Saturday, January 2, 2021

ದಕ್ಷ, ಪ್ರಾಮಾಣಿಕ ನಗರಸಭೆ ಪೌರಾಯುಕ್ತ ಮನೋಹರ್‌ಗೆ ‘ಜನಸ್ಪಂದಕ ಅಧಿಕಾರಿ’ ಬಿರುದು

ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಪ್ರಶಂಸೆ

ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ನ್ಯೂಟೌನ್ ನಗರಸಭೆ ಶಾಖಾ ಕಛೇರಿ ಅವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ  'ಜನಸ್ಪಂದಕ ಅಧಿಕಾರಿ' ಬಿರುದು ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಜ. ೨: ನಗರದ ಸರ್ವತೋರ್ಮುಖ ಬೆಳವಣಿಗೆಯಲ್ಲಿ ನಗರಸಭೆ ಪೌರಾಯುಕ್ತ ಮನೋಹರ್‌ರವರ ಸೇವೆ ಅಪಾರವಾಗಿದ್ದು, ಅವರ ಸೇವೆ ಮುಂದಿನ ದಿನಗಳಲ್ಲೂ ಇದೆ ರೀತಿ ಮುಂದುವರೆಯುವಂತಾಗಲಿ ಎಂದು ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ‍್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಆಶಯ ವ್ಯಕ್ತಪಡಿಸಿದರು.
     ಕಳೆದ ಸುಮಾರು ೨ ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದ ನಗರಸಭೆ ಆಡಳಿತವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವ ಜೊತೆಗೆ ಜನ ಮೆಚ್ಚುಗೆಗೆ ಪಾತ್ರರಾಗಿರುವ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ನ್ಯೂಟೌನ್ ನಗರಸಭೆ ಶಾಖಾ ಕಛೇರಿ ಅವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ  'ಜನಸ್ಪಂದಕ ಅಧಿಕಾರಿ' ಬಿರುದು ಪ್ರಧಾನ ಹಾಗು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
     ಮನೋಹರ್‌ರವರು ನಗರಸಭೆ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ನಗರದ ಸರ್ವತೋಮುಖ ಬೆಳವಣಿಗೆಯಾಗುತ್ತಿದ್ದು, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರಸಭೆ ವ್ಯಾಪ್ತಿಯಲ್ಲಿರುವ ಸುಮಾರು ೭೦ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸುವ ಜೊತೆಗೆ ತಾಲೂಕು ಆಡಳಿತದ ಸಹಕಾರದಿಂದ ಬೌಂಡರಿ ನಿಗದಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ, ಪ್ಲಾಸ್ಟಿಕ್ ನಿರ್ಮೂಲನೆ, ರಸ್ತೆ, ಚರಂಡಿ ನಿರ್ಮಾಣ, ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿ ಕಲ್ಪಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
     ಅದರಲ್ಲೂ ನ್ಯೂಟೌನ್ ಭಾಗದ ಜನ್ನಾಪುರ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಪ್ರಮುಖವಾಗಿ ಮುಂದಿನ ೫೦ ವರ್ಷಗಳಿಗೆ ಅನುಗುಣವಾಗಿ ಸಮರ್ಪಕ ಕುಡಿಯುವ ನೀರಿನ ಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು. ನ್ಯೂಟೌನ್ ಶಾಖಾ ಕಛೇರಿ ಆವರಣದಲ್ಲಿ ಆಧಾರ್ ಕೌಂಟರ್ ತೆರೆಯಲು ಅವಕಾಶ ನೀಡಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಿಕೊಟ್ಟಿರುವುದು. ಕೆಇಬಿ ಕೌಂಟರ್ ಮತ್ತು ನೆಮ್ಮದಿಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಬಿಸಿಲು, ಮಳೆ, ಗಾಳಿಯಿಂದ ತೊಂದರೆಯಾಗದಂತೆ ಶೆಲ್ಟರ್ ನಿರ್ಮಿಸಿಕೊಟ್ಟಿರುವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ದಕ್ಷ, ಪ್ರಾಮಾಣಿಕ, ಸರಳ ಸಜ್ಜನಿಕೆ ಅಧಿಕಾರಿಯಾಗಿ ಮನೋಹರ್ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
    ಕಾರ್ಯಕ್ರಮದಲ್ಲಿ ಅರ್. ವೇಣುಗೋಪಾಲ್‌ರವರ ೬೩ನೇ ವರ್ಷದ ಜನ್ಮದಿನದ ಅಂಗವಾಗಿ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ರಮಾವೆಂಕಟೇಶ್, ಶೈಲಜಾ ರಾಮಕೃಷ್ಣ, ದೇವಿಕಾ ನಾಗರಾಜ್, ಶ್ಯಾಮಲಾ ರಾಜು, ಗ್ಸೇವಿಯರ್, ಸುಬ್ರಮಣ್ಯ, ಗೀತಾರವಿ, ವಿಜಯಲಕ್ಷ್ಮಿ, ಸುಧಾ, ಮುರುಗನ್, ವಿಶ್ವೇಶ್ವರರಾವ್ ಗಾಯಕ್ವಾಡ್, ಕೋಟೆಗೌಡ, ಗಿರಿನಾಯ್ಡು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

No comments:

Post a Comment