Sunday, April 25, 2021

ಎಚ್.ಎಂ ಮಹೇಶ್ವರಪ್ಪ ನಿಧನ

ಎಚ್.ಎಂ ಮಹೇಶ್ವರಪ್ಪ
   ಭದ್ರಾವತಿ,  ಏ. ೨೫: ತಾಲೂಕಿನ ಅರಬಿಳಚಿ ಗ್ರಾಮದ ಹಿರಿಯ ಮುಖಂಡರಾದ ಎಚ್.ಎಂ ಮಹೇಶ್ವರಪ್ಪ(೭೮) ಭಾನುವಾರ ಮಧ್ಯಾಹ್ನ ನಿಧನ ಹೊಂದಿದರು.
   ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು,  ಪತ್ನಿ ಹಾಗು ಅರಬಿಳಚಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎಂ ಸದಾಶಿವ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಏ.೨೬ರ ಮಧ್ಯಾಹ್ನ ೧೨ ಗಂಟೆಗೆ ನಡೆಯಲಿದೆ.
   ಮಹೇಶ್ವರಪ್ಪ ಮಾಜಿ ಸಚಿವ ದಿವಂಗತ ಬಸವಣ್ಯಪ್ಪನವರ ಆಪ್ತರಲ್ಲಿ ಒಬ್ಬರಾಗಿದ್ದರು. ಇವರ ನಿಧನಕ್ಕೆ ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಲಾಕ್‌ಡೌನ್ ನಡುವೆಯೂ ಅಭ್ಯರ್ಥಿಗಳಿಂದ ಬಿರುಸಿನ ಮನೆ ಮನೆ ಪ್ರಚಾರ : ಪಕ್ಷೇತರ ಅಭ್ಯರ್ಥಿ ಬಿಜೆಪಿಗೆ ಸೇರ್ಪಡೆ

ನಗರಸಭೆ ವಾರ್ಡ್ ನಂ.೩ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸ್ನೇಹ ಜೀವಿ ಬಳಗದ ಸದಸ್ಯ ಎಸ್ ಯೋಗೀಶ್ ಭಾನುವಾರ ಬಿಜೆಪಿ ಪಕ್ಷಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪನವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.
   ಭದ್ರಾವತಿ, ಏ. ೨೫: ಕೊರೋನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಜಾರಿಗೊಳಿಸಿರುವ ವೀಕ್ ಎಂಡ್ ಲಾಕ್‌ಡೌನ್‌ಗೆ ಭಾನುವಾರ ಸಹ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಮಂದಿ ಹೊರಬರದೆ ಮನೆಯಲ್ಲಿಯೇ ಉಳಿದುಕೊಂಡಿರುವುದು ಕಂಡು ಬಂದಿತು. ಈ ನಡುವೆ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ವಿವಿಧ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಸರಳವಾಗಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
   ಎಲ್ಲಾ ಜಾತಿ ಸಮುದಾಯದವರು ನೆಲೆನಿಂತಿರುವ, ಇತ್ತೀಚಿನ ಕೆಲವು ವರ್ಷಗಳಿಂದ ವಾಣಿಜ್ಯ ಬಡಾವಣೆಯಾಗಿ ಕಂಗೊಳಿಸಿರುವ ಜನ್ನಾಪುರ ವ್ಯಾಪ್ತಿಯ ವಾರ್ಡ್ ನಂ.೩೨ರಲ್ಲಿ ಒಟ್ಟು ೪೨೫೨ ಮತದಾರರಿದ್ದು, ಈ ಬಾರಿ ಒಟ್ಟು ೫ ಮಂದಿ ಚುನಾವಣಾ ಕಣದಲ್ಲಿದ್ದಾರೆ.
    ಗುತ್ತಿಗೆದಾರ ಎಸ್. ಹರೀಶ್‌ರವರ ಅತ್ತಿಗೆ ಎಸ್.ಆರ್ ಲತಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಈ ಭಾಗದಲ್ಲಿ ಚಿರಪರಿಚಿತರಾಗಿದ್ದಾರೆ. ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರೊಂದಿಗೆ ಗುರುತಿಸಿಕೊಂಡಿದ್ದ ಮುಖಂಡ ಉಮೇಶ್‌ರವರು ತಮ್ಮ ಪತ್ನಿ ಸವಿತಾ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ ಪ್ರಸ್ತುತ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿರುವ ಚಂದ್ರಪ್ಪ ತಮ್ಮ ಪತ್ನಿ ಕೆ. ಸರಸ್ವತಮ್ಮ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ವಿವಿಧ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜನತಾದಳ(ಸಂಯುಕ್ತ) ಕರ್ನಾಟಕ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಗೌಡ ತಮ್ಮ ಪತ್ನಿ ದಿವ್ಯಶ್ರೀ ಅವರನ್ನು ಜೆಡಿಯು ಬೆಂಬಲಿತ ಪಕ್ಷೇತರ ಅಭ್ಯರ್ಥಿಯನ್ನಾಗಿ ಹಾಗು ಸ್ನೇಹಜೀವಿ ಬಳಗದ ಸದಸ್ಯೆ, ಸಮಾಜ ಸೇವಕ ಪೊಲೀಸ್ ಉಮೇಶ್‌ರವರ ಅತ್ತಿಗೆ ಲತಾ ಸತೀಶ್ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ. ಎಲ್ಲಾ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ಕಂಡು ಬರುತ್ತಿದ್ದು, ಅಭ್ಯರ್ಥಿಗಳು ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದಾರೆ. ಈ ವಾರ್ಡ್‌ನಲ್ಲಿ ಈ ಹಿಂದೆ ಎರಡು ಬಾರಿ ಜೆಡಿಎಸ್ ಪಕ್ಷದಿಂದ ದಿವಂಗತ ಜಿ.ಡಿ ನಟರಾಜ್ ಆಯ್ಕೆಯಾಗಿದ್ದರು.
