Thursday, March 11, 2021

ಅದ್ದೂರಿಯಾಗಿ ತೆರೆಕಂಡ ರಾಬರ್ಟ್ ಚಿತ್ರ: ೪ ಪ್ರದರ್ಶನಗಳು ಭರ್ತಿ

ಪೋಸ್ಟರ್, ಕಟೌಟ್, ಬ್ಯಾನರ್‌ಗಳಿಂದ ರಾರಾಜಿಸುತ್ತಿರುವ ವೀರಭದ್ರೇಶ್ವರ ಚಿತ್ರಮಂದಿರ

ಭದ್ರಾವತಿ ಬಸವೇಶ್ವರ ವೃತ್ತದಲ್ಲಿರುವ ವೀರಭದ್ರೇಶ್ವರ ಚಿತ್ರಮಂದಿರ ಸಂಪೂರ್ಣವಾಗಿ ರಾಬರ್ಟ್ ಚಿತ್ರದ ಪೋಸ್ಟರ್, ಕಟೌಟ್ ಮತ್ತು ಬ್ಯಾನರ್‌ಗಳಿಂದ ರಾರಾಜಿಸುತ್ತಿರುವುದು.
   ಭದ್ರಾವತಿ, ಮಾ. ೧೧: ಉಕ್ಕಿನ ನಗರದ ಪ್ರತಿಭೆ, ವಿಶ್ವ ರೂಪದರ್ಶಿ ಆಶಾಭಟ್ ಹಾಗು ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಶುಕ್ರವಾರ ತೆರೆಕಂಡಿದ್ದು, ನಗರದ ಸಿ.ಎನ್ ರಸ್ತೆಯಲ್ಲಿರವ ವೆಂಕಟೇಶ್ವರ ಮತ್ತು ಬಸವೇಶ್ವರ ವೃತ್ತದಲ್ಲಿರುವ ವೀರಭದ್ರೇಶ್ವರ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.
    ಬೆಳಿಗ್ಗೆ ಚಿತ್ರದ ಮೊದಲ ಪ್ರದರ್ಶನಕ್ಕೆ ಅಭಿಮಾನಿಗಳಿಂದ ಅದ್ದೂರಿ ಚಾಲನೆ ದೊರೆಯಿತು. ಎರಡು ಚಿತ್ರಮಂದಿರಗಳ ಬಳಿ ಚಿತ್ರದ ಬೃಹತ್ ಕಟೌಟ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೆ ವೀರಭದ್ರೇಶ್ವರ ಚಿತ್ರಮಂದಿರ ಸಂಪೂರ್ಣವಾಗಿ ರಾಬರ್ಟ್ ಚಿತ್ರದ ಪೋಸ್ಟರ್, ಕಟೌಟ್ ಮತ್ತು ಬ್ಯಾನರ್‌ಗಳಿಂದ ರಾರಾಜಿಸುತ್ತಿದೆ.
    ಎರಡು ಚಿತ್ರಮಂದಿರಗಳಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೧೦ ಗಂಟೆವರೆಗೆ ಒಟ್ಟು ೪ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೊದಲ ದಿನ ಎರಡು ಚಿತ್ರಮಂದಿರಗಳು ಸಂಪೂರ್ಣವಾಗಿ ಭರ್ತಿಯಾಗಿದ್ದು, ಕೆಲವರು ಟಿಕೆಟ್ ಸಿಗದೆ ನಿರಾಸೆಯಿಂದ ಹಿಂದಿರುಗಿದರು. ಚಿತ್ರಮಂದಿರಗಳಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ಸೂಚಿಸಿದ್ದರೂ ಸಹ ಬಹುತೇಕ ಪ್ರೇರಕ್ಷರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂದಿತು.
ಉತ್ತಮ ಪ್ರತಿಕ್ರಿಯೆ :
    ಅದ್ದೂರಿಯಾಗಿ ತೆರೆಕಂಡಿರುವ ರಾಬರ್ಟ್ ಚಿತ್ರ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಯುವ ಸಮುದಾಯದವರು ಹೆಚ್ಚಿನ ಪ್ರೇರಕ್ಷಕರಾಗಿದ್ದು, ದರ್ಶನ್, ಆಶಾಭಟ್ ಹಾಗು ಇನ್ನಿತರ ಕಲಾವಿದರ ಅಭಿನಯಕ್ಕೆ ಹಾಗು ಅದ್ದೂರಿ ಚಿತ್ರೀಕರಣಕ್ಕೆ ಮತ್ತು ಚಿತ್ರದ ತಂಡದ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  
    ವೆಂಕಟೇಶ್ವರ ಚಿತ್ರಮಂದಿರದ ಮಾಲೀಕ ದುಷ್ಯಂತ್‌ರಾಜ್ ಪತ್ರಿಕೆಗೆ ಪ್ರತಿಕ್ರಿಯಿಸಿ ರಾಬರ್ಟ್ ಚಿತ್ರ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದ್ದು, ೪ ಪ್ರದರ್ಶನಗಳು ಸಹ ಸಂಪೂರ್ಣವಾಗಿ ಭರ್ತಿಯಾಗಿವೆ. ಅದರಲ್ಲೂ ಚಿತ್ರದ ನಾಯಕಿ ನಮ್ಮ ಊರಿನವರೇ ಆಗಿರುವ ಕಾರಣ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

No comments:

Post a Comment