Monday, January 27, 2025

ಎಬಿವಿಪಿ ರಾಜ್ಯ ಸಮ್ಮೇಳನಕ್ಕೆ ಕಾರ್ಯಕರ್ತರಿಂದ ದಿನಸಿ ಸಾಮಗ್ರಿ

ಶಿವಮೊಗ್ಗದಲ್ಲಿ ಜ.೩೧ ರಿಂದ ಫೆ.೨ರ ತನಕ ನಡೆಯುವ ೪೪ನೇ ಎಬಿವಿಪಿ ರಾಜ್ಯ ಸಮ್ಮೇಳನಕ್ಕೆ ಭದ್ರಾವತಿ ನಗರದ ಕಾರ್ಯಕರ್ತರು ಸಮ್ಮೇಳನಕ್ಕೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ನೀಡುವ ಮೂಲಕ ಅಳಿಲು ಸೇವೆ ಸಲ್ಲಿಸಿದ್ದಾರೆ. 
    ಭದ್ರಾವತಿ: ಶಿವಮೊಗ್ಗದಲ್ಲಿ ಜ.೩೧ ರಿಂದ ಫೆ.೨ರ ತನಕ ನಡೆಯುವ ೪೪ನೇ ಎಬಿವಿಪಿ ರಾಜ್ಯ ಸಮ್ಮೇಳನಕ್ಕೆ ನಗರದ ಕಾರ್ಯಕರ್ತರು ಸಮ್ಮೇಳನಕ್ಕೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ನೀಡುವ ಮೂಲಕ ಅಳಿಲು ಸೇವೆ ಸಲ್ಲಿಸಿದ್ದಾರೆ. 
    ಸಮ್ಮೇಳನದ ಸ್ವಾಗತ ಸಮಿತಿ ಸದಸ್ಯರಾದ ಬಿ. ದಿವಾಕರಶೆಟ್ಟಿಯವರ ಮೂಲಕ ರಾಜ್ಯ ಸಮ್ಮೇಳನಕ್ಕೆ ದಿನಸಿ ಸಾಮಗ್ರಿಗಳನ್ನು ಕಳುಹಿಸಿ ಕೊಡಲಾಯಿತು.  ದಿವಾಕರಶೆಟ್ಟಿಯವರು ಮಾತನಾಡಿ, ಜಗತ್ತಿನ ಅತಿ ದೊಡ್ಡ ಪ್ರಭಾವಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಮ್ಮೇಳನ ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಈ ಸಮ್ಮೇಳನ ಯಶಸ್ವಿಯಾಗಲು ಜಿಲ್ಲೆಯ ಎಲ್ಲಾ ನಾಗರೀಕರು  ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು. 
    ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್‌ರವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮವನ್ನು ಬೆಳೆಸುವುದರ ಜೊತೆಗೆ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ಪುನರ್ ನಿರ್ಮಾಣದ ಧ್ಯೇಯ ಹೊಂದಿರುವ ಎಬಿವಿಪಿಗೆ ಸಮಾಜದ ಎಲ್ಲರ ಸಹಕಾರ ಹೆಚ್ಚಿನದ್ದಾಗಿದೆ ಎಂದರು.  ಎಬಿವಿಪಿ ಸ್ಥಳೀಯ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. 

ಇಂದು ದೇಶದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಪಕ್ಷವೇ ಬೇರೆ : ಸಂಸದ ಬಿ.ವೈ ರಾಘವೇಂದ್ರ.

ಭದ್ರಾವತಿ ನಗರದಲ್ಲಿ ಸೋಮವಾರ ಪಕ್ಷದ ಯುವ ಮುಖಂಡ, ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಂಗೋಟೆ ರುದ್ರೇಶ್‌ರವರ ನೇತೃತ್ವದಲ್ಲಿ ಸಂವಿಧಾನ ಗೌರವ ಅಭಿಯಾನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭೀಮ ಸಂಗಮ, ದಲಿತ ಬಂಧುಗಳಿಗೆ ಭೋಜನ ಕಾರ್ಯಕ್ರಮ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು. 