     ಪರಿಶಿಷ್ಟ ಜಾತಿ, ದಲಿತರು, ಒಕ್ಕಲಿಗರು, ಕುರುಬ ಸಮುದಾಯದವರು ಹೆಚ್ಚಾಗಿರುವ, ವಿಐಎಸ್‌ಎಲ್ ವಸತಿಗೃಹಗಳ ಕೊನೆಯ ಭಾಗದಲ್ಲಿರುವ ಜಿಂಕ್‌ಲೈನ್ ಕೊಳಚೆ ಪ್ರದೇಶ ಒಳಗೊಂಡಿರುವ ವಾರ್ಡ್ ನಂ.೩೧ರಲ್ಲಿ ಒಟ್ಟು ೩೭೦೪ ಮತದಾರರಿದ್ದು, ಈ ಬಾರಿ ಒಟ್ಟು ೪ ಮಂದಿ ಚುನಾವಣಾ ಕಣದಲ್ಲಿದ್ದಾರೆ.
    ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕ ದಿಲೀಪ್  ತಮ್ಮ ಪತ್ನಿ ಬಿ.ಇ ಪದವಿಧರೆ ಪಲ್ಲವಿ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿದ್ದು, ಬಿಜೆಪಿ ಮಹಿಳಾ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಬಿ.ಎಂ. ಮಂಜುಳ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಭಂಡಾರಹಳ್ಳಿಯ ನಿವಾಸಿ, ತಾಲೂಕು ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷ್ಮಣ ತಮ್ಮ ಪತ್ನಿ ವೀಣಾರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಕಳೆದ ಬಾರಿ ವಾರ್ಡ್ ನಂ.೨ರಲ್ಲಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.  ಸ್ನೇಹ ಜೀವಿ ಬಳಗದ ಸದಸ್ಯೆ ಜಯಮ್ಮ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.    ಕಳೆದ ಬಾರಿ ಈ ವಾರ್ಡ್‌ನಲ್ಲಿ ರಾಮಕೃಷ್ಣೇಗೌಡ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಇವರು ಅವಧಿ ಮುಕ್ತಾಯಗೊಳ್ಳುವ ಮೊದಲೇ ಅಕಾಲಿಕ ನಿಧನ ಹೊಂದಿದ ಕಾರಣ ರಾಮಶೆಟ್ಟಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು.
    ಒಕ್ಕಲಿಗರು, ಮುಸ್ಲಿಂ ಹಾಗು ಬಣಜಾರ ಸಮುದಾಯದವರು ಹೆಚ್ಚಾಗಿರುವ, ಗ್ರಾಮೀಣ ಪರಿಸರ ಹೊಂದಿರುವ ಹೊಸಸಿದ್ದಾಪುರ ವ್ಯಾಪ್ತಿಯ ವಾರ್ಡ್ ನಂ.೩೦ರಲ್ಲಿ ಒಟ್ಟು ೨೯೬೧ ಮತದಾರರಿದ್ದಾರೆ. ಈ ಒಟ್ಟು ೫ ಮಂದಿ ಚುನಾವಣಾ ಕಣದಲ್ಲಿದ್ದಾರೆ.
