Thursday, August 12, 2021

ದೇಶದಲ್ಲಿ ಮಹಿಳೆಯರಿಂದ ವಿಶಿಷ್ಟ ಕೊಡುಗೆ, ಆರ್ಥಿಕವಾಗಿ ಮುಂದೆ ಬರಲಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ವೀರಶೈವ ಸಭಾ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನಗರಸಭೆ ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಮತ್ತು ಹೊಸಸಿದ್ದಾಪುರದ ಸಹ್ಯಾದ್ರಿ ಪ್ರದೇಶ ಮಟ್ಟದ ಒಕ್ಕೂಟ ಹಾಗು ಫ್ಲಿಫ್‌ಕಾರ್ಟ್ ಮತ್ತು ಅಮೆಜಾನ್ ಸಂಸ್ಥೆಗಳಡಿ ಬೆಂಗಳೂರು ಮತ್ತು ಮೈಸೂರು ವಿಭಾಗ ಮಟ್ಟದ ಮಹಿಳಾ ಸ್ವ-ಸಹಾಯ ಸಂಘಗಳು ಉತ್ಪಾದಿಸುವ ವಸ್ತು ಮತ್ತು ಉಪಕರಣಗಳ ಛಾಯಾಚಿತ್ರ ತೆಗೆಯುವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಛಾಯಾ ಗ್ರಾಹಕರಾಗಿ ಕೆಲ ಕ್ಷಣ ಅಚ್ಚರಿ ಮೂಡಿಸಿದರು.
     ಭದ್ರಾವತಿ, ಆ. ೧೨: ದೇಶದಲ್ಲಿ ಮಹಿಳೆಯರು ತಮ್ಮದೇ ಆದ ವಿಶಿಷ್ಟವಾದ ಕೊಡುಗೆಗಳನ್ನು ನೀಡುತ್ತಿದ್ದು, ಮಹಿಳೆಯರು ಸಹ ಆರ್ಥಿಕವಾಗಿ ಮುಂದೆ ಬರಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.
     ಅವರು ಗುರುವಾರ ನಗರದ ವೀರಶೈವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನಗರಸಭೆ ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಮತ್ತು ಹೊಸಸಿದ್ದಾಪುರದ ಸಹ್ಯಾದ್ರಿ ಪ್ರದೇಶ ಮಟ್ಟದ ಒಕ್ಕೂಟ ಹಾಗು ಫ್ಲಿಫ್‌ಕಾರ್ಟ್ ಮತ್ತು ಅಮೆಜಾನ್ ಸಂಸ್ಥೆಗಳಡಿ ಬೆಂಗಳೂರು ಮತ್ತು ಮೈಸೂರು ವಿಭಾಗ ಮಟ್ಟದ ಮಹಿಳಾ ಸ್ವ-ಸಹಾಯ ಸಂಘಗಳು ಉತ್ಪಾದಿಸುವ ವಸ್ತು ಮತ್ತು ಉಪಕರಣಗಳ ಛಾಯಾಚಿತ್ರ ತೆಗೆಯುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ಮಹಿಳಾ ಒಕ್ಕೂಟ ಮತ್ತು ಸ್ವ-ಸಹಾಯ ಸಂಘಗಳ ಮಹಿಳೆಯರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸದ್ಬಳಕೆಮಾಡಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕೆಂದರು.
     ಮಹಿಳೆಯರು ಆರ್ಥಿಕವಾಗಿ ಬೆಳವಣಿಗೆ ಸಾಧಿಸಿದ್ದಲ್ಲಿ ಕುಟುಂಬ ಸಹ ಬೆಳವಣಿಗೆ ಹೊಂದುತ್ತದೆ. ಅಲ್ಲದೆ ಮಕ್ಕಳ ಉತ್ತಮ ಭವಿಷ್ಯಕ್ಕೆ ಮಹಿಳೆಯರು ಸಹ ಕೈ ಜೋಡಿಸಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಮತ್ತು ಉತ್ತಮ ವಾತಾವರಣ ಮೂಡುತ್ತದೆ ಎಂದರು.
    ಜಿಲ್ಲಾ ಕೌಶಲ್ಯಾಭಿವೃದ್ಧಿ ಸಹ ಸಂಚಾಲಕ ಸುರೇಶ್ ಮತ್ತು ಸಮನ್ವಯ ಕಾಶಿ ಮಾತನಾಡಿ, ಇಲಾಖೆಯಿಂದ ಲಭ್ಯವಾಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಭದ್ರಾವತಿ ತಾಲೂಕಿನಲ್ಲಿ  ಮಹಿಳಾ ಒಕ್ಕೂಟ ಮತ್ತು ಸ್ವ-ಸಹಾಯ ಸಂಘಗಳಿಗೆ ಶಾಸಕರು ಹೆಚ್ಚಿನ ಸಹಕಾರ ನೀಡುತ್ತಿದ್ದು, ರಾಜ್ಯದಲ್ಲಿಯೇ ಅತಿಹೆಚ್ಚಿನ ಅನುದಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲೂ ಹೆಚ್ಚಿನ ಸಹಕಾರ ನೀಡುವ ವಿಶ್ವಾಸವಿದೆ ಎಂದರು.
    ಪೌರಾಯುಕ್ತ ಕೆ. ಪರಮೇಶ್, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಹಾಗು ಮಹಿಳಾ ಒಕ್ಕೂಟ ಮತ್ತು ಸ್ವ-ಸಹಾಯ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸೆ.೩ರಂದು ವಾರ್ಡ್ ನಂ.೨೯ಕ್ಕೆ ಚುನಾವಣೆ