    ಭದ್ರಾವತಿ : ಅಂದು ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷವೇ ಬೇರೆ. ಇಂದು ದೇಶದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಪಕ್ಷವೇ ಬೇರೆ ಎಂದು  ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ನಗರದಲ್ಲಿ ಸೋಮವಾರ ಪಕ್ಷದ ಯುವ ಮುಖಂಡ, ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಂಗೋಟೆ ರುದ್ರೇಶ್‌ರವರ ನೇತೃತ್ವದಲ್ಲಿ ಸಂವಿಧಾನ ಗೌರವ ಅಭಿಯಾನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭೀಮ ಸಂಗಮ, ದಲಿತ ಬಂಧುಗಳಿಗೆ ಭೋಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಅಂದು ಇದ್ದಿದ್ದು ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡುವ ಸಲುವಾಗಿ ಜನ್ಮ ತಾಳಿದ ಕಾಂಗ್ರೆಸ್ ಪಕ್ಷ. ಆದರೆ ಮುಂದೆ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಗಾಂಧೀಜಿಯವರು ಕಾಂಗ್ರೆಸ್ ಪಕ್ಷ ವಿಸರ್ಜಿಸಿ. ಅದರ ಗುರಿ ಹಾಗು ಉದ್ದೇಶ ಈಡೇರಿದೆ. ಇನ್ನು ಅದನ್ನು ಕೇವಲ ಸಾಂಸ್ಕೃತಿಕ ಸಂಘಟನೆಯಾಗಿರಲಿ ಎಂದು ತಿಳಿಸಿದ್ದರು. ಆದರೆ ಅಂದಿನ ಕಾಂಗ್ರೆಸ್ ಮುಖಂಡರು ಗಾಂಧಿಜಿಯವರ ಮಾತನ್ನು ಧಿಕ್ಕರಿಸಿ ಕಾಂಗ್ರೆಸ್ ಪಕ್ಷ್ಚವನ್ನು ತಮ್ಮ ರಾಜಕೀಯ ಅಧಿಕಾರದ ಉದ್ದೇಶಕ್ಕಾಗಿ ಜೀವಂತವಾಗಿರಿಸಿಕೊಂಡು ಇಂದಿಗೂ ನಿರಂತರವಾಗಿ ಅಧಿಕಾರ ಅನುಭವಿಸುತ್ತಾ ಬಂದಿದ್ದಾರೆಂದು ಆರೋಪಿಸಿದರು. 
       ಮಹಾತ್ಮಗಾಂಧಿಜೀಯವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬೆಳಗಾವಿಗೆ ಭೇಟಿ ಅಲ್ಲಿನ ಬಾವಿಯಲ್ಲಿ ನೀರನ್ನು ಸೇದುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದ ೧೦೦ ವರ್ಷಗಳ ಸವಿ ನೆನೆಪಿಗೆ `ಜೈ ಭೀಮ್, ಜೈ ಬಾಪು, ಜೈ ಸಂವಿಧಾನ' ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜರುಗಿದ ಕಾರ್ಯಕ್ರಮ ಹಾಸ್ಯಾಸ್ಪದವಾಗಿದೆ ಎಂದರು.       
    ಅಂಬೇಡ್ಕರ್‌ರವರನ್ನು ಕಾಂಗ್ರೆಸ್ ಪಕ್ಷ ಕೇವಲ ಅವರ ಹೆಸರಿನಲ್ಲಿ ಭಾಷಣ ಮಾಡುವುದಕ್ಕೆ, ಸಭೆ ಸಮಾರಂಭಗಳಲ್ಲಿ ಅವರ ಪೋಟೋ ಪೂಜೆ ಮಾಡುವುದಕ್ಕೆ ಸೀಮಿತಿಗೋಳಿಸಿದರೆ,  ಬಿಜೆಪಿ ಪಕ್ಷ ಅವರು ಜನಿಸಿದ, ವಿದ್ಯಾಭ್ಯಾಸ ಮಾಡಿದ, ವಿದೇಶದಲ್ಲಿದ್ದ, ಮರಣಿಸಿದ ಸ್ಥಳಗಳನ್ನು ಪಂಚ ಕಲ್ಯಾಣ ಎಂಬ ಹೆಸರಿನಲ್ಲಿ ಸುಮಾರು ೩೫೦ ಕೋಟಿ ರೂ. ವೆಚ್ಚ ಮಾಡಿ ಐತಿಹಾಸಿಕ ಸ್ಮಾರಕವನ್ನಾಗಿ ಮಾಡಿದೆ ಎಂದರು.
    ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತದೆ. ತಿದ್ದುಪಡಿ ಮಾಡುತ್ತದೆ ಎಂದು ಕಾಂಗ್ರೆಸ್ ದೇಶಾದ್ಯಂತ ಅಪಪ್ರಚಾರದಲ್ಲಿ ತೊಡಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಇದುವರೆಗೆ ೧೦೬ ಬಾರಿ ಸಂವಿದಾನ ತಿದ್ದುಪಡಿ ಮಾಡಲಾಗಿದ್ದು, ನಿಜ ಸಂಗತಿ ಎಂದರೆ ಕಾಂಗ್ರೆಸ್ ಪಕ್ಷ ತನ್ನ ಅಧಿಕಾರದ ಸಮಯದಲ್ಲಿ ಸಂವಿಧಾನವನ್ನು ತನಗೆ ಬೇಕಾದಂತೆ ೭೫ ಬಾರಿ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯನ್ನು ಯಾಕೆ ಮಾಡಿದೆ ಎಂದು ಇದುವರೆಗೂ  ದೇಶದ ಜನರ ಮುಂದೆ ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಿದರು.
    ಕಾಂಗ್ರೆಸೇತರ ರಾಜಕೀಯ ಪಕ್ಷಗಳು ಸಂವಿಧಾನಕ್ಕೆ ೩೧ ಬಾರಿ ತಿದ್ದುಪಡಿ ಮಾಡಿವೆ. ಅದರಲ್ಲಿ ಬಿಜೆಪಿ ಬೆಂಬಲಿತ ಸಮಯದಲ್ಲಿ ವಿ.ಪಿ ಸಿಂಗ್ ರವರ ಆಧಿಕಾರವಧಿಯಲ್ಲಿ ಮತ್ತು ವಾಜಪೇಯಿ ಆಧಿಕಾರದ ಸಮಯದಲ್ಲಿ ೧೪ ಮತ್ತು ನರೇಂದ್ರ ಮೋದಿಯವರ ಅವಧಿಯಲ್ಲಿ ೮ ಬಾರಿ ತಿದ್ದುಪಡಿ ಆಗಿದೆ. ಈ ಎಲ್ಲಾ ತಿದ್ದುಪಡಿಗಳು ದೇಶದ ಜನರ, ಹಿಂದುಳಿದವರ, ಎಸ್‌ಸಿ/ಎಸ್‌ಟಿ ಜನಾಂಗದವರ ಅಭಿವೃಧ್ಧಿ, ಮೀಸಲಾತಿ ಮುಂದುವರೆಯಬೇಕು, ೧೦ನೇ ತೆರಿಗೆ ಅನುಷ್ಠಾನಕ್ಕಾಗಿ, ಬ್ಯಾಕ್‌ಲಾಗ್ ಮೀಸಲಾತಿ ಹುದ್ದೆಗಾಗಿ, ಅರುಣಾಚಲ ಪ್ರದೇಶದಲ್ಲಿ ಹಿಂದುಳಿದವರಿಗೆ ರಾಜಕೀಯ ಅಧಿಕಾರಕ್ಕಾಗಿ ಮತ್ತು ದೇಶದಲ್ಲಿ ಸಚಿವ ಸಂಪುಟದಲ್ಲಿ ಮಂತ್ರಿಗಳ ಸಂಖ್ಯೆ ಮಿತಿ ಮಾಡುವ ಮೂಲಕ ದೇಶದ ಬೊಕ್ಕಸಕ್ಕೆ ಹೊರೆಯಾಗಬಾರದು ಎಂಬ ಭವಿಷ್ಯದ ವೆಚ್ಚದ ಕಾರಣಕ್ಕಾಗಿ, ಶಾಸಕರ ಮತ್ತು ಸಂಸದರ ಸಂಖ್ಯೆಯ ಆಧಾರದ ಮೇಲೆ ಸಂಪುಟ ರಚನೆ ಮಾಡಬೇಕು ಎಂಬುದು ಬಹು ಮುಖ್ಯವಾದ ಸಂಗತಿಗಳು ಎಂದರು.