    ಸುಮಾರು ೨ ದಶಕಗಳಿಗೂ ಹೆಚ್ಚು ಕಾಲದಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೈತ ಮೋರ್ಚಾ ತಾಲೂಕು ಉಪಾಧ್ಯಕ್ಷ ಎಂ.ಎಲ್ ರಾಮಕೃಷ್ಣ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಲಾಗಿದೆ. ಇವರು ಈ ಹಿಂದೆ ಎರಡು ಬಾರಿ ಆರ್‌ಎಂಸಿ ಹಾಗು ಒಂದು ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಮುಸ್ಲಿಂ ಅಭ್ಯರ್ಥಿ ಸೈಯದ್ ರಿಯಾಜ್ ಅವರನ್ನು ಕಣಕ್ಕಿಳಿಸಲಾಗಿದೆ. ಜೆಡಿಎಸ್ ಪಕ್ಷದಿಂದ ಜೆ. ಸೋಮಶೇಖರನ್ನು ಕಣಕ್ಕಿಳಿಸಲಾಗಿದೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.  ಕಳೆದ ಬಾರಿ ಈ ವಾರ್ಡ್‌ನಲ್ಲಿ ಜೆಡಿಎಸ್ ಪಕ್ಷದಿಂದ ಲೀಲಾವತಿ ಆಯ್ಕೆಯಾಗಿದ್ದರು.
   ಪರಿಶಿಷ್ಟಜಾತಿ, ಕ್ರಿಶ್ಚಿಯನ್, ಮುಸ್ಲಿಂ ಮತ್ತು ಲಿಂಗಾಯತ ಸಮುದಾಯದವರು ಹೆಚ್ಚಾಗಿರುವ ವಿಐಎಸ್‌ಎಲ್ ಕಾರ್ಖಾನೆ ವಸತಿಗೃಹಗಳನ್ನು ಒಳಗೊಂಡಿರುವ ಗಣೇಶ್‌ಕಾಲೋನಿ-ವಿದ್ಯಾಮಂದಿರ ವ್ಯಾಪ್ತಿಯ ವಾರ್ಡ್ ನಂ. ೨೮ರಲ್ಲಿ ಒಟ್ಟು ೨೭೩೪ ಮತದಾರರಿದ್ದು, ಒಟ್ಟು ೪ ಮಂದಿ ಚುನಾವಣಾ ಕಣದಲ್ಲಿದ್ದಾರೆ.
    ಕಾಂಗ್ರೆಸ್ ಮುಖಂಡ, ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಹಾಗು ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಕಾಂತರಾಜ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಬಿಜೆಪಿ ಪಕ್ಷದಿಂದ ವಾರ್ಡ್ ಪ್ರಮುಖ್ ಎ.ಈ ಶಿವಕುಮಾರ್ ಅವರನ್ನು  ಕಣಕ್ಕಿಳಿಸಲಾಗಿದೆ. ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ಹಾಲಪ್ಪನವರ ಪುತ್ರ ಎಚ್. ಸಂತೋಷ್ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಸ್ನೇಹ ಜೀವಿ ಬಳಗದ ಸದಸ್ಯ ಶ್ರೀಧರ ಮೂರ್ತಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಳೆದ ಬಾರಿ ಈ ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ಲಕ್ಷ್ಮೀದೇವಿ ಆಯ್ಕೆಯಾಗಿದ್ದರು.
        ಪಕ್ಷೇತರ ಅಭ್ಯರ್ಥಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ:
    ನಗರಸಭೆ ವಾರ್ಡ್ ನಂ.೩ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸ್ನೇಹ ಜೀವಿ ಬಳಗದ ಸದಸ್ಯ ಎಸ್ ಯೋಗೀಶ್ ಭಾನುವಾರ ಬಿಜೆಪಿ ಪಕ್ಷಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪನವರ ಸಮ್ಮುಖದಲ್ಲಿ ಸೇರ್ಪಡೆಗೊಂಡಿದ್ದಾರೆ.
    ವಾರ್ಡ್ ನಂ.೩ರ ಬಿಜೆಪಿ ಅಧಿಕೃತ ಅಭ್ಯರ್ಥಿ ಜೆ. ನಕುಲ್ ಅವರಿಗೆ ಎಸ್. ಯೋಗೀಶ್ ಬೆಂಬಲ ಸೂಚಿಸಿದ್ದಾರೆ. ಈ ವಾರ್ಡಿನಲ್ಲಿ ಒಟ್ಟು ೯ ಮಂದಿ ಚುನಾವಣಾ ಕಣದಲ್ಲಿದ್ದು,  ಈ  ಪೈಕಿ ೬ ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.
    ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್, ಪ್ರಮುಖರಾದ ಗಿರೀಶ್ ಪಟೇಲ್, ಬಿ.ಕೆ ಶ್ರೀನಾಥ್, ಹರಿಕೃಷ್ಣ, ಎನ್.ಡಿ ಸತೀಶ್, ಎಂ.ಬಿ ಸುರೇಶ್, ಕೆ.ಟಿ ಶ್ರೀನಿವಾಸ್‌ರಾವ್, ಟಿ.ಎಸ್ ದುಗ್ಗೇಶ್, ಆರ್.ಡಿ ದಿನಕರ್, ಡಿ.ಅರ್ ಕಿರಣ್, ತಿಪ್ಪೇಸ್ವಾಇ, ಡಿ.ಪಿ. ನರೇಂದ್ರ, ಡಿ. ಅಮಿತ್, ಎಲ್ಲೋಜಿ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.