Wednesday, December 15, 2021

ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ತಕ್ಷಣ ಶಿಕ್ಷೆ ವಿಧಿಸಿ

ಬಂಜಾರ ಯುವಕರ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ

ಬಂಜಾರ ಸಮುದಾಯದ ಪರಿಶಿಷ್ಟ ಜಾತಿಗೆ ಸೇರಿದ ಹೆಣ್ಣು ಮಕ್ಕಳ ಮೇಲೆ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ಬುಧವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೧೫: ಬಂಜಾರ ಸಮುದಾಯದ ಪರಿಶಿಷ್ಟ ಜಾತಿಗೆ ಸೇರಿದ ಹೆಣ್ಣು ಮಕ್ಕಳ ಮೇಲೆ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ಬುಧವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ್ ತಾಲೂಕಿನ ಹುಲ್ಲೂರ ತಾಂಡದ ಬಂಜಾರ ಸಮುದಾಯದ ಅಪ್ರಾಪ್ತ ಬಾಲಕಿ ರಂಜಿತಾ ರಾಥೋಡ್ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಮಾತನಾಡಿದ ಪ್ರಮುಖರು, ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಬಂಜಾರ ಸಮುದಾಯದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
    ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಅತ್ಯಾಚಾರಿಗಳಿಗೆ ತಕ್ಷಣ ಕಠಿಣ ಶಿಕ್ಷೆ ವಿಧಿಸಬೇಕು. ಆ ಮೂಲಕ ಸಮಾಜದಲ್ಲಿ ಎಚ್ಚರಿಕೆ ಮೂಡಿಸುವಂತಾಗಬೇಕು. ರಂಜಿತಾ ರಾಥೋಡ್ ಮೇಲಿನ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವವರನ್ನು ತಕ್ಷಣ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
    ಸರ್ಕಾರ ರಂಜಿತಾ ರಾಥೋಡ್ ಬಾಲಕಿಯ ಕುಟುಂಬಕ್ಕೆ ತಕ್ಷಣ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಜೊತೆಗೆ ಪ್ರಕರಣದ ತಪ್ಪಿತಸ್ಥರಿಗೆ ೨೦ ಲಕ್ಷ ರು. ದಂಡ ವಿಧಿಸಿ ಕುಟುಂಬಕ್ಕೆ ಸಂಪೂರ್ಣ ಆಶ್ರಯ ನೀಡುವ ಮೂಲಕ ಕಾನೂನಿನ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.
    ಬಂಜಾರ ಸಮುದಾಯದ ಮಂಜು ಮಹಾರಾಜ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಕೃಷ್ಣಾನಾಯ್ಕ, ಪ್ರಮುಖರಾದ ಗಿರೀಶ್, ಚಂದ್ರನಾಯ್ಕ, ಸಂತೋಷ್, ಪ್ರವೀಣ್‌ಕುಮಾರ್, ಭೋಜ್ಯನಾಯ್ಕ, ವೇವೇಶ, ನಾಗನಾಯ್ಕ, ಮಂಜನಾಯ್ಕ, ರಮೇಶ್, ಕಾಂತ ದಿನೇಶ್, ಮಂಜುಳ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment