Tuesday, November 12, 2024

ಕಾಡು ಪ್ರಾಣಿ ಕಡವೆ ಭೇಟೆ : ಓರ್ವನ ಸೆರೆ

ಕಾಡು ಪ್ರಾಣಿ ಕಡವೆ  ಭೇಟೆಯಾಡಿದ ವ್ಯಕ್ತಿಯೋರ್ವನನ್ನು ಭದ್ರಾವತಿ ಉಪವಲಯ ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಭದ್ರಾವತಿ: ಕಾಡು ಪ್ರಾಣಿ ಕಡವೆ  ಭೇಟೆಯಾಡಿದ ವ್ಯಕ್ತಿಯೋರ್ವನನ್ನು ಇಲ್ಲಿನ ಉಪವಲಯ ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಒಟ್ಟು ೪ ಜನರ ತಂಡ ಕಾಡು ಪ್ರಾಣಿ ಕಡವೆ ಭೇಟೆಯಾಡಿದ್ದು, ಈ ಪೈಕಿ ತಾಲೂಕಿನ ಅರೆಬಿಳಚಿ ಕ್ಯಾಂಪ್ ನಿವಾಸಿ ಮಂಜುನಾಥ್‌ನನ್ನು ಬಂಧಿಸಲಾಗಿದೆ. ಉಳಿದ ಮೂವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ. 
  ತಾಲೂಕಿನ ದಾನವಾಡಿ ಅರಣ್ಯದಲ್ಲಿ ಮಂಜುನಾಥ್ ಸೇರಿದಂತೆ ನಾಲ್ವರು ಕಡವೆ ಭೇಟೆಯಾಗಿದ್ದು, ಈ ಸಂಬಂಧ ಮಂಜುನಾಥ್‌ನನ್ನು ಬಂಧಿಸುವಲ್ಲಿ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ನೇತೃತ್ವದ ತಂಡ ಯಶಸ್ವಿಯಾಗಿದೆ. ಉಳಿದ ಮೂವರು ತಲೆ ಮರೆಸಿಕೊಂಡಿದ್ದು, ಪತ್ತೆಗಾಗಿ ಬಲೆ ಬೀಸಲಾಗಿದೆ. 
    ಕೂಡ್ಲಿಗೆರೆ ಶಾಖೆಯ ಹೊಸೂರು ಗ್ರಾಮದ ಸರ್ವೆ ನಂ.೨೨ರ ದಾನವಾಡಿ ಕಿರು ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿ ಕಡವೆ ಬೇಟೆಯಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.  
    ಈ ಹಿನ್ನಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶಿಶ್ ರೆಡ್ಡಿ, ಚನ್ನಗಿರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭ ಇವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿಗಳಾದ ಬಿ.ಎಚ್ ದುಗ್ಗಪ್ಪ ರವರ ನೇತೃತ್ವದ ತಂಡ ರಚಿಸಲಾಗಿತ್ತು.  
