕೆಂದರು.
ಸಂಘದ ಅಧ್ಯಕ್ಷ ಲಾಜರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಆರ್. ಪ್ರದೀಪ್, ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಸುರಜಿತ್‌ಮಿಶ್ರಾ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯರಾದ ಲತಾ ಚಂದ್ರಶೇಕರ್, ಆರ್. ಮೋಹನ್‌ಕುಮಾರ್, ಸರ್ವಮಂಗಳ ಭೈರಪ್ಪ, ಸೈಯದ್ ರಿಯಾಜ್, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಸಮಾಜ ಸೇವಕ ಬಾಲಕೃಷ್ಣ, ವಿಐಎಸ್‌ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಟ್ರಸ್ಟ್ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಎನ್.ಆರ್ ಜಯರಾಜ್, ಉಪಾಧ್ಯಕ್ಷರಾದ ರಾಮಪ್ಪ, ವಿ. ಮುನೇನಕೊಪ್ಪ, ಸಹಕಾರ್ಯದರ್ಶಿ ಎಚ್.ಪಿ ಶ್ರೀನಿವಾಸ್, ಕೋಶಾಧ್ಯಕ್ಷ ಮಹೇಶ್ವರಪ್ಪ, ನಿರ್ದೇಶಕರಾದ ವಿ.ಎಚ್ ಶಿವಣ್ಣ, ಎಸ್.ಎಚ್ ಹನುಮಂತರಾವ್, ಎಲ್. ಬಸವರಾಜಪ್ಪ, ಡಿ. ಸುಬ್ರಮಣಿ, ನಾಗರಾಜ್, ಆರ್. ಕಾಮಾಕ್ಷಿ, ಎನ್. ರೂಪ, ವಿಲ್ಸನ್‌ಬಾಬು ಮತ್ತು ಕೆ. ಆಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಗರಸಭಾ ಸದಸ್ಯ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕಾಂತರಾಜ್ ಸ್ವಾಗತಿಸಿದರು. ಸಿದ್ದಾರ್ಥ ಅಂಧರ ಕೇಂದ್ರ ಕಲಾವಿದರು ಪ್ರಾರ್ಥಿಸಿ ಪುನೀತ್‌ರಾಜ್‌ಕುಮಾರ್‌ರವರ ಗೀತಾ ಗಾಯನ ನಡೆಸಿಕೊಟ್ಟರು. ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ರಕ್ತದಾನ, ನೇತ್ರದಾನ ಸಹ ನಡೆಯಿತು.
ಭದ್ರಾವತಿ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಪವೃಕ್ಷ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.