Thursday, August 12, 2021

ಸೆ.೩ರಂದು ವಾರ್ಡ್ ನಂ.೨೯ಕ್ಕೆ ಚುನಾವಣೆ

    ಭದ್ರಾವತಿ, ಆ. ೧೨: ಇಲ್ಲಿನ ನಗರಸಭೆಗೆ ಏಪ್ರಿಲ್ ತಿಂಗಳಿನಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ವಾರ್ಡ್ ನಂ.೨೯ರ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ ಹಿನ್ನಲೆಯಲ್ಲಿ ರದ್ದು ಮಾಡಲಾಗಿದ್ದ ವಾರ್ಡಿನ ಚುನಾವಣೆ ಸೆ.೩ರಂದು ನಡೆಯಲಿದೆ.
     ಚುನಾವಣಾ ಆಯೋಗ ನಗರಸಭೆ ೩೫ ವಾರ್ಡ್‌ಗಳಿಗೆ ಏಪ್ರಿಲ್‌ನಲ್ಲಿ ಚುನಾವಣೆ ಘೋಷಿಸಿತ್ತು. ವಾರ್ಡ್ ನಂ. ೨೯ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಸಿ ಶೃತಿ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಆಯೋಗ ಚುನಾವಣೆಯನ್ನು ರದ್ದುಗೊಳಿಸಿತ್ತು.
    ಇದೀಗ ಪುನಃ ಚುನಾವಣೆ ಘೋಷಿಸಿತ್ತು. ಆ.೧೬ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಆ.೨೩ ಹಾಗು ನಾಮಪತ್ರ ಹಿಂಪಡೆಯಲು ಆ. ೨೬ ಕೊನೆಯ ದಿನವಾಗಿದೆ. ಸೆ.೩ರಂದು ಮತದಾನ ನಡೆಯಲಿದ್ದು, ಸೆ.೬ರಂದು ಮತ ಎಣಿಕೆ ನಡೆಯಲಿದೆ.
     ಈಗಾಗಲೇ ೩೪ ವಾರ್ಡ್‌ಗಳ ಪೈಕಿ ಕಾಂಗ್ರೆಸ್ ಅತಿ ಹೆಚ್ಚು ೧೮ ಸ್ಥಾನಗಳನ್ನು, ಜೆಡಿಎಸ್ ೧೧ ಸ್ಥಾನಗಳನ್ನು ಮತ್ತು ಬಿಜೆಪಿ ೪ ಸ್ಥಾನಗಳನ್ನು ಪಡೆದುಕೊಂಡಿದ್ದು,  ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ವಾರ್ಡ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನಲಾಗಿದ್ದು, ಉಳಿದಂತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪ್ರತಿಷ್ಠೆಗಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಾಗಿದೆ.

No comments:

Post a Comment