ನೋಂದಾಯಿತ ಸಂಸ್ಥೆಯ ಅಧ್ಯಕ್ಷ ಸಿ.ಎಂ ಖಾದರ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ
![](https://blogger.googleusercontent.com/img/b/R29vZ2xl/AVvXsEgj-lK4eItOGIKkam8ZmYVSCjwUt5LG_ReBb618f0uol4DNxk-lIkZDTIcg6KuN4utMPatDVan44dZW_FjQu4f9kBcOtEYPiGElOoT9AkNeHzahSOpSZyHU6N-zcQv2-ri7kD_eRZ-uZS92/w400-h190-rw/D11-BDVT1-771618.jpg)
ಭದ್ರಾವತಿ ಅಂಜುಮನ್-ಎ-ಇಸ್ಲಾಹುಲ್-ಮುಸ್ಲಿಮೀನ್ ನೋಂದಾಯಿತ ಸಂಸ್ಥೆ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸ್ವಹಿತಾಸಕ್ತಿ ಹೊಂದಿರುವ ಮುಸ್ಲಿಂ ಸಮಾಜದ ಕೆಲ ಸ್ವಯಂ ಘೋಷಿತ ಮುಖಂಡರು ಸಂಸ್ಥೆಗೆ ಹೊಸದಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿರುವುದು ಕಾನೂನು ಬಾಹಿರ ಎಂದು ನೋಂದಾಯಿತ ಸಂಸ್ಥೆಯ ಅಧ್ಯಕ್ಷ ಸಿ.ಎಂ ಖಾದರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಭದ್ರಾವತಿ, ಅ. ೧೧: ನಗರದ ಅಂಜುಮನ್-ಎ-ಇಸ್ಲಾಹುಲ್-ಮುಸ್ಲಿಮೀನ್ ನೋಂದಾಯಿತ ಸಂಸ್ಥೆ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸ್ವಹಿತಾಸಕ್ತಿ ಹೊಂದಿರುವ ಮುಸ್ಲಿಂ ಸಮಾಜದ ಕೆಲ ಸ್ವಯಂ ಘೋಷಿತ ಮುಖಂಡರು ಸಂಸ್ಥೆಗೆ ಹೊಸದಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿರುವುದು ಕಾನೂನು ಬಾಹಿರ ಎಂದು ನೋಂದಾಯಿತ ಸಂಸ್ಥೆಯ ಅಧ್ಯಕ್ಷ ಸಿ.ಎಂ ಖಾದರ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾನೂನು ಪ್ರಕಾರ ನೋಂದಾಯಿಸಲ್ಪಟ್ಟ ಸಂಸ್ಥೆಯ ಬೈಲಾ ಪ್ರಕಾರ ಅಧ್ಯಕ್ಷರ ಅವಧಿ ೪ ವರ್ಷಗಳಾಗಿವೆ. ನಾನು ಇನ್ನೂ ಒಂದು ವರ್ಷ, ೩ ತಿಂಗಳವರೆಗೆ ಮುಂದುವರೆಯುವ ಅಧಿಕಾರವಿದೆ. ಒಂದು ವೇಳೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಲ್ಲಿ ಮಾತ್ರ ಹೊಸದಾಗಿ ಕಾನೂನು ರೀತಿಯಲ್ಲಿ ಚುನಾವಣೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಅವಕಾಶವಿದೆ. ಅಲ್ಲದೆ ಒಂದು ವೇಳೆ ನನ್ನ ಮೇಲೆ ಗುರುತರವಾದ ಆರೋಪಗಳಿದ್ದಲ್ಲಿ ನೋಟಿಸ್ ನೀಡುವ ಮೂಲಕ ಪ್ರಕ್ರಿಯೆ ಆರಂಭಿಸಿ ಆರೋಪ ಸಾಬೀತಾದಲ್ಲಿ ನನ್ನು ಅಧಿಕಾರದಿಂದ ತೆಗೆದು ಹಾಕಿ ಹೊಸದಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಬಹುದಾಗಿದೆ ಎಂದರು.
