* ಅನಂತಕುಮಾರ್
ಭದ್ರಾವತಿ, ಮೇ. ೬: ಸುಮಾರು ೨ ದಶಕಗಳ ಹಿಂದಿನ ವರೆಗೂ ಭದ್ರಾವತಿ ಆಕಾಶವಾಣಿ ಕೇಂದ್ರ ಎಲ್ಲರ ಮನೆ ಮಾತಾಗಿತ್ತು. ಪ್ರಸ್ತುತ ಸಂಪೂರ್ಣವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಸರ್ಕಾರ ಕೈಗೊಳ್ಳುತ್ತಿರುವ ತೀರ್ಮಾನಗಳು ಸಹ ಮಾರಕವಾಗಿ ಪರಿಣಮಿಸಿವೆ.
೧೯೬೫ರಲ್ಲಿ ಆರಂಭಗೊಂಡ ಆಕಾಶವಾಣಿ ಕೇಂದ್ರ ಸುಣ್ಣದಹಳ್ಳಿಯಲ್ಲಿ ೬೭೫ ಕಿಲೋ ಹರ್ಟ್ಜ್ ಸಾಮರ್ಥ್ಯದ ಒಂದು ಟ್ರಾನ್ಸ್‌ಮಿಟರ್ ಒಳಗೊಂಡಿದೆ. ಜೆಪಿಎಸ್ ಕಾಲೋನಿಯಲ್ಲಿ ಒಂದು ಸ್ಟುಡಿಯೋ ಮತ್ತು ಆಡಳಿತ ಕಛೇರಿಯನ್ನು ಹೊಂದಿದೆ. ಅಲ್ಲದೆ ಸುಮಾರು ೧.೫ ಕೋ.ರು. ವೆಚ್ಚದ ಒಂದು ಟವರ್ ಕೂಡ ಹೊಂದಿದೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ಹಾಸನ, ನಾರ್ತ್ ಕೆನರಾ, ಉಡುಪಿ ಮತ್ತು ತುಮಕೂರು ನಗರಗಳಲ್ಲಿ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತಿವೆ. ಒಂದು ಕಾಲದಲ್ಲಿ ಸುಮಾರು ೩೦ ರಿಂದ ೪೦ ಲಕ್ಷ ಶ್ರೋತೃಗಳನ್ನು ಹೊಂದಿದ್ದ ಆಕಾಶವಾಣಿ ಕೇಂದ್ರದಲ್ಲಿ ಪ್ರಸ್ತುತ ಶ್ರೋತೃಗಳ ಸಂಖ್ಯೆ ತೀರ ಇಳಿಮುಖವಾಗಿದೆ. ಪರಿಸ್ಥಿತಿ ಇದೆ ರೀತಿ ಮುಂದುವರೆದಲ್ಲಿ ಭವಿಷ್ಯದಲ್ಲಿ ಶ್ರೋತೃಗಳೇ ಇಲ್ಲವಾಗಬಹುದು.
ಜನಪ್ರಿಯತೆ ಕಳೆದುಕೊಂಡ ಆಕಾಶವಾಣಿ :
ಮುಂದುವರೆದ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಎಲ್ಲಾ ಕ್ಷೇತ್ರಗಳಲ್ಲೂ ಪೈಪೋಟಿ ಎದುರಾಗಿದೆ. ಈ ದಾರಿಯಲ್ಲಿ ಆಕಾಶವಾಣಿ ಕೇಂದ್ರಗಳು ಸಹ ಸಾಗುತ್ತಿವೆ. ಬದಲಾದ ತಾಂತ್ರಿಕತೆ ಹೊಂದಿಕೊಳ್ಳದಿರುವುದು ಹಿನ್ನಡೆಗೆ ಕಾರಣವಾಗಿದೆ. ಅಲ್ಲದೆ ಸರ್ಕಾರ ಸಹ ಹೆಚ್ಚಿನ ಪ್ರೋತ್ಸಾಹ ನೀಡದಿರುವುದು ಜನಪ್ರಿಯತೆ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಅದರಲ್ಲೂ ಖಾಸಗಿ ಎಫ್.ಎಂ ಚಾನಲ್‌ಗಳ ಆರಂಭದಿಂದಾಗಿ ಮತ್ತಷ್ಟು ಜನಪ್ರಿಯತೆ ಕಳೆದುಕೊಳ್ಳುವಂತಾಗಿದೆ.
