Friday, June 10, 2022

ರಾಜ್ಯದಲ್ಲಿ ಬಿಎಸ್‌ಪಿ ಪಕ್ಷ ಸಂಘಟಿಸಲು ದಲಿತರೆಲ್ಲರೂ ಒಗ್ಗೂಡಿ : ರಹಮತ್ ಉಲ್ಲಾ ಖಾನ್

ಭದ್ರಾವತಿಯಲ್ಲಿ ಶುಕ್ರವಾರ ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರೊ. ಬಿ. ಕೃಷ್ಣಪ್ಪನವರ ೮೫ನೇ ಜನ್ಮದಿನ ಸರಳವಾಗಿ ಆಚರಿಸಲಾಯಿತು. 
    ಭದ್ರಾವತಿ, ಜೂ. ೧೦: ಬಹುಜನ ಸಮಾಜ ಪಕ್ಷ ದಲಿತರ ಪಕ್ಷವಾಗಿದ್ದು, ಎಲ್ಲಾ ದಲಿತರು ಪಕ್ಷ ಸಂಘಟನೆಗೆ ಕೈಜೋಡಿಸುವ ಮೂಲಕ ಪ್ರೊ. ಬಿ. ಕೃಷ್ಣಪ್ಪನವರ ಕನಸನ್ನು ನನಸಾಗಿಸಬೇಕೆಂದು ಪಕ್ಷದ ತಾಲೂಕು ಅಧ್ಯಕ್ಷ ರಹಮತ್ ಉಲ್ಲಾ ಖಾನ್(ಸರ್ದಾರ್) ಹೇಳಿದರು.
    ಪಕ್ಷದ ವತಿಯಿಂದ ಶುಕ್ರವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ ಕೃಷ್ಣಪ್ಪನವರ ೮೫ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಪಕ್ಷವನ್ನು ಮೊದಲು ಸಂಘಟಿಸಿದವರು ಕೃಷ್ಣಪ್ಪನವರಾಗಿದ್ದು, ಆದರೆ ಅವರು ಕಂಡ ಕನಸು ನನಸು ಮಾಡಲು ಸಾಧ್ಯವಾಗಲಿಲ್ಲ. ರಾಜ್ಯದಲ್ಲಿರುವ ದಲಿತರೆಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಸಂಘಟಿಸುವ ಮೂಲಕ ಕೃಷ್ಣಪ್ಪನವರ ಕನಸು ನನಸಾಗಿಸಬೇಕು. ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಪಕ್ಷ ಸಂಘಟಿತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
       ತಾಲೂಕು ಸಂಯೋಜಕ ಎಂ. ರಾಜೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಶೋಷಿತರ, ದಲಿತರ ಆಶಾಕಿರಣ ಪ್ರೊ. ಬಿ. ಕೃಷ್ಣಪ್ಪನವರ ಜನ್ಮದಿನಾಚರಣೆಯನ್ನು ಪಕ್ಷದ ವತಿಯಿಂದ ಸರಳವಾಗಿ ಆಚರಿಸಲಾಗುತ್ತಿದೆ. ಇಂದು ನಾವೆಲ್ಲರೂ ಅವರ ದಾರಿಯಲ್ಲಿ ಸಾಗಬೇಕಾಗಿದೆ ಎಂದರು.
    ಪಕ್ಷದ ಕಾರ್ಯದರ್ಶಿ  ಪಿ. ಮೂರ್ತಿ ಮಾತನಾಡಿ, ಪ್ರೊ. ಬಿ. ಕೃಷ್ಣಪ್ಪನವರು ದಲಿತರು ಹೋರಾಟಕ್ಕೆ ಮಾತ್ರ ಸೀಮಿತವಾಗಿರದೆ ಯಾರ ಗುಲಾಮಗಿರಿಗೂ ಒಳಗಾಗದೆ ರಾಜಕೀಯವಾಗಿ ಸಹ ಮುಂದುವರೆಯಬೇಕೆಂಬ ಉದ್ದೇಶದೊಂದಿಗೆ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಕಾರ್ಯ ಕೈಗೊಂಡರು. ದೇಶದಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಂದು ಹಕ್ಕು ಸಂವಿಧಾನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಕಲ್ಪಿಸಿಕೊಟ್ಟಿದ್ದಾರೆ. ಇದನ್ನು ಅರಿತು ದಲಿತರು ಸಹ ರಾಜಕೀಯವಾಗಿ ಅಧಿಕಾರ ಹೊಂದಲು ಶಕ್ತಿ ಮೀರಿ ಶ್ರಮಿಸಬೇಕೆಂದರು.
 .ಉಪಾಧ್ಯಕ್ಷರಾದ ಚಂದ್ರು ಹಾಗೂ ಶೋಭಾ ಮೂರ್ತಿ ಉಪಸ್ಥಿತರಿದ್ದರು.  ಸಿಹಿ ಹಂಚುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಗಾಲಿ ಕುರ್ಚಿ, ಪ್ರೋಟಿನ್ ಪೌಂಡರ್ ವಿತರಣೆ ಕಾರ್ಯಕ್ರಮ

ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಚಾಲನೆ

ಭದ್ರಾವತಿ, ಜೂ. ೧೦: ಕರ್ನಾಟಕ ಸ್ಟ್ರೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಹಾಗು ಶ್ರಮ ಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಶುಕ್ರವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಗಾಲಿ ಕುರ್ಚಿ ಹಾಗು ಪ್ರೋಟಿನ್ ಪೌಂಡರ್ ಮತ್ತು ಮೊಟ್ಟೆ ವಿತರಣೆ ನಡೆಯಿತು.
ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ, ಕರ್ನಾಟಕ ಸ್ಟ್ರೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಗೌರವಾಧ್ಯಕ್ಷ ಸುರೇಶ್‌ಕುಮಾರ್, ಕಾರ್ಯಾಧ್ಯಕ್ಷ ಅಭಿಲಾಷ್, ಮನೋಹರ್, ಶಿವಣ್ಣಗೌಡ, ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ, ತಾಲೂಕು ಅಧ್ಯಕ್ಷೆ ಚಂದ್ರಕಲಾ, ಪುಷ್ಪ, ಕವಿತಾ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಯುವ ಘಟಕದ ಅಧ್ಯಕ್ಷ ವಿಜಯ್ ಸಾರಥಿ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಾಮನಾಥ್ ಬರ್ಗೆ, ಪಿ. ಗಣೇಶ್‌ರಾವ್, ವಾಹನ ದುರಸ್ತಿಗಾರರ ಸಂಘದ ಅಧ್ಯಕ್ಷ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಓರ್ವ ಫಲಾನುಭವಿಗೆ ಗಾಲಿ ಕುರ್ಚಿ ಹಾಗು ಸುಮಾರು ೫ ಮಂದಿ ಕ್ಷಯಾ ರೋಗ ಪೀಡಿತರಿಗೆ ಸುಮಾರು ೬ ತಿಂಗಳಿಗೆ ಅಗತ್ಯವಿರುವಷ್ಟು ಪ್ರೋಟಿನ್ ಪೌಂಡರ್ ಹಾಗು ಮೊಟ್ಟೆ ಉಚಿತವಾಗಿ ವಿತರಿಸಲಾಯಿತು.


ಭದ್ರಾವತಿಯಲ್ಲಿ ಕರ್ನಾಟಕ ಸ್ಟ್ರೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಹಾಗು ಶ್ರಮ ಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಶುಕ್ರವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಗಾಲಿ ಕುರ್ಚಿ ಹಾಗು ಪ್ರೋಟಿನ್ ಪೌಂಡರ್ ಮತ್ತು ಮೊಟ್ಟೆ ವಿತರಣೆ ನಡೆಯಿತು.