    ಉಪ ವಲಯ ಅರಣ್ಯಾಧಿಕಾರಿಗಳಾದ ಶೇಖರ್ ಎ ಚೌಗುಲೆ(ಕೂಡ್ಲಿಗೆರೆ ಶಾಖೆ), ಜಿ. ಹನುಮಂತರಾಯ, ಸಿ. ಚಂದ್ರಶೇಖರ್, ಕಾಂತೇಶ್ ನಾಯ್ಕ, ಗಸ್ತು ಅರಣ್ಯ ಪಾಲಕ ಕೆ.ವಿ ಪ್ರತಾಪ್ ಹಾಗೂ ದಿನಗೂಲಿ ನೌಕರರಾದ ಕೋಠಿ, ಅವಿನಾಶ್ ಮತ್ತು ಮಂಜು ಕಾರ್ಯಾಚರಣೆ ತಂಡದಲ್ಲಿ ಪಾಲ್ಗೊಂಡಿದ್ದರು. ಬಂಧಿತ ಮಂಜುನಾಥ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ತಾಲೂಕು ಕಛೇರಿ ಭ್ರಷ್ಟಾಚಾರದಲ್ಲಿ ಮುಳುಗಿದೆ : ಜನಪ್ರತಿನಿಧಿಗಳಿಂದ ಗಂಭೀರ ಆರೋಪ

ಕೆಡಿಪಿ ಸಭೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯ ವೈಖರಿ ವಿರುದ್ಧ ಅಸಮಾಧಾನ 

ಭದ್ರಾವತಿಯಲ್ಲಿ ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ  ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಮಿತಿ ಸಭೆ ನಡೆಯಿತು. ಶಾಸಕರಾದ ಬಿ.ಕೆ ಸಂಗಮೇಶ್ವರ್, ಶಾರದಪೂರ್‍ಯಾ ನಾಯ್ಕ, ಬಲ್ಕೀಶ್ ಬಾನು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಭದ್ರಾವತಿ: ತಾಲೂಕಿನ ಭದ್ರಾವತಿ ವಿಧಾನಸಭಾ ಕ್ಷೇತ್ರ ಹಾಗು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಸಹ ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದೆ. ಅಲ್ಲದೆ ತಾಲೂಕು ಕಛೇರಿಯಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಮಂಗಳವಾರನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳು ಗಂಭಿರವಾಗಿ ಆರೋಪಿಸಿದರು. 
    ತಾಲೂಕು ಪಂಚಾಯಿತಿ ಕಛೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಗರ ಹಾಗು ಗ್ರಾಮಾಂತರ ಭಾಗದಲ್ಲಿ ಫಾರಂ ೯೪ ಸಿ.ಸಿ ಹಾಗು ಫಾರಂ ೫೦ ಮತ್ತು ೫೩ ಮತ್ತು ೫೭ ಸೇರಿಂದ ಸರ್ಕಾರದ ವಿವಿಧ ಯೋಜನೆಯಡಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಅರ್ಜಿ ಸಲ್ಲಿಸಿದ್ದರೂ ಸಹ ಅಧಿಕಾರಿಗಳು ಪೂರಕವಾಗಿ ಸ್ಪಂದಸದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಸೂಕ್ತ ಕಾರಣ ನೀಡದೆ ಅರ್ಜಿಗಳನ್ನು ತಿರಸ್ಕೃತಗೊಳಿಸುತ್ತಿದ್ದಾರೆ. ಅಲ್ಲದೆ ತಾಲೂಕು ಕಛೇರಿಯಲ್ಲಿ ಅಧಿಕಾರಿಗಳು ಈ ಸಂಬಂಧ ವಿಚಾರಿಸಲು ಹೋದರೆ ಇನ್ನೂ ಬೋನಿಗೆ ಆಗಿಲ್ಲ ಎಂದು ಕುರ್ಚಿ ಕೆಳಗಿನ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರಿಂದ ಈ ಕುರಿತು ಸಾಕಷ್ಟು ದೂರುಗಳು ಬಂದಿವೆ ಎಂದು ಆರೋಪಿಸಲಾಯಿತು. 
    ಅಧ್ಯಕ್ಷತೆವಹಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಸರ್ಕಾರದ ಮಾರ್ಗಸೂಚಿಯಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಯಾವುದೇ ರೀತಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಬಾರದು. ಸರ್ಕಾರಿ ಕೆಲಸ ದೇವರ ಕೆಲಸ ಎನ್ನುತ್ತಾರೆ. ಒಂದು ಕಡೆ ಎಲ್ಲಾ ಕೆಲಸ ಮಾಡಿದ್ದೇವೆ ಎನ್ನುತ್ತೀರ. ಮತ್ತೊಂದು ಕಡೆ ಯಾವುದೇ ಕೆಲಸವಾಗಿರುವುದಿಲ್ಲ. ಸರ್ಕಾರದ ಆದೇಶದಂತೆ ನಿಗದಿತ ಅವಧಿಯಲ್ಲಿ ಸಂಬಂಧಿಸಿದ ಅರ್ಜಿಗಳ ಇತ್ಯರ್ಥವಾಗಬೇಕು. ಆದರೆ ಹಕ್ಕು ಪತ್ರಕ್ಕಾಗಿ ಸಲ್ಲಿಸಿರುವ ಅರ್ಜಿಗಳ ಇತ್ಯರ್ಥವಾಗಿಲ್ಲ. ಮುಂದಿನ ೧೫ ದಿನಗಳ ಕಾಲಾವಾವಧಿಯಲ್ಲಿ ಉಳಿದಿರುವ ಎಲ್ಲಾ ಅರ್ಜಿಗಳ ಇತ್ಯರ್ಥವಾಗಬೇಕು ಇಲ್ಲವಾದಲ್ಲಿ ತಹಸೀಲ್ದಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. 
    ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯನಾಯ್ಕ ಮಾತನಾಡಿ, ಕಂದಾಯ ಇಲಾಖೆ ಅಧಿಕಾರಿಗಳು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಯಾವುದೇ ನೋಟಿಸ್ ನೀಡದೆ ಏಕಾಏಕಿ ಸರ್ವೇ ಕಾರ್ಯ ಕೈಗೊಂಡು ಅಲ್ಲಿನ ಗ್ರಾಮಗಳಲ್ಲಿ ಘರ್ಷಣೆ ಉಂಟುಮಾಡುವ ಮೂಲಕ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಸರ್ವೇ ಕಾರ್ಯ ನಡೆಸುವ ಮೊದಲು ನೋಟಿಸ್ ನೀಡುವಂತೆ ಎಚ್ಚರಿಸಿದರು. 
    ಅಧಿಕಾರಿಗಳಿಗೆ ಕೆಡಿಪಿ ಸಭೆ ಅರ್ಥವೇ ತಿಳಿದಿಲ್ಲ. ತಾಲೂಕಿನ ಭದ್ರಾವತಿ ವಿಧಾನಸಭಾ ಕ್ಷೇತ್ರ ಹಾಗು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿನ ಪ್ರಗತಿ ಕುರಿತ ಮಾಹಿತಿ ಸಭೆ ನಡೆಯುವ ಮೊದಲು ನಮಗೆ ತಿಳಿಸಬೇಕು.  ಸಭೆಯಲ್ಲಿ ಬಂದು ಮಾಹಿತಿ ನೀಡುವುದಲ್ಲ. ಮಾಹಿತಿ ತಿಳಿದುಕೊಳ್ಳುವುದಕ್ಕೆ ಸಮಯ ಕಳೆದು ಹೋಗುತ್ತದೆ. ಇನ್ನೂ ಚರ್ಚಿಸಲು ಸಮಯ ಎಲ್ಲಿ ಎಂದು ಪ್ರಶ್ನಿಸಿದರು. 
    ಈ ನಡುವೆ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕಂದಾಯ ಇಲಾಖೆಯೊಂದಿಗೆ ಅರಣ್ಯ ಇಲಾಖೆ ಏಜೆಂಟ್ ರೀತಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಸಹ ವಿನಾಕಾರಣ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಒಂದು ಕಡೆ ಕಂದಾಯ ಇಲಾಖೆ ಭೂಮಿ ನಮಗೆ ಸೇರಿದೆ ಎಂದರೆ, ಮತ್ತೊಂದು ಕಡೆ  ಅರಣ್ಯ ಇಲಾಖೆ ನಮಗೆ ಸೇರಿದೆ ಎನ್ನುತ್ತಿದೆ. ಈ ಎರಡು ಇಲಾಖೆಯಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. 
    ಆಹಾರ ಇಲಾಖೆ ಕಾರ್ಯ ವೈಖರಿ ಕುರಿತು ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು, ಆಹಾರ ಇಲಾಖೆ ಅಧಿಕಾರಿಗಳು ಸರ್ಕಾರದ ಆದೇಶ ನೆಪಮಾಡಿಕೊಂಡು ಯಾವುದೇ ಪರಿಶೀಲನೆ ನಡೆಸದೆ ಪಡಿತರ ಚೀಟಿಗಳನ್ನು ರದ್ದುಗೊಳಿಸುತ್ತಿದೆ. ಇದರಿಂದಾಗಿ ಅರ್ಹ ಬಡಕುಟುಂಬಗಳು ಬಿಪಿಎಲ್ ಪಡಿತರ ಚೀಟಿಯಿಂದ ವಂಚಿತವಾಗುತ್ತಿವೆ. ಆದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಬಡ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಮತ್ತೊಂದು ಕಡೆ ಎಪಿಎಲ್ ಕಾರ್ಡ್‌ಗಳಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಲಾಯಿತು. 