ನೋಂದಾಯಿತ ಸಂಸ್ಥೆಯ ಯಾವುದೇ ನಿಯಮಗಳನ್ನು ಪಾಲಿಸದೆ ಕೆಲ ಸ್ವಯಂ ಘೋಷಿತ ಮುಖಂಡರು ಮುರ್ತುಜಾಖಾನ್ ಎಂಬುವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿಕೊಂಡಿದ್ದಾರೆ. ಇದು ಕಾನೂನು ಬಾಹಿರ ಘೋಷಣೆಯಾಗಿದ್ದು, ಅಲ್ಲದೆ ಈ ಸಂಬಂಧ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಗರದ ಕೆಲವೆಡೆ ನೂತನ ಅಧ್ಯಕ್ಷರಿಗೆ ಶುಭ ಕೋರಿರುವ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಇದರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಸುತ್ತೇನೆ ಎಂದರು.
ಮುಸ್ಲಿಂ ಸಮಾಜದ ಕೆಲ ಸ್ವಯಂ ಘೋಷಿತ ಮುಖಂಡರು ಸಂಸ್ಥೆ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಮಾಜದಲ್ಲಿ ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ತುಂಬಾ ಹಳೇಯದಾದ ಈ ಸಂಸ್ಥೆಯನ್ನು ನನ್ನ ಅವಧಿಯಲ್ಲಿ ನೋಂದಾಯಿಸುವ ಮೂಲಕ ಕಾನೂನು ಮಾನ್ಯತೆಯನ್ನು ಪಡೆದುಕೊಂಡಿದ್ದೇನೆ. ಈ ಸಂಸ್ಥೆಗೆ ಕಾನೂನು ರೀತಿಯಲ್ಲಿ ಚುನಾವಣೆ ನಡೆಸಬೇಕಾಗಿದೆ. ಬೇರೆ ಯಾವುದೇ ರೀತಿಯಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಈ ಸಂಸ್ಥೆ ಹೆಸರಿನಲ್ಲಿ ಯಾರೇ ಅಧ್ಯಕ್ಷರೆಂದು ಘೋಷಿಸಿಕೊಂಡರು ಸಹ ಅಪರಾಧವಾಗುತ್ತದೆ. ಅಲ್ಲದೆ ಬೈಲಾ ಪ್ರಕಾರ ಸಂಸ್ಥೆಗೆ ಅಧ್ಯಕ್ಷರಾಗಲು ಇದರ ವ್ಯಾಪ್ತಿಯಲ್ಲಿರುವ ಯಾವುದಾದರೊಂದು ಮಸೀದಿಯ ಅಧ್ಯಕ್ಷರು ಅಥವಾ ಕಾರ್ಯದರ್ಶಿಯಾಗಿರಬೇಕೆಂಬ ನಿಯಮವಿದೆ ಎಂದರು.
ನಾನು ಎಂದಿಗೂ ಅಧಿಕಾರಕ್ಕೆ ಅಂಟಿಕೊಂಡಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಸಂಸ್ಥೆಯಲ್ಲಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡು ಅವ್ಯವಹಾರಗಳಿಗೆ ಕಡಿವಾಣ ಹಾಕಿದ್ದೇನೆ. ಇದನ್ನು ಸಹಿಸದ ಕೆಲವರು ನನ್ನನ್ನು ಅಧಿಕಾರದಿಂದ ಕೆಳಗಿಸಲು ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಬಗ್ಗುವ ವ್ಯಕ್ತಿ ನಾನಲ್ಲ. ಪ್ರಸ್ತುತ ಬೆಳವಣಿಗೆ ಬಗ್ಗೆ ವಕ್ಫ್ ಮಂಡಳಿಗೆ ಹಾಗು ನೋಂದಾಣಿ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.
ಇಲಿಯಾಜ್ ಅಹಮದ್, ಹಬೀಬ್‌ಖಾನ್, ಅಲ್ತಾಫ್ ಅಹಮದ್, ಖೈಸರ್ ಷರೀಫ್, ತಬ್ರೇಜ್ ಖಾನ್, ಜಾಫರ್ ವಸೀಂ, ರಿಯಾಜ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.