Friday, October 18, 2024

ಅರಳಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಾಲ್ಮೀಕಿ ಜಯಂತಿ

ಭದ್ರಾವತಿ ತಾಲೂಕಿನ ಅರಳಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಹಾಕವಿ, ರಾಮಾಯಣದ ಕರ್ತೃ, ಮಹಾಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. 
    ಭದ್ರಾವತಿ: ತಾಲೂಕಿನ ಅರಳಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಹಾಕವಿ, ರಾಮಾಯಣದ ಕರ್ತೃ, ಮಹಾಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. 
    ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಮಹಾಕಾವ್ಯ ರಾಮಾಯಣ ರಚಿಸಿ ಜಗತ್ತಿಗೆ ಹಲವು ಆದರ್ಶ ಮೌಲ್ಯಗಳನ್ನು ಸಾರಿದ ಮಹರ್ಷಿ ವಾಲ್ಮೀಕಿ ಅವರ ಸಮನ್ವಯತೆಯ ವಿಚಾರಗಳು ಸರ್ವಕಾಲಕ್ಕೂ ಸತ್ಯವಾದುದು.ಎಂದರು.
ಕಾರ್ಯಕ್ರಮದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಸರ್ಕಾರದ ಉಚಿತ ಲ್ಯಾಪ್‌ಟಾಪ್ ಯೋಜನೆಗೆ ಆಯ್ಕೆಯಾದ ಶಾಲೆಯ ೩ ವಿದ್ಯಾರ್ಥಿಗಳನ್ನು ಹಾಗು ಈ ಯೋಜನೆಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸಿದ ಶಿಕ್ಷಕರನ್ನು ಅಭಿನಂದಿಸಲಾಯಿತು.  
ಪ್ರಭಾರಿ ಮುಖ್ಯ ಶಿಕ್ಷಕ ಎಂ. ದಿವಾಕರ್ ಅಧ್ಯಕ್ಷತೆವಹಿಸಿದ್ದರು.   
     ಎಸ್‌ಡಿಎಂಸಿ ಉಪಾಧ್ಯಕ್ಷ ಸುರೇಶ್ ಹಾಗು ಸದಸ್ಯರು, ಶಿಕ್ಷಕಿ ಜಾನಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಶಿಕ್ಷಕಿಯರಾದ ಮಮತಾ ಸ್ವಾಗತಿಸಿ, ರೇಣುಕಾ ವಂದಿಸಿದರು. ಶಾಂತಪ್ಪ ಕಾರ್ಯಕ್ರಮ ನಿರೂಪಿಸಿದರು. 

ಅ.೧೯ರಂದು ವಿದ್ಯುತ್ ವ್ಯತ್ಯಯ


    ಭದ್ರಾವತಿ: ಮೆಸ್ಕಾಂ ನಗರ ಮತ್ತು ಗ್ರಾಮೀಣ ಉಪವಿಭಾಗಗಳ ವಾಪ್ತಿಯ ಮಾರ್ಗಗಳ ತುರ್ತು ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಅ.೧೯ರ ಶನಿವಾರ ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.  
    ಕಾಗದ ನಗರದ ೧ನೇ ವಾರ್ಡ್ ನಿಂದ ೧೦ನೇ ವಾರ್ಡ್‌ವರೆಗೆ ಎಂ.ಪಿ.ಎಂ. ವಸತಿ, ಎಂ.ಪಿ.ಎಂ ಬಡಾವಣೆ, ಆನೆಕೊಪ್ಪ, ಜೆಪಿಎಸ್ ಕಾಲೋನಿ, ಉಜ್ಜನಿಪುರ, ದೊಡ್ಡಗೊಪ್ಪೇನಹಳ್ಳಿ, ಬಾರಂದೂರು, ಮಸರಹಳ್ಳಿ, ಕಾರೇಹಳ್ಳಿ, ಹಡ್ಲಘಟ್ಟ, ಶಿವಪುರ, ಕೆಂಚೇನಹಳ್ಳಿ, ಮಾವಿನಕೆರೆ, ಮಾವಿನಿಕೆರೆ ಕಾಲೋನಿ, ಭೋವಿ ಕಾಲೋನಿ, ಗಂಗೂರು, ದೊಡ್ಡೇರಿ, ಉಕ್ಕುಂದ, ಕೆಂಚಮ್ಮನಹಳ್ಳಿ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.  ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಎಸ್.ಎಸ್ ಸುಮಿತ್ರ ನಿಧನ

