Sunday, October 10, 2021

ಜೆ.ಎಚ್ ಪಟೇಲ್ ಎಲ್ಲಾ ವರ್ಗದವರಿಗೂ ನ್ಯಾಯ ದೊರಕಿಸಿಕೊಟ್ಟ ಮಾದರಿ ನಾಯಕ : ಬಲ್ಕೀಶ್ ಬಾನು

ಭದ್ರಾವತಿಯಲ್ಲಿ ಭಾನುವಾರ ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜೆ.ಎಚ್ ಪಟೇಲರ ೯೧ನೇ ಜನ್ಮ ದಿನಾಚರಣೆ ಹಾಗೂ ಸಾವಯವ-ರಾಜಕಾರಣ ಕುರಿತು ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಬಲ್ಕೀಶ್ ಬಾನು ಉದ್ಘಾಟಿಸಿದರು.
    ಭದ್ರಾವತಿ, ಅ. ೧೦; ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲ್‌ರವರು ಅವರ ಅವಧಿಯಲ್ಲಿ ಅವರ ಸಹೋದರಿ ಅನುಸೂಯಮ್ಮ ಅವರನ್ನು ಶಿವಮೊಗ್ಗ ಜಿಲ್ಲಾ ಪಂಚಾಯಿ ಅಧ್ಯಕ್ಷರನ್ನಾಗಿ ಮಾಡುವ ಅವಕಾಶವಿದ್ದರೂ ಅದನ್ನು ಧಿಕ್ಕರಿಸಿ ಜಾತಿ ವರ್ಗಗಳನ್ನು ಪರಿಗಣಿಸದೆ ಮುಸ್ಲಿಂ ಮಹಿಳೆಯಾದ ನನ್ನನ್ನು ಅಧ್ಯಕ್ಷೆಯನ್ನಾಗಿ ಮಾಡುವ ಮೂಲಕ ಎಲ್ಲಾ ವರ್ಗದವರಿಗೂ ನ್ಯಾಯ ದೊರಕಿಸಿಕೊಡುವ ಮೂಲಕ ಮಾದರಿ ನಾಯಕರಾಗಿ ಗುರುತಿಸಿಕೊಂಡಿದ್ದರು ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಬಲ್ಕೀಶ್ ಬಾನು  ನೆನಪು  ಮಾಡಿಕೊಂಡರು.
    ಅವರು ಭಾನುವಾರ ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜೆ.ಎಚ್ ಪಟೇಲರ ೯೧ನೇ ಜನ್ಮ ದಿನಾಚರಣೆ ಹಾಗೂ ಸಾವಯವ-ರಾಜಕಾರಣ ಕುರಿತು ವಿಚಾರ ಸಂಕೀರ್ಣ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.
ಈ ನಿಟ್ಟಿನಲ್ಲಿ ನನಗೆ ಸಮಾಜ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಧೀಮಂತ ವ್ಯಕ್ತಿ, ಅಪರೂಪದ ರಾಜಕಾರಿಣಿ ಜೆ.ಎಚ್. ಪಟೇಲ್ ಅವರನ್ನು ನಿತ್ಯ ನೆನಪು ಮಾಡಿಕೊಳ್ಳತ್ತೇನೆ ಎಂದರು. ಮನುಷ್ಯ ಹುಟ್ಟಿದ ಮೇಲೆ ಸಮಾಜಕ್ಕೆ ಏನನ್ನಾದರೂ ಕೊಡುಗೆಯಾಗಿ ನೀಡಬೇಕು. ಆಗ ಮಾತ್ರ ದೇವರು ನಮ್ಮನ್ನು ಮೆಚ್ಚುತ್ತಾನೆ ಎಂದರು.
    ಪಟೇಲರು ಮೌಲ್ಯ ಮತ್ತು ರಾಜಕಾರಣ ಎರಡನ್ನು ಜೊತೆ ಜೊತೆಯಾಗಿ ತೆಗೆದುಕೊಂಡು ಹೋದವರು. ಅವರ ನಿಷ್ಠೆ, ಪ್ರಾಮಾಣಿಕತೆ, ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
      ಉಪನ್ಯಾಸ ನೀಡಿದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ, ಸಮಾಜ ಸುಧಾರಣೆಯ ವಿಚಾರದಲ್ಲಿ ರಾಜಕಾರಣ ಮಾಡದೆ ಪಕ್ಷಾತೀತವಾಗಿ ಶ್ರಮಿಸಬೇಕು ಎಂಬುದು ದಿವಂಗತ ಜೆ.ಎಚ್ ಪಟೇಲರ ಆಶಯವಾಗಿತ್ತು. ಅದರಂತೆ ಪ್ರಬುದ್ದ ರಾಜಕಾರಣ ನಡೆಸಿದವರು. ಸಮಾಜವಾದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಅಭಿವೃದ್ದಿ ಮಾಡುವ ಮೂಲಕ ಆಧುನಿಕ ಕರ್ನಾಟಕದ ನಿರ್ಮಾಣಕ್ಕೆ ಕಾರಣರಾದರು. ಇಂತಹ ಮಹಾನ್ ನಾಯಕನನ್ನು ಕೇವಲ ಸ್ಮರಣೆ ಮಾಡಿಕೊಳ್ಳುವ ಬದಲು ಅವರ ಆಶಯಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಈ ನಾಡಿನ ಅಭಿವೃದ್ದಿಗೆ ಶ್ರಮಿಸುವಂತಾಗಬೇಕೆಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ, ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ ಪಟೇಲ್ ಮಾತನಾಡಿ, ಪ್ರಸ್ತುತ ನಮಗೆ ಏನು ಬೇಕು ಎಂಬುದರ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕಾಗಿದೆ. ಅಧಿಕಾರ ವಿಕೇಂದ್ರೀಕರಣದಂತೆ ಜವಾಬ್ದಾರಿ ವಿಕೇಂದ್ರೀಕರಣವೂ ಆಗಬೇಕಿದ್ದು, ಎಲ್ಲರಿಗೂ ಅನುಕೂಲವಾಗುವ ವಾತಾವರಣ ಸೃಷ್ಟಿಸಬೇಕಾಗಿದೆ.  ಸ್ಥಳೀಯವಾಗಿ ಹೊಸ ಪರಿಕಲ್ಪನೆಯನ್ನು ಸೃಷ್ಟಿಸಿಕೊಂಡರೆ ಆ ದಿಕ್ಕಿನಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದರು.
 .     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಪಿ ಯೋಗೇಶ್, ಶಿಕ್ಷಣ ಪ್ರಸಾರಕ ಸಂಸ್ಥೆಯ ಉಪಾಧ್ಯಕ್ಷ ಶಶಿಭೂಷಣ ಹೆಗ್ಗಡೆ, ಉದ್ಯಮಿ ಬಿ.ಕೆ ಜಗನ್ನಾಥ್, ಒಳಚರಂಡಿ ಮತ್ತು ನಗರ ನೀರು ಸರಬರಾಜು ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ವಿದ್ಯಾಥಿ ಸಂಘಟನೆ ರಾಜ್ಯಾಧ್ಯಕ್ಷ ವಿನಯ್ ರಾಜಾವತ್, ಸಿ.ಎಂ ಖಾದರ್, ಶಶಿಕುಮಾರ್ ಎಸ್. ಗೌಡ, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್, ಜಿಲ್ಲಾ ಯೂನಿಯನ್ ಬ್ಯಾಂಕ್ ನಿರ್ದೇಶಕ ಸಂಜೀವ ಕುಮಾರ್, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ಬಿ. ಗಂಗಾಧರ್, ಸುಷ್ಮಾ  ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

No comments:

Post a Comment