ಸ್ಥಗಿತಗೊಂಡ ಜನಪ್ರಿಯ ಕಾರ್ಯಕ್ರಮಗಳು:
ಚಿಂತಕರು, ಸಾಹಿತಿಗಳು, ಮಕ್ಕಳು, ವಿದ್ಯಾರ್ಥಿಗಳು, ಕೃಷಿಕರು, ಕಾರ್ಮಿಕರು, ಕಲಾವಿದರು, ಕ್ರೀಡಾಪಟುಗಳು, ಗೃಹಿಣಿಯರು, ಯುವಕ-ಯುವತಿಯರು, ವಯಸ್ಕರು ಸೇರಿದಂತೆ ಎಲ್ಲರಿಗೂ ಮೆಚ್ಚುಗೆಯಾಗುವ ಹಾಗು ಅತಿಉಪಯುಕ್ತ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತಿದ್ದವು. ಮನರಂಜನೆ ಜೊತೆಗೆ ದಿನದ ಸುದ್ದಿಗಳು ಹಾಗು ವಿಭಿನ್ನ ಆಯಾಮದ ಕಾರ್ಯಕ್ರಮಗಳಿಂದಾಗಿ ಆಕಾಶವಾಣಿ ತನ್ನದೆ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡಿತ್ತು. ಒಂದು ಕಾಲದಲ್ಲಿ ಆಕಾಶವಾಣಿ ಕಾರ್ಯಕ್ರಮಗಳಿಗಾಗಿ ಶ್ರೋತೃಗಳು ಸಮಯ ಮೀಸಲಿಡುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ದಿನ ಕಳೆದಂತೆ ಒಂದೊಂದೆ ಕಾರ್ಯಕ್ರಮಗಳು ಕಣ್ಮರೆಯಾಗ ತೊಡಗಿದವು. ಇದೀಗ ಆಕಾಶವಾಣಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಕಾಡುತ್ತಿದೆ. ಜನಪ್ರಿಯ ಕಾರ್ಯಕ್ರಮಗಳು ಇದೀಗ ನೆನಪು ಅಷ್ಟೆ.
ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಯಾವುದೇ ಸ್ವತಂತ್ರ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದರಿಂದಾಗಿ ಸ್ಥಳೀಯ ಪ್ರತಿಭಾವಂತರು, ಕಲಾವಿದರು ವಂಚಿತರಾಗಿದ್ದಾರೆ. ಅಲ್ಲದೆ ಉದ್ಘೋಷಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಯಾವುದೇ ಕಾರಣಕ್ಕೂ ಏಕರೂಪದ ಕಾರ್ಯಕ್ರಮ ಜಾರಿಗೆ ತರಬಾರದು.
- ಸುಬ್ರಮಣ್ಯ ಶರ್ಮ, ರಾಜ್ಯಾಧ್ಯಕ್ಷರು,
ಕರ್ನಾಟಕ ರಾಜ್ಯ ಸಾಂದರ್ಭಿಕ ಉದ್ಘೋಷಕರ ಸಂಘ.
ಆರಂಭಗೊಳ್ಳದ ಎಫ್.ಎಂ ಚಾನಲ್:
ಕೇಂದ್ರ ಸರ್ಕಾರ ಭದ್ರಾವತಿ ಆಕಾಶವಾಣಿ ಕೇಂದಕ್ಕೆ ಎಫ್.ಎಂ ಚಾನಲ್ ಮಂಜೂರಾತಿ ಮಾಡುವ ಮೂಲಕ ಅಗತ್ಯವಿರುವ ಅನುದಾನ ಸಹ ಬಿಡುಗಡೆಗೊಳಿಸಿತ್ತು. ಸುಮಾರು ೧.೫ ಕೋ.ರು ವೆಚ್ಚದ ಟವರ್ ನಿರ್ಮಾಣಗೊಂಡಿತು ಹೊರತು ಮುಂದಿನ ಕೆಲಸಗಳು ಆರಂಭಗೊಳ್ಳಲಿಲ್ಲ. ಇದುವರೆಗೂ ಎಫ್.ಎಂ ಚಾನಲ್ ಕನಸಾಗಿಯೇ ಉಳಿದಿದೆ.
ಕಲಾವಿದರು, ಪ್ರತಿಭಾವಂತರು ಗುರುತಿಸಿಕೊಳ್ಳಲು ಸಹಕಾರಿ:
ಎಲೆಮರೆ ಕಾಯಿಯಂತಿದ್ದ ಸ್ಥಳೀಯ ಕಲಾವಿದರು, ಪ್ರತಿಭಾವಂತರು ಒಂದು ಕಾಲದಲ್ಲಿ ಆಕಾಶವಾಣಿ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ ಬಹಳಷ್ಟು ಉದ್ಘೋಷಕರು ಆಕಾಶವಾಣಿ ನಂಬಿಕೊಂಡಿದ್ದರು. ಆದರೆ ಇದೀಗ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ಸಹ ನಡೆಯುತ್ತಿಲ್ಲ. ಜೊತೆಗೆ ಆಕಾಶವಾಣಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳ ಸಂಖ್ಯೆ ಸಹ ದಿನ ಕಳೆದಂತೆ ಕ್ಷೀಣುತ್ತಿದೆ.
ಏಕರೂಪದ ಕಾರ್ಯಕ್ರಮ :
ಇದೀಗ ರಾಜ್ಯದ ಎಲ್ಲಾ ಆಕಾಶವಾಣಿ ಕೇಂದ್ರಗಳಿಗೂ ಒಂದೇ ಕೇಂದ್ರದ ಮೂಲಕ ಏಕರೂಪದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ. ಇದರಿಂದಾಗಿ ಸ್ಥಳೀಯ ಕಾರ್ಯಕ್ರಮಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಸ್ಥಳೀಯ ಪ್ರತಿಭಾವಂತರು, ಕಲಾವಿದರು ಹಾಗು ಉದ್ಘೋಷಕರು ಬೀದಿಪಾಲಾಗುವ ಆತಂಕ ಎದುರಾಗಿದೆ. ಇದೀಗ ಏಕರೂಪದ ಕಾರ್ಯಕ್ರಮ ಪ್ರಸಾರಕ್ಕೆ ರಾಜ್ಯದೆಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
No comments:
Post a Comment