    ನರೇಂದ್ರ ಮೋದಿಯವರ ಅವಧಿಯಲ್ಲಿ ತಿದ್ದುಪಡಿ ಆಗಿರುವುದು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಮಾನ್ಯತೆ ಮುಂದುವರಿಕೆಗಾಗಿ, ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ೨೦೩ ರವರೆಗೆ ಮಂದುವರೆಸುವುದಕ್ಕಾಗಿ, ೩೭೦ನೇ ವಿಧಿಯನ್ನು ರದ್ದು ಮಾಡುವುದಕ್ಕಾಗಿ, ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ ೩೩ರಷ್ಟು ಮೀಸಲಾತಿ ಅವಕಾಶ ಕಲ್ಪಿಸುವುದು ಸೇರಿದಂತೆ ಇತರ ಕಾರಣಗಳಿಗಾಗಿ ಸಂವಿಧಾನ ತಿದ್ದುಪಡಿ ಮಾಡಿದೆ ಎಂದು ಹಿಂದಿನ ಕಾರಣಗಳನ್ನು ಬಹಿರಂಗ ಪಡಿಸಿದರು.
    ಬಿಜೆಪಿ ಮೇಲೆ ಕಾಂಗ್ರೆಸ್ ಮಾಡುತ್ತಿರುವ ಅಪಪ್ರಚಾರಗಳಿಗೆ ದಲಿತ, ಹಿಂದುಳಿದ ಸಮುದಾಯಗಳು ಇನ್ನಾದರೂ ಕಿವಿಗೊಡದೆ ದೇಶದ ಭದ್ರತೆ, ಆಖಂಡತೆ, ಸುರಕ್ಷತೆ, ಸರ್ವಜನರ ಏಳಿಗೆಗಾಗಿ, ದಲಿತ, ಹಿಂದುಳಿದವರ ಪ್ರಾಮಾಣಿಕ ಅಭಿವೃಧ್ಧಿಗಾಗಿ ದಲಿತರು, ಹಿಂದುಳಿದವರು ಇನ್ನಾದರೂ ಎಚ್ಚೆತ್ತುಕೊಂಡು ಪ್ರಾಮಾಣಿಕವಾಗಿ ಬಿಜೆಪಿ  ಬೆಂಬಲಿಸಿ ತಮ್ಮ ಕೊಡುಗೆಗಳನ್ನು ನೀಡಿ ಎಂದು ಮನವಿ ಮಾಡಿದರು.
    ಪ್ರಗತಿಪರ ಹಾಗು ದಲಿತ ಮುಖಂಡ ಸುರೇಶ್ ಮಾತನಾಡಿ, ವಿವಿಧ ರಾಜಕೀಯ ಪಕ್ಷಗಳು ಅಂಬೇಡ್ಕರ್ ವಿಚಾರಗಳನ್ನು ವಿವಿಧ ರೀತಿಯಲ್ಲಿ ನೋಡುತ್ತಾರೆ. ಆದರೆ ಅವರ ಗುರಿ ಬಾಬಾ ಸಾಹೇಬರ ಆಶಯಗಳನ್ನು ಈಡೇರಿಸಿ ಅನುಷ್ಠಾನಗೊಳಿಸುವುದಾಗಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪರವರು ತಮ್ಮ ಅಧಿಕಾರಾವಧಿ ಸಮಯದಲ್ಲಿ ಜಿಲ್ಲೆಯಲ್ಲಿ ಛಲವಾದಿ ಸಮುದಾಯ ಭವನ ನಿರ್ಮಾಣ ಮಾಡುವ ಮೂಲಕ ದಲಿತರ ಬಗ್ಗೆ ಕಾಳಜಿ ವಹಿಸಿದ್ದಾರೆ. ಇವರು ದಲಿತ ಅಲ್ಪಸಂಖ್ಯಾತ ವಿರೋಧಿ ಎಂಬ ಭಾವನೆ ಇದೆ. ಆದರೆ ಇದು ಕೇವಲ ಆರೋಪ ಮಾತ್ರ. ವಾಸ್ತವವಾಗಿ ಎಲ್ಲಾ ವರ್ಗದವರನ್ನು ಪ್ರೀತಿ ವಿಶ್ವಾಸಗಳಿಂದ ಗೌರವದಿಂದ ಕಾಣುತ್ತಿರುವುದು ನಿಜ ಸಂಗತಿಯಾಗಿದೆ ಎಂದರು. 
