Monday, February 10, 2025

ಮ್ಯಾಟ್ರಿಮೋನಿ ಅಪ್ಲಿಕೇಷನ್ ಮೂಲಕ ಮದುವೆಯಾಗುವುದಾಗಿ ನಂಬಿಸಿ ವಂಚನೆ

ಭೀಮರಾಜ್ ಅಲಿಯಾಸ್ ಜೈಭೀಮ್ ಬಿನ್ ವಿಠಲ್
    ಭದ್ರಾವತಿ: ಮ್ಯಾಟ್ರಿಮೋನಿ ಅಪ್ಲಿಕೇಷನ್ ಮೂಲಕ ತಾಲೂಕಿನ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರು. ದೋಚಿದ್ದ ವಂಚಕನೊಬ್ಬ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. 
    ಬಂಧಿತ ವ್ಯಕ್ತಿ ಬಿಜಾಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದ ನಿವಾಸಿ ಭೀಮರಾಜ್ ಅಲಿಯಾಸ್ ಜೈಭೀಮ್ ಬಿನ್ ವಿಠಲ್(೪೦) ಎಂದು ಗುರುತಿಸಲಾಗಿದೆ. ವಂಚನೆ ಪ್ರಕರಣ ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಆನ್‌ಲೈನ್ ಅಪ್ಲಿಕೇಷನ್‌ಗಳನ್ನು ನಂಬಿ ಮೋಸ ಹೋಗದಂತೆ ಜಿಲ್ಲಾ ಪೊಲೀಸ್ ಭೀಮರಾಜ್ ಪೋಟೋ ಹಾಗು ಆತ ನಡೆಸಿದ ವಂಚನೆ ಪ್ರಕರಣಗಳ ಪಟ್ಟಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. 
    ಘಟನೆ ವಿವರ: 
    ಮ್ಯಾಟ್ರಿಮೋನಿ ಮೂಲಕ ಮಹಿಳೆಗೆ ಪರಿಚಯವಾದ ಭೀಮರಾಜ್, ಈ ಮೊದಲೇ ತಾನು ಮದುವೆಯಾಗಿರುವುದನ್ನು ಮರೆಮಾಚಿ ಮದುವೆಯಾಗುವುದಾಗಿ ನಂಬಿಸಿದ್ದಾನೆ. ನಂತರ ಅವರಿಂದ ಹಣ ಮತ್ತು ಒಡವೆಗಳನ್ನು ಪಡೆದು ಬಳಿಕ ಸಂಪರ್ಕಕ್ಕೆ ಸಿಗದೆ ಪರಾರಿಯಾಗಿದ್ದಾನೆ. 
    ಮಹಿಳೆಯಿಂದ ತನ್ನ ತಾಯಿಯ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಪೋನ್ ಪೇ ಮೂಲಕ ಒಟ್ಟು ೫,೪೩,೪೫೧ ರು.ಗಳನ್ನು ಪಡೆದಿದ್ದು, ನಂತರ ೨,೦೦,೦೦೦ ರು. ನಗದು ಹಣ ಪಡೆದುಕೊಂಡಿದ್ದಾನೆ. ಅಲ್ಲದೆ ಕಛೇರಿ ಸಮಾರಂಭದ ಕಾರಣ ಹೇಳಿ ಸುಮಾರು ೨,೨೫,೦೦೦ ರು. ಮೌಲ್ಯದ ಸುಮಾರು ೩೦ ಗ್ರಾಂ. ತೂಕದ ಚಿನ್ನಾಭರಣಗಳನ್ನು ಪಡೆದುಕೊಂಡು ವಂಚಿಸಿದ್ದಾನೆ ಎನ್ನಲಾಗಿದೆ. ಮಹಿಳೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು. 
    ಭೀಮರಾಜ್ ಪ್ರಸ್ತುತ ಕೊಪ್ಪಳ ಜಿಲ್ಲೆಯ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಈತನ ವಿರುದ್ಧ ರಾಜ್ಯ ವಿವಿಧ ೧೦ ಪೊಲೀಸ್ ಠಾಣೆಗಳಲ್ಲಿ ೧೨ ಪ್ರಕರಣಗಳು ದಾಖಲಾಗಿವೆ. 

No comments:

Post a Comment