Tuesday, December 24, 2024

ಸಮಯ ವ್ಯರ್ಥಮಾಡದೆ ದೇಶದ ಬೆಳವಣಿಗೆಗೆ ಪೂರಕವಾದ ಚರ್ಚೆ ನಡೆಸಿ ಗೌರವಯುತವಾಗಿ ನಡೆದುಕೊಳ್ಳಲಿ

ಅಧಿವೇಶನದಲ್ಲಿ ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ಸದಸ್ಯರಿಗೆ ಎಚ್ಚರಿಕೆ ನೀಡಲಿ : ಮನವಿ 

ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ದೇಶದ ಲೋಕಸಭೆ, ರಾಜ್ಯಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆ, ವಿಧಾನ ಪರಿಷತ್ ಅಧಿವೇಶಗಳ ಸಂದರ್ಭದಲ್ಲಿ ಸಂಸದರು, ಶಾಸಕರು ಗೌರವಯುತವಾಗಿ ನಡೆದುಕೊಳ್ಳುವಂತೆ ಸೂಚಿಸುವಂತೆ ಭದ್ರಾವತಿ ಜನ್ನಾಪುರ ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ತಹಸೀಲ್ದಾರ್ ಮೂಲಕ ಮನವಿ ಮಾಡಿದ್ದಾರೆ. 
    ಭದ್ರಾವತಿ: ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ದೇಶದ ಲೋಕಸಭೆ, ರಾಜ್ಯಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆ, ವಿಧಾನ ಪರಿಷತ್ ಅಧಿವೇಶಗಳ ಸಂದರ್ಭದಲ್ಲಿ ಸಂಸದರು, ಶಾಸಕರು ಗೌರವಯುತವಾಗಿ ನಡೆದುಕೊಳ್ಳುವಂತೆ ಸೂಚಿಸುವಂತೆ ಜನ್ನಾಪುರ ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಮನವಿ ಮಾಡಿದ್ದಾರೆ. 
    ಈ ಸಂಬಂಧ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಇತ್ತೀಚಿನ ದಿನಮಾನಗಳಲ್ಲಿ ಲೋಕಸಭೆ, ರಾಜ್ಯಸಭೆ ಎಲ್ಲಾ ರಾಜ್ಯಗಳ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ದೇಶದ ರೈತರ, ಎಲ್ಲಾ ವರ್ಗದ ನಾಗರಿಕರ ಹಾಗೂ ಉತ್ತಮ ರೀತಿಯ ಚರ್ಚೆಗಳು ಆಗದೆ ಕೇವಲ ವೈಯಕ್ತಿಕ ಹಿತಾಸಕ್ತಿಗಳಿಂದ ರಾಜಕಾರಣಿಗಳು ಅಧಿವೇಶನ ನಡೆಯುವ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಜಗಳ ಮಾಡಿಕೊಳ್ಳುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹಲ್ಲೆ ಮಾಡುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಶಾಸಕರ, ಸಂಸದರ ಇಂತಹ ನಡವಳಿಕೆಯಿಂದ ದೇಶದ ನಾಗರಿಕರು ತಲೆತಗ್ಗಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಲಾಗಿದೆ. 
    ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತ ದೇಶದಲ್ಲಿ ಸಂವಿಧಾನದ ಉದ್ದೇಶಗಳನ್ನು ಇಂದಿನ ರಾಜಕಾರಣಿಗಳು ಅನುಸರಿಸದೇ ಇರುವುದು ವಿಪರ್ಯಾಸದ ಸಂಗತಿ. ಬುದ್ಧ, ಬಸವ, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರು ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳು ಜನ್ಮ ಪಡೆದ ದೇಶ ನಮ್ಮ ಭವ್ಯ ಭಾರತ. ಆದರೆ ಇಂದಿನ ರಾಜಕಾರಣಿಗಳಿಂದ ದೇಶ ಮುಂದುವರೆಯುವುದು ಕಷ್ಟ ಸಾಧ್ಯ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಅಧಿವೇಶನಗಳು ಸಾರ್ವಜನಿಕರ, ರೈತರ, ದೀನದಲಿತರ, ಎಲ್ಲ ಧರ್ಮದವರ ಬದುಕಿಗೆ ಪೂರಕವಾಗಿರುವಂತಹ ಚರ್ಚೆ ಆಗಬೇಕೆ ಹೊರತು ಭ್ರಷ್ಟ ರಾಜಕಾರಣಿಗಳ ಕಚ್ಚಾಟದಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿವೇಶನ ನಡೆಯುವ ಸಂದರ್ಭಗಳಲ್ಲಿ ರಾಜಕಾರಣಿಗಳು ಕ್ಷುಲ್ಲಕ ಕಾರಣಕ್ಕೆ ಅಧಿವೇಶನದ ಸಮಯ ವ್ಯರ್ಥ ಮಾಡಿ ಸದನಗಳು ಸರಿಯಾಗಿ ನಡೆಯದಂತೆ ಮಾಡಿದರೆ ಅಂತಹ ರಾಜಕಾರಣಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಅಧಿವೇಶನ ನಡೆಯಲು ತಗಲುವ ಖರ್ಚು ವೆಚ್ಚಗಳನ್ನು ಅವರೇ ಭರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. 
    ಅಲ್ಲದೆ ಅಧಿವೇಶನದ ಸಮಯ ವ್ಯರ್ಥವಾಗಲು ಕಾರಣರಾಗುವ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಕಾನೂನು ಜಾರಿತರುವ ಮೂಲಕ ಸಂವಿಧಾನದ ಆಶಯ ಕಾಪಾಡಬೇಕೆಂದು ಆಗ್ರಹಿಸಿ ಆಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮನವಿಯಲ್ಲಿ ತಿಳಿಸಲಾಗಿದೆ. 

No comments:

Post a Comment