ಎಸ್.ಎಸ್ ಸುಮಿತ್ರ
    ಭದ್ರಾವತಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ಸಮಿತಿ ಅಧ್ಯಕ್ಷೆ, ಸಾಹಿತಿ, ನಿವೃತ್ತ ಉಪನ್ಯಾಸಕಿ ಎಮೆರಿಟಸ್ ಡಾ. ವಿಜಯದೇವಿಯವರ ಅತ್ತಿಗೆ  ಎಸ್.ಎಸ್ ಸುಮಿತ್ರ(೭೨) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು. 
       ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದರು. ಸುಮಿತ್ರಮ್ಮ ನಗರದ ಅಂಬೇಡ್ಕರ್ ವೃತ್ತದ ಸಮೀಪದಲ್ಲಿರುವ ಎಸ್.ಜಿ ಶಿವಶಂಕರಯ್ಯ ಅಂಡ್ ಸನ್ಸ್  ಪೆಟ್ರೋಲ್ ಬಂಕ್ ಮಾಲೀಕ ದಿವಂಗತ ಎಸ್.ಎಸ್ ಶಿವಾನಂದ್‌ರವರ ಪತ್ನಿಯಾಗಿದ್ದಾರೆ. ಹಳೇನಗರದ ಎಸ್.ಎಸ್.ಕೆ ಬಡಾವಣೆಯಲ್ಲಿ ವಾಸವಾಗಿದ್ದರು.  
    ಇವರ ಅಂತ್ಯಕ್ರಿಯೆ ಸಂಜೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು. ಸುಮಿತ್ರಮ್ಮನವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಎಸ್.ಎಸ್ ಕುಮಾರಸ್ವಾಮಿ ಹಾಗು ಸಹೋದರರು ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಶ್ರೀ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಅನ್ನಸಂತರ್ಪಣೆ

ಭದ್ರಾವತಿ ನಗರಸಭೆ ವ್ಯಾಪ್ತಿ ಸುರಗಿತೋಪು ೪ನೇ ತಿರುವಿನ ರಸ್ತೆಯಲ್ಲಿ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿ ವತಿಯಿಂದ  ಶ್ರೀ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ಗಣ ಹೋಮ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. 
    ಭದ್ರಾವತಿ : ನಗರಸಭೆ ವ್ಯಾಪ್ತಿ ಸುರಗಿತೋಪು ೪ನೇ ತಿರುವಿನ ರಸ್ತೆಯಲ್ಲಿ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿ ವತಿಯಿಂದ  ಶ್ರೀ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ಗಣ ಹೋಮ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. 
    ಈ ಬಾರಿ ವಿಶೇಷವಾಗಿ ಅಡುಗೆ ಭಟ್ಟನಾಗಿ ಅಡುಗೆ ತಯಾರಿಯಲ್ಲಿ ತೊಡಗಿರುವ ಗಣಪ ಹಾಗು ಸಹಾಯಕನಾಗಿರುವ ಮೂಷಿಕ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಪ್ರತಿವರ್ಷದಂತೆ ಈ ಬಾರಿ ಸಹ ಬೆಳಿಗ್ಗೆ ಗಣ ಹೋಮ, ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ಜರುಗಿತು. 
    ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ನಗರಸಭೆ ಸದಸ್ಯೆ ಜನಶೀಲ ಸುರೇಶ್, ಸೇರಿದಂತೆ ಸುರಗಿತೋಪು ಹಾಗು ಸುತ್ತಮುತ್ತಲ ಪ್ರದೇಶಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. 

ಇಸ್ಪೀಟ್ ಅಡ್ಡೆ ಮೇಲೆ ದಾಳಿ : ಪ್ರಕರಣ ದಾಖಲು

ಭದ್ರಾವತಿ: ತಾಲೂಕಿನ ಅತ್ತಿಗುಂದ ಚಾನಲ್ ಏರಿಯಾ ಹತ್ತಿರ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ದಾಳಿ ನಡೆಸಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ. 
ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಅತ್ತಿಗುಂದ ಚಾನಲ್ ಏರಿಯಾ ಹತ್ತಿರ ಪರಿಶೀಲನೆ ನಡೆಸಿದಾಗ ಚಂದ್ರಶೇಖರ್, ಮಂಜುನಾಥ ಸೇರಿದಂತೆ ೩-೪ ಜನರು ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ದಾಳಿ ನಡೆಸಿ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.