    ಭದ್ರಾವತಿ, ಆ. ೧೨: ಇಲ್ಲಿನ ನಗರಸಭೆಗೆ ಏಪ್ರಿಲ್ ತಿಂಗಳಿನಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ವಾರ್ಡ್ ನಂ.೨೯ರ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ ಹಿನ್ನಲೆಯಲ್ಲಿ ರದ್ದು ಮಾಡಲಾಗಿದ್ದ ವಾರ್ಡಿನ ಚುನಾವಣೆ ಸೆ.೩ರಂದು ನಡೆಯಲಿದೆ.
     ಚುನಾವಣಾ ಆಯೋಗ ನಗರಸಭೆ ೩೫ ವಾರ್ಡ್‌ಗಳಿಗೆ ಏಪ್ರಿಲ್‌ನಲ್ಲಿ ಚುನಾವಣೆ ಘೋಷಿಸಿತ್ತು. ವಾರ್ಡ್ ನಂ. ೨೯ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಸಿ ಶೃತಿ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಆಯೋಗ ಚುನಾವಣೆಯನ್ನು ರದ್ದುಗೊಳಿಸಿತ್ತು.
    ಇದೀಗ ಪುನಃ ಚುನಾವಣೆ ಘೋಷಿಸಿತ್ತು. ಆ.೧೬ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಆ.೨೩ ಹಾಗು ನಾಮಪತ್ರ ಹಿಂಪಡೆಯಲು ಆ. ೨೬ ಕೊನೆಯ ದಿನವಾಗಿದೆ. ಸೆ.೩ರಂದು ಮತದಾನ ನಡೆಯಲಿದ್ದು, ಸೆ.೬ರಂದು ಮತ ಎಣಿಕೆ ನಡೆಯಲಿದೆ.
     ಈಗಾಗಲೇ ೩೪ ವಾರ್ಡ್‌ಗಳ ಪೈಕಿ ಕಾಂಗ್ರೆಸ್ ಅತಿ ಹೆಚ್ಚು ೧೮ ಸ್ಥಾನಗಳನ್ನು, ಜೆಡಿಎಸ್ ೧೧ ಸ್ಥಾನಗಳನ್ನು ಮತ್ತು ಬಿಜೆಪಿ ೪ ಸ್ಥಾನಗಳನ್ನು ಪಡೆದುಕೊಂಡಿದ್ದು,  ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ವಾರ್ಡ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನಲಾಗಿದ್ದು, ಉಳಿದಂತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪ್ರತಿಷ್ಠೆಗಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಾಗಿದೆ.

