ಶನಿವಾರ, ಆಗಸ್ಟ್ 2, 2025

ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ವರ್ಗಾವಣೆ

ಪ್ರಕಾಶ್ ಎಂ. ಚನ್ನಪ್ಪನವರ್ 
    ಭದ್ರಾವತಿ: ಬಹಳ ದಿನಗಳಿಂದ ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಬೇರೆಡೆಗೆ ವರ್ಗಾವಣೆಗೊಳ್ಳುವ ವದಂತಿ ಕೇಳಿ ಬರುತ್ತಿತ್ತು. ಇದೀಗ ಸರ್ಕಾರ ಇವರನ್ನು ಶಿರಸಿ ನಗರಸಭೆಗೆ ವರ್ಗಾವಣೆಗೊಳಿಸಿ ಆದೇಶಿಸಿದೆ.  
    ಕೆಲವು ದಿನಗಳ ಹಿಂದೆಯೇ ಸರ್ಕಾರ ಇವರ ವರ್ಗಾವಣೆ ಆದೇಶ ಹೊರಡಿಸಿದ್ದು, ಶನಿವಾರ ನಗರಸಭೆ ನೂತನ ಪೌರಾಯುಕ್ತರಾಗಿ ಕೆ.ಎನ್ ಹೇಮಂತ್‌ರವರು ಅಧಿಕಾರ ಸ್ವೀಕರಿಸಿದ ಹಿನ್ನಲೆಯಲ್ಲಿ ಪ್ರಕಾಶ್ ಎಂ. ಚನ್ನಪ್ಪನವರ್ ಸೋಮವಾರ ಶಿರಸಿ ನಗರಸಭೆಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿಂದೆ ಪಿ.ಎಂ ಚನ್ನಪ್ಪನವರ್  ಸವದತ್ತಿ ಪುರಸಭೆ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಪೌರಾಯುಕ್ತರ ಹುದ್ದೆಗೆ ಮುಂಬಡ್ತಿಪಡೆದು ಇಲ್ಲಿಗೆ ವರ್ಗಾವಣೆಗೊಂಡಿದ್ದರು. ಸುಮಾರು ೧೯ ತಿಂಗಳು ಕರ್ತವ್ಯ ನಿರ್ವಹಿಸಿದ್ದು, ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದರು.

ನಗರಸಭೆ ನೂತನ ಪೌರಾಯುಕ್ತರಾಗಿ ಕೆ.ಎನ್ ಹೇಮಂತ್ ಅಧಿಕಾರ ಸ್ವೀಕಾರ

ಭದ್ರಾವತಿ ನಗರಸಭೆ ನೂತನ ಪೌರಾಯುಕ್ತ ಕೆ.ಎನ್ ಹೇಮಂತ್ 
    ಭದ್ರಾವತಿ : ನಗರಸಭೆ ನೂತನ ಪೌರಾಯುಕ್ತರಾಗಿ ಕೆಎಂಎಸ್ ಗ್ರೇಡ್-೨ ಅಧಿಕಾರಿ, ಶಿರಾಳಕೊಪ್ಪ ಪುರಸಭೆ ಮುಖ್ಯಾಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಎನ್ ಹೇಮಂತ್ ಶನಿವಾರ ಅಧಿಕಾರ ಸ್ವೀಕರಿಸಿದರು. 
    ಹೇಮಂತ್‌ರವರನ್ನು ಸರ್ಕಾರ ಪೌರಾಯುಕ್ತರ ಹುದ್ದೆಗೆ ಮುಂಬಡ್ತಿ ನೀಡಿ ವರ್ಗಾವಣೆಗೊಳಿಸಿದೆ. ಈ ಮೊದಲು ಇವರನ್ನು ಬಳ್ಳಾರಿ ಮಹಾನಗರಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗೆ ನಿಯೋಜನೆಗೊಳಿಸುವ ಉದ್ದೇಶ ಸರ್ಕಾರ ಕೈಗೊಂಡಿತ್ತು. ಪುನಃ ಅದನ್ನು ಮಾರ್ಪಡಿಸಿ ಇಲ್ಲಿನ ನಗರಸಭೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ. 
    ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ನೂತನ ಪೌರಾಯುಕ್ತ ಹೇಮಂತ್‌ರವರಿಗೆ ಅಧಿಕಾರ ಹಸ್ತಾಂತರಿಸಿದರು. ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಹಸು ಕಳ್ಳತನ : ಪೊಲೀಸರಿಗೆ ದೂರು



