ಭದ್ರಾವತಿ ನ್ಯೂಟೌನ್ ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ.೨೪ರವರೆಗೆ ಶಾಲೆಯ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಹಮ್ಮಿಕೊಳ್ಳಲಾಗಿರುವ ವಸಂತ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಭದ್ರಾವತಿ : ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಅರಳಿಸಲು ಶಿಬಿರಗಳು ಹೆಚ್ಚಿನ ಸಹಕಾರಿಯಾಗುತ್ತವೆ ಎಂದು ಹಿರಿಯ ಚಿಂತಕ ಶ್ರೀ ಕೃಷ್ಣ ಉಪಾಧ್ಯ ಹೇಳಿದರು.
ನಗರದ ನ್ಯೂಟೌನ್ ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ.೨೪ರವರೆಗೆ ಶಾಲೆಯ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಹಮ್ಮಿಕೊಳ್ಳಲಾಗಿರುವ ವಸಂತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ರಜಾ ದಿನಗಳಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳಬಾರದು. ಇಂತಹ ಶಿಬಿರಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವ ಮೂಲಕ ತಮ್ಮಲ್ಲಿನ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು. ಆ ಮೂಲಕ ಭವಿಷ್ಯದಲ್ಲಿ ಉತ್ತಮ ಬೆಳವಣಿಗೆ ಕಾಣಲು ಸಾಧ್ಯ. ಶಿಬಿರದ ಸದುಪಯೋಗಪಡೆದುಕೊಳ್ಳುವಂತೆ ಕರೆ ನೀಡಿದರು.
ಶಿಬಿರಾಧಿಕಾರಿ ತಾರಾಮಣಿ ಮಾತಾಜಿಯವರು, ಶಿಬಿರದ ಉದ್ದೇಶ ತಿಳಿಸುವ ಜೊತೆಗೆ ಶಿಬಿರದಲ್ಲಿ ಸಹಕಾರ ನೀಡುತ್ತಿರುವ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿಕೊಟ್ಟರು.
ಶುಗರ್ ಟೌನ್ ಲಯನ್ಸ್ ಕ್ಲಬ್ ಅಧ್ಯಕ್ಷ ಆರ್. ಉಮೇಶ್ ಶಿಬಿರದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ತಾವು ಸಹ ಶಿಬಿರದಲ್ಲಿ ಮಕ್ಕಳಿಗೆ ಚದುರಂಗ ಕ್ರೀಡೆ ಮತ್ತು ಡ್ರಾಪ್ಸ್ ಕಲಿಸಿಕೊಡುವುದಾಗಿ ಹೇಳಿಕೊಡುವ ಬಗ್ಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ .ಕೆ. ಅನಂತಕೃಷ್ಣ ನಾಯಕ್‌ರವರು ಶಾಲೆಯು ಬೆಳೆದು ಬಂದ ಹಾದಿಯನ್ನು ವಿವರಿಸುವ ಜೊತೆಗೆ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಲ್ಲಾ ಮಕ್ಕಳು ಉತ್ತೀಣರಾಗಿ ಶೇ.೧೦೦ ಫಲಿತಾಂಶ ತಂದುಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ವೇದಿಕೆಯಲ್ಲಿ ಶುಗರ್ ಟೌನ್ ಲಯನ್ಸ್ ಕ್ಲಬ್ ಮಂಜುನಾಥ್ ಉಪಸ್ಥಿತರಿದ್ದರು. ಆರಂಭದಲ್ಲಿ ಕವಿತಾ ಮಾತಾಜಿಯವರು ಅಮೃತ ವಚನ ಹೇಳಿದರು. ಶಾಲೆಯ ಕಾರ್ಯದರ್ಶಿ ಎಸ್.ಎನ್ ಸುಭಾಷ್ ಸ್ವಾಗತಿಸಿದರು. ಅರುಣ್ ಕುಮಾರ್ ವಂದಿಸಿ, ಶಿಕ್ಷಕ ಬಸವರಾಜ ನಿರೂಪಸಿದರು.