Sunday, December 1, 2024

ಕನ್ನಡ ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ : ಹಿರೇನಲ್ಲೂರು ಶ್ರೀನಿವಾಸ್

ಭದ್ರಾವತಿ ಶುಗರ್‌ಟೌನ್ ಲಯನ್ಸ್ ಕ್ಲಬ್‌ನಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಣೆ ಕಾರ್ಯಕ್ರಮ ಹಿರೇನಲ್ಲೂರು ಶ್ರೀನಿವಾಸ್, ಬೆಳ್ಳೋಡಿ ಶಿವಕುಮಾರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ನಾಡಿನ ಹಿರಿಯರು ಹಚ್ಚಿರುವ ಕನ್ನಡ ದೀಪ ಎಂದೂ ಆರದಂತೆ ಕಾಪಾಡಿ ಅದನ್ನು ಉಳಿಸಿ ಬೆಳೆಸುವ ಮಹತ್ತರವಾದ ಜವಾಬ್ದಾರಿ ಇಂದಿನವರ ಮೇಲಿದೆ ಎಂದು ಶಿಕ್ಷಕ ಹಿರೇನಲ್ಲೂರು ಶ್ರೀನಿವಾಸ್ ಹೇಳಿದರು.
    ಅವರು ಶುಗರ್‌ಟೌನ್ ಲಯನ್ಸ್ ಕ್ಲಬ್‌ನಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ಕನ್ನಡ ಭಾಷೆಯ ಮೂಲಕ ನಮ್ಮ ಎಲ್ಲಾ ರೀತಿಯ ಭಾವನೆಗಳನ್ನು ಹೊರಹಾಕಲು, ವ್ಯಕ್ತಪಡಿಸಲು ಸಾಧ್ಯ. ಇಂತಹ ಶಕ್ತಿ ನಮ್ಮ ಕನ್ನಡ ಭಾಷೆಗಿರುವುದು ನಾಡಿನ ಕನ್ನಡಿಗರ ಹೆಮ್ಮೆಯ ಸಂಗತಿಯಾಗಿದೆ.  ಆದರೆ ಇಂದು ಕನ್ನಡ ಭಾಷೆ ಓದಬೇಕು, ಕಲಿಕಾ ಮಾಧ್ಯಮ ಕನ್ನಡ ಭಾಷೆಯಾಗಬೇಕು ಎಂಬುದು ಕೇವಲ ವೇದಿಕೆಗಳಲ್ಲಿ ಮಾತ್ರ ಸೀಮಿತವಾಗಿ ಕೇಳಿ ಬರುತ್ತಿದೆ. ಇಂದು ಬಹುತೇಕ ಮಕ್ಕಳು ಆಂಗ್ಲ ಭಾಷೆಯಲ್ಲಿ ಓದುತ್ತಿದ್ದು, ಇದೊಂದು ರೀತಿಯ ವಿಪರ್ಯಾಸದ ಸಂಗತಿಯಾಗಿದೆ. ಈ ನಡುವೆ ಆಂಗ್ಲ ಭಾಷೆಯಲ್ಲಿ ಓದುತ್ತಿದ್ದರೂ ಸಹ ಕನ್ನಡ ಭಾಷೆಯ ಬಗ್ಗೆ, ಕನ್ನಡತನದ ಬಗ್ಗೆ ಹಾಗು ನಾಡಿನ ಸಾಹಿತ್ಯ ಸಾಂಸ್ಕೃತಿಕ ಸಂಗತಿಗಳ ಬಗ್ಗೆ ಒಲವನ್ನು ಬೆಳೆಸಿಕೊಳ್ಳಬೇಕೆಂದರು. 
    ಲಯನ್ಸ್ ಕ್ಲಬ್ ೩೧೭ಸಿ ಜಾಗತಿಕ ತಂಡದ ಮುಖ್ಯ ಸಮನ್ವಯಾಧಿಕಾರಿ ಬೆಳ್ಳೋಡಿ ಶಿವಕುಮಾರ್ ಮಾತನಾಡಿ, ನಮ್ಮ ದೇಶದಲ್ಲಿ ದೀಪಾವಳಿ ಹಬ್ಬದ ನಂತರ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳ ಹೊಸ ಆರ್ಥಿಕ ಚಟುವಟಿಕೆಗಳು ನಡೆಯಲು ನಿರ್ಧಾರವಾಗುತ್ತದೆ. ಹಾಗಾಗಿ ಇದಕ್ಕೆ ವಿಶೇಷ ಮಹತ್ವವಿದೆ. ಅದೇ ರೀತಿಯಲ್ಲಿ ಸಂಘ-ಸಂಸ್ಥೆಗಳಲ್ಲಿ ಸಹ ಆರ್ಥಿಕ ಚಟುವಟಿಕೆಗಳ ಲೆಕ್ಕಪತ್ರಗಳನ್ನು ಸರಿಯಾಗಿ ಪಾರದರ್ಶಕವಾಗಿ ನಿರ್ವಹಿಸಿದಾಗ ಅವುಗಳ ಬಗ್ಗೆ ನಂಬಿಕೆ, ಘನತೆ, ಗೌರವ ಹೆಚ್ಚಾಗುತ್ತದೆ. ಇದನ್ನು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್‌ನಂತಹ ಅಂತರಾಷ್ಟ್ರೀಯ ಸಂಸ್ಥೆ ಮಂಚೂಣಿಯಲ್ಲಿರುವುದು ಗೌರವದ ಸಂಗತಿ ಎಂದರು.
    ಉಮೇಶ್ ರಾಜು, ಯೋಗೀಶ್, ಶಿವಕುಮಾರ್, ಬಿ.ಎಸ್ ಮಹೇಶ್ ಕುಮಾರ್, ಜಿ.ಎಚ್ ಶಿವಾನಂದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
    ನಿಂಗೋಜಿರಾವ್ ಪ್ರಾರ್ಥಿಸಿ, ಉಮೇಶ್ ಸ್ವಾಗತಿಸಿದರು. ತಮ್ಮೇಗೌಡ ಕಾರ್ಯಕ್ರಮ ನಿರೂಪಿಸಿ ವರದಿ ಮಂಡಿಸಿದರು. ಯೋಗೀಶ್ ಲೆಕ್ಕಪತ್ರ ಮಂಡಿಸಿ ವಂದಿಸಿದರು. ಅನಂತಕೃಷ್ಣ ನಾಯಕ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಸವಿತ ಅಥಿತಿಗಳ ಪರಿಚಯ ನಡೆಸಿಕೊಟ್ಟರು.  

No comments:

Post a Comment