Friday, June 10, 2022

ರಾಜ್ಯದಲ್ಲಿ ಬಿಎಸ್‌ಪಿ ಪಕ್ಷ ಸಂಘಟಿಸಲು ದಲಿತರೆಲ್ಲರೂ ಒಗ್ಗೂಡಿ : ರಹಮತ್ ಉಲ್ಲಾ ಖಾನ್

ಭದ್ರಾವತಿಯಲ್ಲಿ ಶುಕ್ರವಾರ ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರೊ. ಬಿ. ಕೃಷ್ಣಪ್ಪನವರ ೮೫ನೇ ಜನ್ಮದಿನ ಸರಳವಾಗಿ ಆಚರಿಸಲಾಯಿತು. 
    ಭದ್ರಾವತಿ, ಜೂ. ೧೦: ಬಹುಜನ ಸಮಾಜ ಪಕ್ಷ ದಲಿತರ ಪಕ್ಷವಾಗಿದ್ದು, ಎಲ್ಲಾ ದಲಿತರು ಪಕ್ಷ ಸಂಘಟನೆಗೆ ಕೈಜೋಡಿಸುವ ಮೂಲಕ ಪ್ರೊ. ಬಿ. ಕೃಷ್ಣಪ್ಪನವರ ಕನಸನ್ನು ನನಸಾಗಿಸಬೇಕೆಂದು ಪಕ್ಷದ ತಾಲೂಕು ಅಧ್ಯಕ್ಷ ರಹಮತ್ ಉಲ್ಲಾ ಖಾನ್(ಸರ್ದಾರ್) ಹೇಳಿದರು.
    ಪಕ್ಷದ ವತಿಯಿಂದ ಶುಕ್ರವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ ಕೃಷ್ಣಪ್ಪನವರ ೮೫ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಪಕ್ಷವನ್ನು ಮೊದಲು ಸಂಘಟಿಸಿದವರು ಕೃಷ್ಣಪ್ಪನವರಾಗಿದ್ದು, ಆದರೆ ಅವರು ಕಂಡ ಕನಸು ನನಸು ಮಾಡಲು ಸಾಧ್ಯವಾಗಲಿಲ್ಲ. ರಾಜ್ಯದಲ್ಲಿರುವ ದಲಿತರೆಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಸಂಘಟಿಸುವ ಮೂಲಕ ಕೃಷ್ಣಪ್ಪನವರ ಕನಸು ನನಸಾಗಿಸಬೇಕು. ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಪಕ್ಷ ಸಂಘಟಿತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
       ತಾಲೂಕು ಸಂಯೋಜಕ ಎಂ. ರಾಜೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಶೋಷಿತರ, ದಲಿತರ ಆಶಾಕಿರಣ ಪ್ರೊ. ಬಿ. ಕೃಷ್ಣಪ್ಪನವರ ಜನ್ಮದಿನಾಚರಣೆಯನ್ನು ಪಕ್ಷದ ವತಿಯಿಂದ ಸರಳವಾಗಿ ಆಚರಿಸಲಾಗುತ್ತಿದೆ. ಇಂದು ನಾವೆಲ್ಲರೂ ಅವರ ದಾರಿಯಲ್ಲಿ ಸಾಗಬೇಕಾಗಿದೆ ಎಂದರು.
    ಪಕ್ಷದ ಕಾರ್ಯದರ್ಶಿ  ಪಿ. ಮೂರ್ತಿ ಮಾತನಾಡಿ, ಪ್ರೊ. ಬಿ. ಕೃಷ್ಣಪ್ಪನವರು ದಲಿತರು ಹೋರಾಟಕ್ಕೆ ಮಾತ್ರ ಸೀಮಿತವಾಗಿರದೆ ಯಾರ ಗುಲಾಮಗಿರಿಗೂ ಒಳಗಾಗದೆ ರಾಜಕೀಯವಾಗಿ ಸಹ ಮುಂದುವರೆಯಬೇಕೆಂಬ ಉದ್ದೇಶದೊಂದಿಗೆ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಕಾರ್ಯ ಕೈಗೊಂಡರು. ದೇಶದಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಂದು ಹಕ್ಕು ಸಂವಿಧಾನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಕಲ್ಪಿಸಿಕೊಟ್ಟಿದ್ದಾರೆ. ಇದನ್ನು ಅರಿತು ದಲಿತರು ಸಹ ರಾಜಕೀಯವಾಗಿ ಅಧಿಕಾರ ಹೊಂದಲು ಶಕ್ತಿ ಮೀರಿ ಶ್ರಮಿಸಬೇಕೆಂದರು.
 .ಉಪಾಧ್ಯಕ್ಷರಾದ ಚಂದ್ರು ಹಾಗೂ ಶೋಭಾ ಮೂರ್ತಿ ಉಪಸ್ಥಿತರಿದ್ದರು.  ಸಿಹಿ ಹಂಚುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

No comments:

Post a Comment