ಶ್ರೀನಿವಾಸ ಸ್ವಾಮಿ ದೇವಸ್ಥಾನ ಜೀರ್ಣೋದ್ದಾರಕ್ಕೆ ೨ ಲಕ್ಷ ರು. ಆರ್ಥಿಕ ನೆರವು

ಸಾಮಾಜಿಕ ಕಾರ್ಯ ಯೋಜನೆಯಡಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭದ್ರಾವತಿ ಸಿದ್ಧಾರೂಢ ನಗರದಲ್ಲಿರುವ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದ ಕಟ್ಟಡ ಅಭಿವೃದ್ಧಿ ಕಾಮಗಾರಿಗಳಿಗೆ ರು. ೨ ಲಕ್ಷ ಆರ್ಥಿಕ ನೆರವು ನೀಡಲಾಯಿತು.
    ಭದ್ರಾವತಿ, ಆ. ೧೨: ಸಾಮಾಜಿಕ ಕಾರ್ಯ ಯೋಜನೆಯಡಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಿದ್ಧಾರೂಢ ನಗರದಲ್ಲಿರುವ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದ ಕಟ್ಟಡ ಅಭಿವೃದ್ಧಿ ಕಾಮಗಾರಿಗಳಿಗೆ ರು. ೨ ಲಕ್ಷ ಆರ್ಥಿಕ ನೆರವು ನೀಡಲಾಯಿತು.
    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆಯವರ ಆಶಯದಂತೆ ಹಲವಾರು ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಗಳಿಗೆ ಯೋಜನೆವತಿಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ.
ಗುರುವಾರ ರು.೨ ಲಕ್ಷ ನೆರವಿನ ಚೆಕನ್ನು ದೇವಸ್ಥಾನ ಸಂಕರ್ಷಣ ಧರ್ಮ ಸಂಸ್ಥೆ ಟ್ರಸ್ಟ್‌ಗೆ ಯೋಜನಾಧಿಕಾರಿ ಪ್ರಕಾಶ್ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಜಿ. ಆನಂದಕುಮಾರ್ ಸಮ್ಮುಖದದಲ್ಲಿ ವಿತರಿಸಿದರು.
    ವಲಯದ ಮೇಲ್ವಿಚಾರಕ ವಿ.ಎನ್ ಪ್ರಶಾಂತ್, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಾಸು ವೇದಮೂರ್ತಿ, ಉಪಾಧ್ಯಕ್ಷ ರಾಘವೇಂದ್ರ, ಸುಬ್ರಮಣ್ಯ, ಎಚ್. ಮಧುಸೂದನ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

೩೫ ಲಕ್ಷ ರು. ವೆಚ್ಚದ ಕುರುಹಿನಶೆಟ್ಟಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ

ಭದ್ರಾವತಿ ಉಜ್ಜನಿಪುರ ಬೈಪಾಸ್ ರಸ್ತೆಯಲ್ಲಿರುವ ಕುರುಹಿನಶೆಟ್ಟಿ ಸಂಘದ ಸುಮಾರು ೩೫ ಲಕ್ಷ ರು. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಗುರುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿ ಪೂಜೆ ನೆರವೇರಿಸಿದರು.
ಭದ್ರಾವತಿ, ಆ. ೧೨: ನಗರದ ಉಜ್ಜನಿಪುರ ಬೈಪಾಸ್ ರಸ್ತೆಯಲ್ಲಿರುವ ಕುರುಹಿನಶೆಟ್ಟಿ ಸಂಘದ ಸುಮಾರು ೩೫ ಲಕ್ಷ ರು. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಗುರುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿ ಪೂಜೆ ನೆರವೇರಿಸಿದರು.
ಸಂಘದ ಅಧ್ಯಕ್ಷ ಎನ್.ಆರ್ ಜಯರಾಜ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಸಂಘದ ಗೌರವಾಧ್ಯಕ್ಷ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥಶೆಟ್ಟಿ, ಸಹಕಾರ್ಯದರ್ಶಿ ನಿತ್ಯಾನಂದ, ಜಯರಾಜ್, ಎಚ್. ತಿಮ್ಮಪ್ಪ ಸೇರಿದಂತೆ ಸಮಾಜದ ಮುಖಂಡರು, ಇನ್ನಿತರರು ಉಪಸ್ಥಿತರಿದ್ದರು.