Friday, April 23, 2021

ಸಮಾಜವಾದಿ ರಾಜಕಾರಣ ಬೆಂಬಲಿಸಿ : ಮಹಿಮಾ ಜೆ. ಪಟೇಲ್

ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಭದ್ರಾವತಿ ನಗರಸಭೆ  ೩೨ನೇ ವಾರ್ಡಿನ ಜೆಡಿಯು ಬೆಂಬಲಿತ ಅಭ್ಯರ್ಥಿ ದಿವ್ಯಶ್ರೀ ಶಶಿಕುಮಾರ್ ಗೌಡ ಪರವಾಗಿ ಮತಯಾಚನೆ ನಡೆಸಿದರು.
ಭದ್ರಾವತಿ, ಏ. ೨೩: ಸಮಾಜವಾದಿ ರಾಜಕಾರಣ ಹುಟ್ಟಿದ ಜಿಲ್ಲೆಯಲ್ಲಿ ಸಮಾಜ ವಾದಕ್ಕೆ ನೆಲೆ ಕಲ್ಪಿಸಿಕೊಟ್ಟ ನಗರ ಭದ್ರಾವತಿಯಾಗಿದ್ದು, ಇಂತಹ ನೆಲದಲ್ಲಿ ಪ್ರಸ್ತುತ ರಾಜಕಾರಣದಲ್ಲಿ ಸಮಾಜವಾದವನ್ನು ಎತ್ತಿ ಹಿಡಿಯಬೇಕೆಂಬ ಮನೋಭಾವನೆಯೊಂದಿಗೆ ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಮನವಿ ಮಾಡಿದರು.
    ಅವರು ಶುಕ್ರವಾರ ನಗರಸಭೆ  ೩೨ನೇ ವಾರ್ಡಿನ ಜೆಡಿಯು ಬೆಂಬಲಿತ ಅಭ್ಯರ್ಥಿ ದಿವ್ಯಶ್ರೀ ಶಶಿಕುಮಾರ್ ಗೌಡ ಪರವಾಗಿ ಮತಯಾಚನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ರಾಜಕಾರಣದಲ್ಲಿ ಸಮಾಜವಾದ ಉಳಿಯಬೇಕು. ಎಲ್ಲರೂ ಸಮಾನರು, ಎಲ್ಲರೂ ಸರ್ಕಾರದಲ್ಲಿ ಸಮಾನ ಭಾಗಿಗಳು, ಈ ನಿಟ್ಟಿನ ಪರಿಕಲ್ಪನೆಯಲ್ಲಿ ಪ್ರಾಮಾಣಿಕ, ಪರಿಶುದ್ಧ ರಾಜಕಾರಣಕ್ಕೆ ಮುನ್ನುಡಿ ಬರೆದ ಜಿಲ್ಲೆಯಲ್ಲಿ ಅಂದು ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಖುದ್ದೂಸ್ ಅನ್ವರ್‌ರವರು ಸ್ಪರ್ಧಿಸಿ ಆಯ್ಕೆಯಾಗಿ ಬಂದಿದ್ದರು. ಈ ಹಿನ್ನಲೆಯಲ್ಲಿ ಈ ನಗರದಲ್ಲಿ ಸಮಾಜವಾದ ರಾಜಕಾರಣದ ಪರಿಕಲ್ಪನೆ ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ ಎಂಬುದು ನನ್ನ ಆಶಯವಾಗಿದೆ.  ಸಮಾಜವಾದಿ ಗುಣಗಳನ್ನು ರೂಢಿಸಿಕೊಂಡಿರುವ ಪಕ್ಷದ ಶಶಿಕುಮಾರ್ ಗೌಡರವರು ಇದೀಗ ನಗರಸಭೆಗೆ ಪತ್ನಿ ದಿವ್ಯಶ್ರೀಯವರನ್ನು ಕಣಕ್ಕಿಳಿಸಿದ್ದು, ಇವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
     ವಾರ್ಡಿನ ಪ್ರಮುಖ ರಸ್ತೆಗಳಲ್ಲಿ ಪಟೇಲ್‌ರವರು ಕರಪತ್ರಗಳನ್ನು ವಿತರಿಸಿ ಮತಯಾಚನೆ ನಡೆಸಿದರು. ಅಭ್ಯರ್ಥಿ ದಿವ್ಯಶ್ರೀ, ಮುಖಂಡ ಶಶಿಕುಮಾರ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment