ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆ
ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವರಿಷ್ಠ ಕೆ.ಟಿ ಗಂಗಾಧರ್ ಮಾತನಾಡಿದರು.
ಭದ್ರಾವತಿ, ಜ. ೨: ದೇಶದಲ್ಲಿ ಗಣರಾಜ್ಯೋತ್ಸವ ಸಂಭ್ರಮ ಎಂಬುದು ಕೇವಲ ಶ್ರೀಮಂತರು, ಬಂಡವಾಳಶಾಹಿಗಳು, ಮತ್ತು ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿದೆ. ಈ ದೇಶದಲ್ಲಿ ಬಡವರಿಗೆ, ದುಡಿಯುವ ವರ್ಗಕ್ಕೆ ಇದರ ಸಂಭ್ರಮ ಇಲ್ಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವರಿಷ್ಠ ಕೆ.ಟಿ ಗಂಗಾಧರ್ ಆರೋಪಿಸಿದರು.
ಅವರು ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಸ್ತುತ ದೇಶದಲ್ಲಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರು ಹಾಗು ಕಾರ್ಯ ರೂಪಕ್ಕೆ ತರಬೇಕಾದ ಅಧಿಕಾರಿ ವರ್ಗದವರು ಸಂವಿಧಾನದ ಮಹತ್ವ ಅರ್ಥ ಮಾಡಿಕೊಂಡಿಲ್ಲ. ಈ ಹಿನ್ನಲೆಯಲ್ಲಿ ಸಂವಿಧಾನ ಬದ್ಧವಾಗಿ ಲಭಿಸಬೇಕಾದ ಸೌಲಭ್ಯಗಳಿಂದ ಬಡವರ್ಗದವರು, ದುಡಿಯುವ ವರ್ಗದವರು ವಂಚಿತರಾಗಿದ್ದಾರೆಂದು ದೂರಿದರು.
ಸಂವಿಧಾನದ ಆಶಯ ಎತ್ತಿ ಹಿಡಿಯಬೇಕಾದ ಅವಶ್ಯಕತೆ ಇಂದು ಹೆಚ್ಚಿನದ್ದಾಗಿದ್ದು, ಈ ಹಿನ್ನಲೆಯಲ್ಲಿ ರೈತರ ಸಂಘ ಸಮಾಜವಾದಿ ಚಿಂತಕರು ಹಾಗು ಸಮಾನ ಮನಸ್ಕರೊಂದಿಗೆ ಜ.೨೬ರ ಮಂಗಳವಾರ ಜನತಾ ಗಣರಾಜ್ಯೋತ್ಸವ ಶಿವಮೊಗ್ಗ ನಗರದಲ್ಲಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಬಡವರ್ಗದವರು, ಶ್ರಮಿಕರು, ಶ್ರೀಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದರು.
ಪ್ರಸ್ತುತ ಬಿ.ಎನ್ ರಾಜುರವರ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಹೋರಾಟದ ಬಹುತೇಕ ಬೇಡಿಕೆಗಳು ಸಂವಿಧಾನದಲ್ಲಿ ರೂಪಿಸಲಾಗಿರುವ ಕಾನೂನಿಗೆ ಸರಿಸಮಾನವಾಗಿವೆ. ಈ ಹಿನ್ನಲೆಯಲ್ಲಿ ಅಧಿಕಾರಿ ವರ್ಗ ಬೇಡಿಕೆಗಳನ್ನು ಈಡೇರಿಸಿಕೊಡುವ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಆಗ್ರಹಿಸಿದರು.
ನಗರದಲ್ಲಿ ನಿರ್ಮಾಣದ ಹಂತದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನಕ್ಕೆ ಅಗತ್ಯವಿರುವ ಅನುದಾನವನ್ನು ಸರ್ಕಾರ ತಕ್ಷಣ ಬಿಡುಗಡೆಗೊಳಿಸಬೇಕು. ಪ್ರಸ್ತುತ ಎದುರಾಗಿರುವ ಆರ್ಥಿಕ ಸಂಕಷ್ಟದಿಂದ ಹಣ ಬಿಡುಗಡೆ ಮಾಡಲು ಒಂದು ವೇಳೆ ಸಾಧ್ಯವಾಗದಿದ್ದಲ್ಲಿ ಈ ಬಾರಿ ಬಜೆಟ್‌ನಲ್ಲಿ ಅಧಿಕೃತವಾಗಿ ಹಣ ಬಿಡುಗಡೆ ಬಗ್ಗೆ ಘೋಷಿಸಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ಬಿ.ಎನ್ ರಾಜು ವಿವಿಧ ಹೋರಾಟಗಳ ಬಗ್ಗೆ ವಿವರಿಸಿದರು. ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಪ್ರಮುಖರಾದ ಡಿ.ವಿ ವೀರೇಶ್, ಸುಬ್ಬೇಗೌಡ, ಮುಳ್ಕೆರೆ ಲೋಕೇಶ್, ಇಬ್ರಾಹಿಂ ಖಾನ್, ತಮ್ಮಣ್ಣ, ಮುತ್ತು, ಆಂಜನೇಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment