Thursday, February 4, 2021

ಅಯೋಧ್ಯೆ ರಾಮಮಂದಿರ ನಿರ್ಮಾಣ : ದೇಶದ ಬಹುಸಂಖ್ಯಾತರ ಸ್ವಾಭಿಮಾನದ ಪ್ರತೀಕ

ಭದ್ರಾವತಿ ಸಿದ್ದಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ಆಯೋಧ್ಯೆ ರಾಮಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
     ಭದ್ರಾವತಿ, ಫೆ.೪:  ಆಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಅತ್ಯಂತ ಪವಿತ್ರವಾದ ಧಾರ್ಮಿಕ ಕಾರ್ಯವಾಗಿದ್ದು, ಜೊತೆಗೆ ಈ ದೇಶದ ಬಹುಸಂಖ್ಯಾತ ಜನರ ಸ್ವಾಭಿಮಾನದ ಪ್ರತೀಕವಾಗಿದೆ ಎಂದು ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.  
       ಅವರು ಗುರುವಾರ ಸಿದ್ದಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆಯೋಧ್ಯೆ ರಾಮಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯದಲ್ಲಿ ವಹಿಸಿ ಮಾತನಾಡಿದರು.
   ಶ್ರೀರಾಮ ದೇಶದ ಬಹುಸಂಖ್ಯಾತರ ಆರಾಧ್ಯ ದೈವ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ರಾಮಮಂದಿರ ನಿರ್ಮಾಣ ಕಾರ್ಯವನ್ನು ದೇಶದ ಯಾವುದಾದರೂ ದೊಡ್ಡ ಕಂಪನಿಗಳು, ಉದ್ದಿಮೆದಾರರು, ಶ್ರೀಮಂತರು ವಹಿಸಿಕೊಳ್ಳಬಹುದಾಗಿತ್ತು.  ಆದರೆ ಆ ರೀತಿ ಮಾಡದೆ ದೇಶದ ಪ್ರತಿಯೊಬ್ಬ ರಾಮಭಕ್ತರ ಭಾವನೆ, ಆಸೆ, ಸಂಕಲ್ಪ ಹಾಗು ಕಾಣಿಕೆ ಸಲ್ಲಬೇಕು ಹಾಗು ಈ ಪುಣ್ಯದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಬೇಕೆಂಬ ಉದಾತ್ತ ಮನೋಭಾವನೆಯೊಂದಿಗೆ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಈ ದೇಶದ ಹೆಮ್ಮೆಯ ವಿಚಾರವಾಗಿದೆ ಎಂದರು.
    ಮಾತೃ ಮಂಡಳಿ ಅಧ್ಯಕ್ಷೆ ಯಶೋಧ ವೀರಭದ್ರಪ್ಪ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹಲವು ಹೋರಾಟಗಳು ನಡೆದಿವೆ. ಲಕ್ಷಾಂತರ ಜನರು ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದಾರೆ. ಇವೆಲ್ಲದರ ಫಲವಾಗಿ ಇಂದು ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಪುಣ್ಯದ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
    ಶಾಶ್ವತಿ ಮಹಿಳಾ ಸಮಾಜದ ಅಧ್ಯಕ್ಷೆ ರೂಪರಾವ್ ಮಾತನಾಡಿ, ಮಂದಿರ ನಿರ್ಮಾಣ ಕಾರ್ಯಕ್ಕೆ ನಿಧಿ ಸಂಗ್ರಹದ ಸಲುವಾಗಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಕಾಣಿಕೆ ಸ್ವೀಕರಿಸುತ್ತಿದ್ದು, ಹೊಸತನದ ಅನುಭವವನ್ನುಂಟು ಮಾಡುತ್ತಿದೆ. ಬಹುಮುಖ್ಯವಾಗಿ ಬಹಳಷ್ಟು ಮುಸ್ಲಿಂ ಹಾಗು ಕ್ರಿಶ್ಚಿಯನ್ ಸಮುದಾಯದವರು ಸಹ ಅಭಿಮಾನ ಪೂರ್ವಕವಾಗಿ ನಿಧಿಯನ್ನು ಸಮರ್ಪಿಸುತ್ತಿರುವುದು ವಿಶೇಷವಾದ ಸಂಗತಿಯಾಗಿದೆ ಎಂದರು.  
    ವೇದಿಕೆಯಲ್ಲಿ ಡಾ. ದತ್ತಾತ್ರಿ, ರಮೇಶ್ ಬಾಬು, ಶಿವಮೂರ್ತಿ, ಶಿವಕುಮಾರ್, ಪಿ. ವೆಂಕಟರಮಣ ಶೇಟ್, ಕೆ. ಮುತ್ತು ರಾಮಲಿಂಗಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
     ಕಾರ್ಯಕ್ರಮದಲ್ಲಿ ಭಕ್ತರಿಂದ ಸಂಗ್ರಹಿಸಲಾದ ೨.೧೫ ಲಕ್ಷ ರು. ದೇಣಿಗೆಯನ್ನು ಶ್ರೀ ರಾಮಜನ್ಮ ಭೂಮಿ ನಿರ್ಮಾಣದ ನಿಧಿ ಸಮರ್ಪಣ ಟ್ರಸ್ಟ್‌ಗೆ ಸಮರ್ಪಿಸಲಾಯಿತು. ಹಾ. ರಾಮಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಂಚರತ್ನಮ್ಮ ಪ್ರಾರ್ಥಿಸಿದರು. ರಾಮಮೂರ್ತಿ ಸ್ವಾಗತಿಸಿದರು.  

No comments:

Post a Comment