    ಭದ್ರಾವತಿ : ತಪ್ಪಿಸಿಕೊಂಡಿದ್ದ ಹಸು ಕಳ್ಳತನ ಮಾಡಲಾಗಿದ್ದು, ಕಳುವು ಮಾಡಿರುವವರನ್ನು ತಕ್ಷಣ ಪತ್ತೆಮಾಡಿ ಹಸು ಮರಳಿಸುವಂತೆ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
    ನಗರದ ಬಿ.ಎಚ್ ರಸ್ತೆ ನಿವಾಸಿ, ಸುಮಾರು ೬೨ ವರ್ಷ ವಯಸ್ಸಿನ ಸುಬ್ರಮಣಿ ಎಂಬುವರು ಜು. ೨೯ರಂದು ತಮ್ಮ ೩ ಹಸುಗಳನ್ನು ಮೇಯಿಸಿಕೊಂಡು ವಾಪಸ್ ಮನೆಗೆ ಹೋಗುವಾಗ ಒಂದು ಹಸು ತಪ್ಪಿಸಿಕೊಂಡಿದೆ. ಎಲ್ಲಾ ಕಡೆ ಹುಡುಕಿದರೂ ಹಸು ಸಿಕ್ಕಿರುವುದಿಲ್ಲ. ಜು.೩೦ರಂದು ಚಾಮೇಗೌಡ ಏರಿಯಾದಲ್ಲಿ  ಯಾರೋ ಕಳ್ಳರು ಹಸು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸುಬ್ರಮಣಿಯವರಿಗೆ ಮಾಹಿತಿ ಬಂದಿದೆ. ಈ ಹಿನ್ನಲೆಯಲ್ಲಿ ಆ.೧ರಂದು ಪೊಲೀಸರಿಗೆ ದೂರು ನೀಡಿದ್ದು,  ಕಳ್ಳತನ ಮಾಡಲಾಗಿರುವ ಸುಮಾರು ೪೦ ಸಾವಿರ ರು. ಮೌಲ್ಯದ ಹಸು ಪತ್ತೆ ಮಾಡಿಕೊಡುವಂತೆ ಕೋರಲಾಗಿದೆ. 

sಅಂತರಗಂಗೆ ಭದ್ರಾ ಕಾಲುವೆಯಲ್ಲಿ ೩ ದಿನಗಳ ಹಿಂದೆ ಮುಳುಗಿದ್ದ ಕಾರು ಮೇಲೆತ್ತುವಲ್ಲಿ ಯಶಸ್ವಿ

ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕಳೆದ ೩ ದಿನಗಳ ಹಿಂದೆ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ಭದ್ರಾ ಕಾಲುವೆಗೆ ಬಿದ್ದಿದ್ದ ಕಾರನ್ನು ಈಜು ಮುಳುಗು ತಜ್ಞರು ಹಾಗು ಗ್ರಾಮಸ್ಥರು  ಕ್ರೇನ್ ನೆರವಿನೊಂದಿಗೆ ಮೇಲೆತ್ತಿರುವ ಘಟನೆ ಶನಿವಾರ ನಡೆದಿದೆ. 
    ಭದ್ರಾವತಿ : ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕಳೆದ ೩ ದಿನಗಳ ಹಿಂದೆ ಭದ್ರಾ ಕಾಲುವೆಗೆ ಬಿದ್ದಿದ್ದ ಕಾರನ್ನು ಈಜು ಮುಳುಗು ತಜ್ಞರು ಹಾಗು ಗ್ರಾಮಸ್ಥರು  ಕ್ರೇನ್ ನೆರವಿನೊಂದಿಗೆ ಮೇಲೆತ್ತಿರುವ ಘಟನೆ ಶನಿವಾರ ನಡೆದಿದೆ. 
  ಕಳೆದ ಮೂರು ದಿನಗಳ ಹಿಂದೆ ಸಿದ್ದಾರೂಢನಗರದ ನಿವಾಸಿ ಶಶಾಂಕ್ ಜಾಧವ್ ಎಂಬುವರು ಅಂತರಗಂಗೆ ಗ್ರಾಮದ ಸಂಬಂಧಿಕರ ಮನೆಗೆ ಹೊಗಿ ರಾತ್ರಿ ವೇಳೆಯಲ್ಲಿ ಬರುವಾಗ ರಸ್ತೆಗೆ ಅಡ್ಡಲಾಗಿ ನಾಯಿಯೊಂದು ಬಂದ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡು ಭದ್ರಾ ನದಿಯ ಗ್ರಾಮದ ದೊಡ್ಡ ಕಾಲುವೆಯಲ್ಲಿ ಬಿದ್ದಿದೆ. ಶಶಾಂಕ್ ಪಡಾಡಸದೃಶವಾಗಿ ಬದುಕಿ ಮೇಲೆ ಬಂದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ.  


    ನೀರಿನಲ್ಲಿ ಮುಳುಗಿದ ಕಾರು ಮೇಲೆತ್ತಲು ಮಲ್ಪೆಯಿಂದ ಮುಳುಗು ತಜ್ಞ ಮಲ್ಪೆ ಈಶ್ವರ್ ಮತ್ತು ತಂಡದವರು ಆಗಮಿಸಿ ಗ್ರಾಮಸ್ಥರು, ಪೊಲೀಸರು ಹಾಗು ಕ್ರೇನ್ ನೆರವಿನೊಂದಿಗೆ ಕಾರು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.  
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್, ಗ್ರಾಮಾಂತರ ವೃತ್ತ ನಿರೀಕ್ಷಕ  ಜಗದೀಶ್ ಹಂಚಿನಾಳ ಮತ್ತು ಉಕ್ಕುಂದ ರತ್ನಾಪುರ ಗ್ರಾಮದ ಈಜು ತಜ್ಞ ವರದೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.