Thursday, September 30, 2021

ಅಭಿವೃದ್ಧಿ ಅಧಿಕಾರಿ ಮಧುಸೂದನ್ ವಿರುದ್ಧ ಹಲವು ಭ್ರಷ್ಟಾಚಾರ ಆರೋಪ : ಕಾನೂನು ಕ್ರಮಕ್ಕೆ ಆಗ್ರಹ

ಈ ಹಿಂದೆ ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಮಧುಸೂದನ್ ಅವರು ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮದ ಮುಖಂಡರು ಒತ್ತಾಯಿಸಿದರು.
    ಭದ್ರಾವತಿ, ಸೆ. ೩೦: ಈ ಹಿಂದೆ ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಮಧುಸೂದನ್ ಅವರು ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದು, ಈ ಸಂಬಂಧ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮದ ಮುಖಂಡರು ಆರೋಪಿಸಿದರು.
    ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ೨೦೧೯-೨೦ನೇ ಸಾಲಿನಲ್ಲಿ ಅವ್ಯವಹಾರ ನಡೆಸಲಾಗಿದೆ. ದಾಖಲೆಗಳಲ್ಲಿ ಕಾಮಗಾರಿ ನಡೆಸಿರುವುದಾಗಿ ನಮೂದಿಸಲಾಗಿದ್ದು, ಆದರೆ ವಾಸ್ತವವಾಗಿ ಯಾವುದೇ ಕಾಮಗಾರಿ ನಡೆದಿಲ್ಲ. ಅಲ್ಲದೆ ಗ್ರಾಮದ ಉದ್ಯೋಗ ಖಾತ್ರಿ ಫಲಾನುಭವಿಗಳಿಗೂ ಯಾವುದೇ ಅನುಕೂಲವಾಗಿಲ್ಲ. ಉದ್ಯೋಗ ಚೀಟಿಯಲ್ಲಿ ನಕಲಿ ಕೆಲಸಗಾರರ ಹೆಸರನ್ನು ಸೇರಿಸಿ ಲಕ್ಷಾಂತರ ರು. ಭ್ರಷ್ಟಾಚಾರ ನಡೆಸಲಾಗಿದೆ. ೧೪ನೇ ಹಣಕಾಸಿನ ಯೋಜನೆ ಹಾಗು ವರ್ಗ-೧ರಲ್ಲಿ ಸಹ ಸಾಕಷ್ಟು ಭ್ರಷ್ಟಾಚಾರ ನಡೆಸಲಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಅಂಗವಿಕಲರಿಗೆ ನೀಡಿರುವ ಹೊಲಿಗೆ ಯಂತ್ರ ಹಾಗು ಸೋಲಾರ್ ದೀಪಗಳು ಅರ್ಹ ಫಲಾನುಭವಿಗಳಿಗೆ ನೀಡದೇ ಭ್ರಷ್ಟಾಚಾರ ನಡೆಸಲಾಗಿದೆ ಎಂದು ದೂರಿದರು.
    ಗ್ರಾಮದಲ್ಲಿರುವ ಸರ್ಕಾರಿ ಜಾಗಗಳನ್ನು ನಿಯಮಗಳನ್ನು ಮೀರಿ ಹಣವಂತರಿಗೆ ಖಾತೆ ಮಾಡಿಕೊಡಲಾಗಿದೆ. ಅಲ್ಲದೆ ಖಾಸಗಿ ವ್ಯಕ್ತಿಗಳ ರೆವಿನ್ಯೂ ಜಾಗವನ್ನು ರಿಜಿಸ್ಟ್ರಾರ್ ಪತ್ರದ ಆಧಾರದ ಮೇಲೆ ಸ್ಥಳ ಪರಿಶೀಲನೆ ಮಾಡದೆ ಖಾತೆ ಮಾಡಿ ಇ-ಸ್ವತ್ತು ನೀಡಲಾಗಿದೆ. ಆಶ್ರಯ ವಸತಿ ಯೋಜನೆಯಡಿ ಹಾಗು ಕೊಟ್ಟಿಗೆ ನಿರ್ಮಾಣದಲ್ಲೂ ಸಹ ಸಾಕಷ್ಟು ಭ್ರಷ್ಟಾಚಾರ ನಡೆಸಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಹಳೆ ಹಿರಿಯೂರು ಗ್ರಾಮದ ಗ್ರಾಮ ಠಾಣಾ ಜಾಗದಲ್ಲಿ ಅಕ್ರಮವಾಗಿ ಸುಮಾರು ೯ ಮಂದಿ ಹೆಸರಿಗೆ ಎಕರೆಗಟ್ಟಲೆ ಜಾಗವನ್ನು ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು.
    ಮಧುಸೂದನ್ ಅವರು ಒಟ್ಟಾರೆ ಸಾಕಷ್ಟು ಭ್ರಷ್ಟಾಚಾರಗಳನ್ನು ನಡೆಸಿರುವುದು ದಾಖಲೆಗಳಿಂದ ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಸಂಬಂಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕ್ರಮ ಕೈಗೊಳ್ಳುವ ಬದಲು ದಾಸರಕಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿದೆ. ತಕ್ಷಣ ಮಧುಸೂದನ್ ಅವರನ್ನು ಕೆಲಸದಿಂದ ಅಮಾನುತ್ತುಗೊಳಿಸಬೇಕೆಂದರು ಆಗ್ರಹಿಸಿದರು. ಅಲ್ಲದೆ ಇತ್ತೀಚೆಗೆ ವರ್ಗಾವಣೆಗೊಂಡು ಬಂದಿದ್ದ ಪ್ರಾಮಾಣಿಕ ಅಧಿಕಾರಿಯಾಗಿರುವ ಸುಮಿತ್ರ ಸುಬೇದಾರ್ ಅವರನ್ನು ಕಾರಣ ನೀಡದೆ ೨ ತಿಂಗಳು ಕಳೆಯುವಷ್ಟರಲ್ಲಿ ವರ್ಗಾವಣೆ ಮಾಡಿರುವುದನ್ನು ಖಂಡಿಸಿದರು.
    ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಚ್.ವೈ ಕುಮಾರ್ ಮತ್ತು ಕಮಲಬಾಯಿ ಹಾಗು ಮಾಜಿ ಸದಸ್ಯರಾದ ಸತ್ಯನಾರಾಯಣ, ಕೆ.ಟಿ ಪ್ರಸನ್ನ, ಗ್ರಾಮದ ಮುಖಂಡರಾದ ಕೋಡ್ಲುಯಜ್ಞಯ್ಯ, ಬಿ. ರವಿ, ಗಿರಿ, ಜಯದೇವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

No comments:

Post a Comment