Monday, October 11, 2021

ಕಡಜ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿ

ಕುಮಾರ್   
ಭದ್ರಾವತಿ, ಅ.೧೧: ಕಳೆದ ಕೆಲವು ದಿನಗಳ ಹಿಂದೆ ಕಡಜದ ಹುಳುಗಳ ದಾಳಿಯಿಂದ ಇಬ್ಬರು ಮೃತಪಟ್ಟಿದ್ದರು. ಇದೀಗ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. 
ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ, ಕೃಷಿ ಕೂಲಿ ಕಾರ್ಮಿಕ ಕುಮಾರ್(೩೮) ಮೃತಪಟ್ಟಿದ್ದು, ಇವರು ಕೆಂಚಮ್ಮನಹಳ್ಳಿಯ ರಂಗಪ್ಪ ಎನ್ನುವ ತೆಂಗಿನ ತೋಟದಲ್ಲಿ ಕಾಯಿ ಕೀಳುವ ಕೆಲಸ ಮಾಡುತ್ತಿದ್ದಾಗ ಭಾನುವಾರ ಬೆಳಿಗ್ಗೆ ಕಡಜದ ಹುಳುಗಳು ದಾಳಿ ನಡೆಸಿವೆ. ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ಮೊದಲು ನಗರದ ದುರ್ಗಾ ನರ್ಸಿಂಗ್ ಹೋಂಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ನಾರಾಯಣ ಹೃದಯಾಲಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗಿನ ಜಾವ ಮೃತಪಟ್ಟಿದ್ದಾರೆ. 
ಮೃತ ಕುಮಾರ್ ಪತ್ನಿ, ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 
        ಅಕಸ್ಮಿಕ ಸಾವು ಪರಿಹಾರಕ್ಕೆ ವರದಿ ಸಲ್ಲಿಕೆ :
    ಕಡಜ ದಾಳಿಯಿಂದ ಈ ಹಿಂದೆ ಮೃತಪಟ್ಟಿರುವ ಇಬ್ಬರು ವ್ಯಕ್ತಿಗಳು ಸೇರಿದಂತೆ ಆಕಸ್ಮಿಕವಾಗಿ ಮೃತಪಟ್ಟಿರುವ ಒಟ್ಟು ೫ ಮಂದಿಗೆ ಪರಿಹಾರ ನೀಡುವ ಸಂಬಂಧ ಅಗತ್ಯ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ದಾಖಲಾತಿಗಳ ಪರಿಶೀಲನೆ ನಡೆಯುತ್ತಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ಸಿಗಲಿದೆ ಎಂದು ತಹಸೀಲ್ದಾರ್ ಪ್ರದೀಪ್ ಪತ್ರಿಕೆಗೆ ತಿಳಿಸಿದ್ದಾರೆ.  

No comments:

Post a Comment