    ದಲಿತ ಮುಖಂಡರಾದ ಜಿ. ಆನಂದ ಕುಮಾರ್, ನಿತ್ಯಾನಂದ, ಶಿವಾನಂದ, ಪುರುಷೋತ್ತಮ್, ಮೈಲಾರಪ್ಪ, ಅನ್ನಪೂರ್ಣ, ಸರಸ್ವತಿ, ಕೃಷ್ಣಪ್ಪ, ಬಸವರಾಜ್, ಶಕುಂತಲ, ಶಿವಬಸಪ್ಪ ಸೇರಿದಂತೆ ಇತರರು  ವೇದಿಕೆಯಲ್ಲಿದ್ದರು.
    ವೆಂಕಟೇಶ್ ಪ್ರಾರ್ಥಿಸಿ, ಮಂಗೋಟೆ ರುದ್ರೇಶ್ ಆಶಯ ಭಾಷಣ ನಡೆಸಿಕೊಟ್ಟರು. ಎಸ್. ದತ್ತಾತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಹನುಮಂತ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

ಭದ್ರಾ ನದಿ ಸೇತುವೆ ಕೆಳಭಾಗದಲ್ಲಿ ಮೃತಪಟ್ಟ ಚಿರತೆ ಪತ್ತೆ

ಭದ್ರಾವತಿ: ನಗರದ ಬೈಪಾಸ್ ರಸ್ತೆ ರಾಷ್ಟ್ರೀಯ ಹೆದ್ದಾರಿ ಆನೆಕೊಪ್ಪ ಬಳಿ ಭದ್ರಾ ನದಿ ಸೇತುವೆ ಕೆಳ ಭಾಗದಲ್ಲಿ ಸೋಮವಾರ ಬೆಳಿಗ್ಗೆ ಮೃತಪಟ್ಟಿರುವ ಚಿರತೆಯೊಂದು ಪತ್ತೆಯಾಗಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
    ಭದ್ರಾವತಿ: ನಗರದ ಬೈಪಾಸ್ ರಸ್ತೆ ರಾಷ್ಟ್ರೀಯ ಹೆದ್ದಾರಿ ಆನೆಕೊಪ್ಪ ಬಳಿ ಭದ್ರಾ ನದಿ ಸೇತುವೆ ಕೆಳ ಭಾಗದಲ್ಲಿ ಸೋಮವಾರ ಬೆಳಿಗ್ಗೆ ಮೃತಪಟ್ಟಿರುವ ಚಿರತೆಯೊಂದು ಪತ್ತೆಯಾಗಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
    ಸುಮಾರು ೨ ರಿಂದ ೩ ವರ್ಷದ ಗಂಡು ಚಿರತೆಯ ಮೃತದೇಹವಾಗಿದ್ದು, ಇದು ಭದ್ರಾ ಅಭರಣ್ಯ ವ್ಯಾಪ್ತಿಯಲ್ಲಿ ವಾಸಿಸುವ ಚಿರತೆ ಎಂಬುದು ತಿಳಿದು ಬಂದಿದೆ. ಈ ಚಿರತೆ ಸೇತುವೆ ಮೇಲಿಂದ ಬಿದ್ದು ಸಾವನ್ನಪ್ಪಿದೆಯೋ ಅಥವಾ ಬೇಟೆಯಾಡಿ ಹತ್ಯೆ ಮಾಡಲಾಗಿದೆಯೋ ಎಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ. 
    ಈ ಕುರಿತು ಮಾಹಿತಿ ನೀಡಿರುವ ವಲಯ ಅರಣ್ಯಾಧಿಕಾರಿ ಬಿ.ಎಚ್ ದುಗ್ಗಪ್ಪ ಈ ಭಾಗದಲ್ಲಿ ಚಿರತೆಗಳು ಹೆಚ್ಚಾಗಿವೆ. ಬೆಳಿಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಚಿರತೆ ಇದೆ ದಿನ ಮೃತಪಟ್ಟಿರುವ ಸಾಧ್ಯತೆ ಕಂಡು ಬರುತ್ತಿದೆ. ಚಿರತೆಯ ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಂತರ ಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದರು. 
    ಘಟನಾ ಸ್ಥಳದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ವಲಯ ಅರಣ್ಯಾಧಿಕಾರಿ ಕಛೇರಿಯ ಸಿಬ್ಬಂದಿಗಳು, ಪೇಪರ್ ಟೌನ್ ಠಾಣೆ ಉಪ ನಿರೀಕ್ಷಕಿ ಕವಿತಾ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.