Monday, December 23, 2024

ಮಾರಾಕಾಸ್ತ್ರ ಹಿಡಿದು ಎರಡು ಗ್ಯಾಂಗ್‌ಗಳಿಂದ ಕೊಲೆಗೆ ಯತ್ನ

ಎರಡು ಗ್ಯಾಂಗ್‌ಗಳ ವಿರುದ್ಧ ಪ್ರಕರಣ ದಾಖಲು 

    ಭದ್ರಾವತಿ: ಹಳೇನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುನಃ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಸೋಮವಾರ ಎರಡು ಗ್ಯಾಂಗ್‌ಗಳ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ. 
    ನಗರದ ಬಿ.ಎಚ್ ರಸ್ತೆಯಲ್ಲಿರುವ ಸ್ಮಾರ್ಟ್ ಫಿಟ್ನೆಸ್ ವ್ಯಾಯಾಮ ಶಾಲೆಯಲ್ಲಿ ಬೆಳಗಿನ ಜಾವ ವ್ಯಾಯಾಮ ಮುಗಿಸಿ ಹೊರ ಬರುತ್ತಿದ್ದ ಜೋಯೆಲ್ ಥಾಮ್ಸನ್ ಎಂಬ ಯುವಕನ ಮೇಲೆ ಸುಮಾರು ೬ ಜನರ ಗ್ಯಾಂಗ್ ಮಚ್ಚು, ಲಾಂಗ್ ಸೇರಿದಂತೆ ಇನ್ನಿತರ ಮಾರಾಕಾಸ್ತ್ರಗಳನ್ನು ಹಿಡಿದು ಕೊಲೆ ಮಾಡಲು ಯತ್ನಿಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಥಾಮ್ಸನ್ ತಪ್ಪಿಸಿಕೊಂಡು ವ್ಯಾಯಾಮ ಶಾಲೆ ಒಳಗೆ ಓಡಿ ಹೋಗಿದ್ದಾನೆ. ಪೊಲೀಸರಿಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 
    ವಿಶ್ವ ಅಲಿಯಾಸ್ ಮುದ್ದೆ, ಕೋಟೇಶ ಅಲಿಯಾಸ್ ಕೋಟಿ, ನವೀನ ಅಲಿಯಾಸ್ ಡಿಂಗ ಸೇರಿದಂತೆ ೬ ಜನರ ಗ್ಯಾಂಗ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಜೋಯೆಲ್ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. 
    ಇದಕ್ಕೂ ಮೊದಲು ಈ ಗ್ಯಾಂಗ್ ವಿರುದ್ಧ ಜಟ್‌ಪಟ್ ನಗರದಲ್ಲಿ ೭ ಜನರ ಗ್ಯಾಂಗ್ ಓರ್ವನ ಕೊಲೆಗೆ ಯತ್ನಿಸಿದ್ದು, ಇಲ್ಲೂ ಸಹ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಸಹ ಹಳೇನಗರ ಪೊಲೀಸ್ ಠಾಣೆಯಲ್ಲಿ ಮಧುಕುಮಾರ್ ಎಂಬಾತ ದೂರು ನೀಡಿದ್ದಾನೆ. 
    ಎರಡು ಗ್ಯಾಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ನಡುವೆ ನಗರದಲ್ಲಿ ಪುನಃ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. 

No comments:

Post a Comment