ಭದ್ರಾವತಿ : ಆರ್ಟ್ ಆಫ್ ಲೀವಿಂಗ್ ಫೌಂಡೇಷನ್ ಶಿವಮೊಗ್ಗ ಶಾಖೆ ವತಿಯಿಂದ ಡಿ.೨೧ರಂದು ಮೊದಲ ಬಾರಿಗೆ ವಿಶ್ವಧ್ಯಾನ ದಿನ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಸಂಯೋಜನಾಧಿಕಾರಿ ಬಿ. ಮೂರ್ತಿ ಕೋರಿದ್ದಾರೆ.
ವಿಶ್ವಸಂಸ್ಥೆ ಇತ್ತೀಚೆಗೆ ಡಿ.೨೧ ವಿಶ್ವಧ್ಯಾನ ದಿನ ಎಂದು ಘೋಷಿಸಿದ್ದು, ಇದು ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ. ಈ ಆಚರಣೆ ನಿರ್ಧಾರವು ಧ್ಯಾನದ ಶ್ರೀಮಂತ ಪರಂಪರೆಯನ್ನು ಆಚರಿಸುತ್ತದೆ ಮತ್ತು ಆಂತರಿಕ ಶಾಂತಿ ಮತ್ತು ಯೋಗಕ್ಷೇಮ ಉತ್ತೇಜಿಸುವ ಪ್ರಾಚೀನ ಅಭ್ಯಾಸಗಳ ಜಾಗತಿಕ ಮನ್ನಣೆಯೊಂದಿಗೆ ಹೊಂದಿಕೆಯಾಗುತ್ತದೆ. ವಿಶ್ವ ಸಂಸ್ಥೆಯು ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಸಂಸ್ಥಾಪಕರಾದ ಆಧ್ಯಾತ್ಮಿಕ ನಾಯಕ ಮತ್ತು ಮಾನವತವಾದಿ ಶ್ರೀ ರವಿಶಂಕರ್ ಗುರೂಜಿಯವರ ನೇತೃತ್ವದಲ್ಲಿ ಪ್ರಪ್ರಥಮ ವಿಶ್ವಧ್ಯಾನ ದಿನ ಆಚರಿಸಲು ತಿರ್ಮಾನಿಸಿರುವುದು ಭಾರತೀಯರಾದ ನಾವುಗಳು ಹೆಮ್ಮೆಪಡುವ ವಿಚಾರವಾಗಿದೆ.
ಶ್ರೀ ರವಿಶಂಕರ್ ಗುರೂಜಿಯವರು ಡಿ.೨೧ರಂದು ಯೂಟ್ಯೂಬ್‌ನಲ್ಲಿ ರಾತ್ರಿ ೮ ಗಂಟೆಯಿಂದ ನೇರ ವಿಶ್ವಧ್ಯಾನದ ಅವಧಿಯನ್ನು ಮುನ್ನಡೆಸಲಿದ್ದಾರೆ. ಆಸಕ್ತರು ನೇರಪ್ರಸಾರದಲ್ಲಿ ಭಾಗವಹಿಸಿ ಧ್ಯಾನ್ಯದ ಪರಿವರ್ತಕ ಶಕ್ತಿಯನ್ನು ಅನುಭವಿಸಬಹುದಾಗಿದೆ. ಡಿ.೨೧ರಂದು ತಾಲೂಕಿನ ಬಿಆರ್‌ಪಿ, ಸುದರ್ಶನ ಕ್ರಿಯೆ ಉಗಮಸ್ಥನದಲ್ಲಿ ಬೆಳಿಗ್ಗೆ ೭ ಗಂಟೆಯಿಂದ ೮ ಗಂಟೆವರೆಗೆ ಹಾಗು ಶಿವಮೊಗ್ಗ ನವುಲೆ, ನವನಗರ, ಆರ್ಟ್ ಆಫ್ ಲಿವಿಂಗ್ ಜ್ಞಾನಕ್ಷೇತ್ರದಲ್ಲಿ ರಾತ್ರಿ ೮ಕ್ಕೆ ವಿಶ್ವಧ್ಯಾನ ದಿನ ಆಯೋಜಿಸಲಾಗಿದೆ. ಆಸಕ್ತರು ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ: ೮೪೩೧೩೪೩೭೬೦ ಅಥವಾ ೭೦೧೯೨೦೭೨೧೨ ಸಂಖ್ಯೆ ಸಂಪರ್ಕಿಸಬಹುದಾಗಿದೆ.
No comments:
Post a Comment