ಪತ್ರಿಕಾ ಹೇಳಿಕೆಯಲ್ಲಿ ಆಯೋಜಕರು, ಮಾಲೀಕರು ಸ್ಪಷ್ಟನೆ
ಭದ್ರಾವತಿ, ಮಾ. ೧೨: ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಬಿವೈಕೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಫೆ.೨೭ ಮತ್ತು ೨೮ರಂದು ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿಗೆ ಸಂಬಂಧಿಸಿದಂತೆ ಇದೀಗ ಕ್ಲಬ್ ಮೌನ ಮುರಿದಿದ್ದು, ಯಾವುದೇ ರಾಜಕೀಯ ಪಕ್ಷದ ಪರವಾಗಿ ಪಂದ್ಯಾವಳಿ ಆಯೋಜಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಂದ್ಯಾವಳಿಯ ಬಹುಮಾನ ವಿತರಣೆ ಮುಕ್ತಾಯದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ನಡುವೆ ನಡೆದಿರುವ ಗಲಾಟೆ ಪ್ರಕರಣ ರಾಜ್ಯಮಟ್ಟದಲ್ಲಿ ಸುದ್ದಿಯಾಗುವ ಮೂಲಕ ಇದೀಗ ಇಡೀ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ತಿರುಗಿ ಬಿದ್ದಿದ್ದು, ಶಿವಮೊಗ್ಗದಲ್ಲಿ ಮಾ.೧೩ರ ಶನಿವಾರ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಈ ಹಂತದಲ್ಲಿ ಇದೀಗ ಕ್ಲಬ್ ಮೌನ ಮುರಿದಿದೆ.
ವಿವಿಧ ತಂಡಗಳ ಮಾಲೀಕರು ಹಾಗು ಆಯೋಜಕರು ಈ ಕುರಿತು ಪತ್ರಿಕಾಹೇಳಿಕೆ ನೀಡಿದ್ದು, ನಗರದಲ್ಲಿ ಕಬಡ್ಡಿ ಕ್ರೀಡೆಯನ್ನು ಉತ್ತೇಜಿಸುವ ಹಾಗು ಪ್ರತಿಭಾವಂತ ಕಬಡ್ಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕ್ರೀಡಾ ಮನೋಭಾವನೆಯೊಂದಿಗೆ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಇಲ್ಲಿ ಯಾವುದೇ ರಾಜಕೀಯವಿಲ್ಲ ಪಕ್ಷಾತೀತವಾಗಿ ಎಲ್ಲರೂ ಸೇರಿ ಪಂದ್ಯಾವಳಿಯನ್ನು ನಡೆಸಲಾಗಿದೆ ಎಂದು ಮಾಲೀಕರು ಹಾಗು ಆಯೋಜಕರಾಗಿರುವ ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ವಿ. ವೆಂಕಟೆಶ್, ಉಮೇಶ್, ಆನಂದ್, ಮಣಿ ಎಎನ್‌ಎಸ್ ಮತ್ತು ಬಿ.ಎಸ್ ಜಗದೀಶ್ ತಿಳಿಸಿದ್ದಾರೆ.
No comments:
Post a Comment