ಭದ್ರಾವತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ : ಜಗತ್ತಿಗೆ ೧೨ನೇ ಶತಮಾನದಲ್ಲಿಯೇ ಕಾಯಕದ ಮಹತ್ವ ತಿಳಿಸಿಕೊಟ್ಟ ದೇಶದಲ್ಲಿ ಪ್ರಸ್ತುತ ಕಾಯಕವನ್ನು ನಿರ್ಲಕ್ಷಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಬಿ.ವಿ ವೀರಭದ್ರಪ್ಪ ಹೇಳಿದರು.
ಅವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಸುಮಾರು ೧೨ ಗಂಟೆ ಸಮಯವನ್ನು ಕಾಯಕಕ್ಕೆ ಮೀಸಲಿಡಲಾಗಿದೆ. ಈ ಹಿನ್ನಲೆಯಲ್ಲಿ ಆ ರಾಷ್ಟ್ರಗಳಲ್ಲಿ ಬಡತನ ಎಂಬುದು ಕಣ್ಮರೆಯಾಗಿದೆ. ಆದರೆ ನಮ್ಮ ರಾಷ್ಟ್ರದಲ್ಲಿ ಕಾಯಕದ ಪರಿಕಲ್ಪನೆ ಮರೆಯಾಗುತ್ತಿದ್ದು, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದೇ ಪ್ರಮುಖ ಗುರಿ ಎಂಬ ಆಲೋಚನೆಯಲ್ಲಿನ ಕಾಲಘಟ್ಟದಲ್ಲಿಯೇ ಕಾಯಕ ಮರೆಯಾಗಿ ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಯೊಬ್ಬರು ಕಾಯಕವನ್ನು ನಂಬಿ ಬದುಕು ಸಾಗಿಸಬೇಕು. ನಮ್ಮ ಅಗತ್ಯಗಳನ್ನು ನಾವು ಸಂಪಾದಿಸಿದ ಹಣದಲ್ಲಿಯೇ ಸಾಧ್ಯವಾದಷ್ಟು ಈಡೇರಿಸಿಕೊಳ್ಳಬೇಕು. ನಮ್ಮ ಹಿಂದಿನ ತಲೆಮಾರಿನವರ ಆಲೋಚನೆಗಳು ಈ ನಿಟ್ಟಿನಲ್ಲಿಯೇ ಸಾಗುತ್ತಿತ್ತು. ಯಾರು ಸಹ ಸಾಲದ ಸುಳಿಗೆ ಒಳಗಾಗುತ್ತಿರಲಿಲ್ಲ. ಒಂದು ವೇಳೆ ಸಾಲ ಮಾಡಿದರೂ ಸಹ ಅದನ್ನು ಪೂರ್ಣವಾಗಿ ಹಿಂದಿರುಗಿಸುವ ಬದ್ದತೆ ಬೆಳೆಸಿಕೊಂಡಿದ್ದರು. ಆದರೆ ಇಂದಿನವರಿಗೆ ಆ ಬದ್ದತೆ ಇಲ್ಲವಾಗಿದೆ. ಎಲ್ಲವನ್ನು ಸರ್ಕಾರ ಮಾಡಬೇಕು ಎಂಬ ಆಲೋಚನೆ ಬೆಳೆಸಿಕೊಂಡಿದ್ದಾರೆ. ಈ ಆಲೋಚನೆಯಿಂದ ಹೊರಬರಬೇಕಾಗಿದೆ. ಸರ್ಕಾರದಿಂದ ನಾವು ಪ್ರೀತಿ, ಮಮತೆ, ಸಹಕಾರ, ಸಹಬಾಳ್ವೆ, ಸೋದರತ್ವವನ್ನು ಮಾತ್ರ ನಿರೀಕ್ಷಿಸಬೇಕು. ನಮ್ಮ ನಾಡು ಪುನಃ ೧೨ನೇ ಶತಮಾನದ ಪರಿಕಲ್ಪನೆಯಂತೆ ಕಲ್ಯಾಣದ ನೆಲೆಬೀಡಾಗಿ ರೂಪು ಕೊಳ್ಳಬೇಕಾಗಿದೆ ಎಂದರು.
ಸಮಾರೋಪ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಎ ಪಿ ಕುಮಾರ್ ದಂಪತಿ, ತಾಲ್ಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment