ಭದ್ರಾವತಿಯಲ್ಲಿ ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಗರದ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ಭದ್ರಾವತಿ : ನಗರಸಭೆ ವ್ಯಾಪ್ತಿಯಲ್ಲಿ ಸುಗಮ ಸಂಚಾರ ಸಂಬಂಧ ಸಾಕಷ್ಟು ದೂರುಗಳು ನಗರಸಭೆಗೆ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಗರದ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ಸಭೆಯಲ್ಲಿ ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ನಗರಸಭೆ ಸದಸ್ಯರಿಂದ ಹಲವು ಸಲಹೆಗಳು ವ್ಯಕ್ತವಾದವು. ನಗರದ ಬಿ.ಎಚ್ ರಸ್ತೆ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದ ಕೆನರಾ ಬ್ಯಾಂಕ್ ಬಳಿ ಹಾಗು ಮದ್ಯಂಗಡಿಗಳ ಬಳಿ ವಾಹನ ದಟ್ಟಣೆ ಅಧಿಕವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಬೇಕು. ಈ ಹಿಂದಿನ ಸಭೆಯಲ್ಲಿ ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿರುವ ಮದ್ಯಂಗಡಿಗಳ ಮಾಲೀಕರಿಗೆ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಸೂಚನಾ ಪತ್ರ ನೀಡುವಂತೆ ತೀರ್ಮಾನಿಸಲಾಗಿತ್ತು. ಆದರೆ ಯಾವುದೇ ಮದ್ಯಂಗಡಿಗಳಿಗೆ ಸೂಚನಾ ಪತ್ರ ನೀಡದಿರುವುದು ತಿಳಿದುಬಂದಿದೆ. ಮತ್ತೊಮ್ಮೆ ಸೂಚನಾ ಪತ್ರ ನೀಡುವಂತೆ ಸಲಹೆ ನೀಡಲಾಯಿತು.
ವಾಹನ ದಟ್ಟಣೆ ಅಧಿಕವಾಗಿರುವ ಪ್ರಮುಖ ರಸ್ತೆಗಳಲ್ಲಿ ಸಂಚಾರಿ ಸೂಚನಾ ಫಲಕ, ನಗರದ ಪ್ರಮುಖ ೧೦ ಸ್ಥಳಗಳಲ್ಲಿ ೫೦ ಮೀಟರ್‌ನಂತೆ ೩೦ ಕಿ.ಮೀ ವೇಗಮಿತಿ ಸೂಚನಾ ಫಲಕ ಅಳವಡಿಸುವುದು. ಮಾಧವಚಾರ್ ವೃತ್ತ, ತಿಮ್ಮಯ್ಯ ಮಾರುಕಟ್ಟೆ ಸೇರಿದಂತೆ ಖಾಸಗಿ ಬಸ್‌ಗಳು ನಿಲುಗಡೆಗೊಳ್ಳುವ ಸ್ಥಳಗಳಲ್ಲಿ ನಿಲುಗಡೆಗೆ ಸಂಬಂಧಿಸಿದ ಸೂಚನಾ ಫಲಕಗಳನ್ನು ಅಳವಡಿಸುವುದು. ಹಳೇಸೇತುವೆ ಬಳಿ ರಸ್ತೆಗೆ ಎರಡು ಬದಿ ವೇಗ ನಿಯಂತ್ರಕ ಅಳವಡಿಸುವುದು(ಹಂಮ್ಸ್), ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸುವುದು. ಪ್ರಮುಖ ವೃತ್ತಗಳಲ್ಲಿ ಸೂಚನಾ ದೀಪ(ಸಿಗ್ನಲ್ ಲೈಟ್)ಗಳನ್ನು ಅಳವಡಿಸುವುದು. ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವುದು. ಶಾಲಾ-ಕಾಲೇಜುಗಳ ಬಳಿ ಮಕ್ಕಳ ಸುರಕ್ಷತೆಗೆ ಗಮನ ಹರಿಸುವುದು ಸೇರಿದಂತೆ ಇನ್ನಿತರ ಸಲಹೆಗಳನ್ನು ವ್ಯಕ್ತಪಡಿಸಲಾಯಿತು.
ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾತನಾಡಿ, ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್ ಅಹಮದ್ ಉಪಸ್ಥಿತರಿದ್ದರು. ವಿವಿಧ ಪೊಲೀಸ್ ಠಾಣೆಗಳ ನಿರೀಕ್ಷಕರು ಹಾಗು ಉಪ ನಿರೀಕ್ಷಕರುಗಳಾದ ನಾಗಮ್ಮ, ರಮೇಶ್, ಚಂದ್ರಶೇಖರ್ ನಾಯ್ಕ, ಕೃಷ್ಣಕುಮಾರ್ ಮಾನೆ, ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ವಿ. ಕದಿರೇಶ್, ಬಿ.ಟಿ ನಾಗರಾಜ್, ಚನ್ನಪ್ಪ, ಬಸವರಾಜ್ ಬಿ. ಆನೇಕೊಪ್ಪ, ಬಿ.ಎಂ ಮಂಜುನಾಥ್, ಐ.ವಿ ಸಂತೋಷ್‌ಕುಮಾರ್ ಸೇರಿದಂತೆ ನಗರಸಭೆ ಹಾಗು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
No comments:
Post a Comment