    ಒಟ್ಟು ಕಂದಾಯ ಇಲಾಖೆ, ಆಹಾರ ಇಲಾಖೆ, ಮೀನುಗಾರಿಕೆ ಇಲಾಖೆ, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ರೇಷ್ಮೆ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಕೈಗಾರಿಕಾ ಇಲಾಖೆ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಆರೋಗ್ಯ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ನಗರಸಭೆ, ಸಾರಿಗೆ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ಉಪನೋಂದಣಾಧಿಕಾರಿಗಳವರ ಇಲಾಖೆ, ಭೂ ದಾಖಲೆಗಳ ಸೆರ್ವ ಇಲಾಖೆ, ಕಾರ್ಮಿ ಇಲಾಖೆ, ಮೆಸ್ಕಾಂ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಮಹಿರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ(ನಂ.೧, ನಂ.೨ ಮತ್ತು ನಂ.೩), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಲೋಕೋಪಯೋಗಿ ಇಲಾಖೆ, ಪಟ್ಟಣ ಪಂಚಾಯಿತಿ ಹೊಳೆಹೊನ್ನೂರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಮತ್ತು ತಾಲೂಕು ಪಂಚಾಯತ್ ಸೇರಿದಂತೆ ಒಟ್ಟು ೩೨ ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ನಡೆಸಲಾಯಿತು. 
    ಸಭೆಯಲ್ಲಿ ಪ್ರಮುಖರಾದ ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಕೆಡಿಪಿ ಸದಸ್ಯರಾದ ಜೆಬಿಟಿ ಬಾಬು, ರಾಜೇಂದ್ರ, ಬಿ.ಕೆ ರಮೇಶ್, ಜಯಲಕ್ಷ್ಮಿ, ಮಂಜುನಾಥ್, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಅವಿನ್, ತಹಸೀಲ್ದಾರ್ ಕೆ.ಆರ್ ನಾಗರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಇ ಪ್ರಕಾಶ್

ಭದ್ರಾವತಿ ತಾಲೂಕಿನ ಬಾರಂದೂರು ಬೊಮ್ಮೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ತಾಲೂಕಿನ ಬಾರಂದೂರು ಬೊಮ್ಮೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಇ ಪ್ರಕಾಶ್ ಹಾಗು ಉಪಾಧ್ಯಕ್ಷರಾಗಿ ಪುಷ್ಪ ಆಯ್ಕೆಯಾಗಿದ್ದಾರೆ. 
    ಸಂಘದ ಚುನಾವಣೆಯಲ್ಲಿ ನಿರ್ದೇಶಕರಾಗಿ ಬಿ.ಕೆ ಪ್ರೇಮ್ ಕುಮಾರ್, ಸಾವಿತ್ರಮ್ಮ, ಲಕ್ಷ್ಮಮ್ಮ, ಬಿ.ಎಂ ಗೋಪಾಲಗೌಡ, ವೈ.ಎನ್ ಮೋಹನ್ ಕುಮಾರ್, ಡಿ.ಕೆ ಶಿವಣ್ಣ, ಆರ್. ಕುಮಾರ್, ಮಂಜುನಾಥ್ ಹಾಗು ನಾಮನಿರ್ದೇಶಿತ ಸದಸ್ಯರಾಗಿ ವಿಸ್ತರಣಾಧಿಕಾರಿ ಆರ್. ಶ್ರುತಿ, ಕಾರ್ಯದರ್ಶಿ ಮಹಾಲಿಂಗ ಗೌಡ್ರು ಆಯ್ಕೆಯಾಗಿದ್ದಾರೆ.  ಶಾಲಾ ಶಿಕ್ಷಕಿ ಶೋಭಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.