ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಂಜಾರ ಯುವಕರ ಸಂಘದ ಅಧ್ಯಕ್ಷ ಪಿ. ಕೃಷ್ಣನಾಯ್ಕ ಹಾಗು ಬಂಜಾರ ಸಮಾಜದ ಪ್ರಮುಖರು ಮಾತನಾಡಿದರು.
ಭದ್ರಾವತಿ, ಆ. ೧೯: ಶ್ರೀ ಸಂತ ಸೇವಾಲಾಲ್ ಜನ್ಮಸ್ಥಳ ಮಹಾಮಠ, ಬಂಜಾರ ಸಮಾಜದ ಪುಣ್ಯ ಕ್ಷೇತ್ರವಾದ ದಾವಣಗೆರೆ ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉದ್ಯೋಗಿ ಪ್ರಾಥಮಿಕ ಶಿಕ್ಷಾ ವರ್ಗ(ಆರ್‌ಎಸ್‌ಎಸ್ ಶಿಬಿರ) ಯಾವುದೇ ಕಾರಣಕ್ಕೂ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಬಂಜಾರ ಯುವಕರ ಸಂಘದ ಅಧ್ಯಕ್ಷ ಪಿ. ಕೃಷ್ಣಾನಾಯ್ಕ ಹೇಳಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಸಂತ ಸೇವಾಲಾಲ್ ಜನ್ಮಸ್ಥಳ ತನ್ನದೇ ಆದ ಪರಂಪರೆ, ಧಾರ್ಮಿಕ ಸಂಸ್ಕೃತಿಯನ್ನು ಹೊಂದಿದೆ. ಇಂತಹ ಸ್ಥಳದಲ್ಲಿ ಧಾರ್ಮಿಕ ಸಂಸ್ಕೃತಿಗೆ ಧಕ್ಕೆ ತರುವಂತಹ ಬೇರೆ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಪುಣ್ಯ ಸ್ಥಳದ ಅಭಿವೃದ್ಧಿ ಹಾಗು ಬಂಜಾರ ಸಮಾಜದವರ ಏಳಿಗೆಗೆ ಪೂರಕವಾದ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಬೇಕು. ಆದರೆ ಬಂಜಾರ ಸಮಾಜದವರ ಗಮನಕ್ಕೆ ಬಾರದಂತೆ ಸೆ.೧೧ ರಿಂದ ೧೯ರ ವರೆಗೆ ಉದ್ಯೋಗಿ ಪ್ರಾಥಮಿಕ ಶಿಕ್ಷಾ ವರ್ಗ ನಡೆಯುತ್ತಿರುವ ಬಗ್ಗೆ ಈಗಾಗಲೇ ಕರಪತ್ರಗಳನ್ನು ಹಂಚಲಾಗಿದೆ. ಈ ಮೂಲಕ ಬಂಜಾರ ಸಮಾಜದ ಧಾರ್ಮಿಕ ಸಂಸ್ಕೃತಿ ಮೇಲೆ ದಾಳಿ ನಡೆಲು ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಕುಡಚಿ ಕ್ಷೇತ್ರದ ಶಾಸಕರು, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಿ. ರಾಜೀವ್ ಕಾರಣ ಎಂಬ ಆರೋಪ ಕೇಳಿಬರುತ್ತಿವೆ. ಪಿ. ರಾಜೀವ್ ಅವರಿಗೆ ಅನುಮತಿ ನೀಡಲು ಯಾವುದೇ ಅಧಿಕಾರವಿಲ್ಲ. ಒಂದು ವೇಳೆ ಶಿಕ್ಷಾ ವರ್ಗ ನಡೆಯಬೇಕಾದರೆ ಮಹಾಮಠದ ಟ್ರಸ್ಟ್ ಅನುಮತಿ ಕಡ್ಡಾಯವಾಗಿದೆ ಎಂದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಆ.೨೧ರಂದು ಮಹಾಮಠದಲ್ಲಿ ಬೃಹತ್ ಬಾಯ್ ಘಡ್ ಅಂದೋಲನ ನಡೆಯಲಿದ್ದು, ಈ ಅಂದೋಲನದಲ್ಲಿ ರಾಜ್ಯದ ವಿವಿಧೆಡೆಗಳಿಂದ ಬಂಜಾರ ಸಮಾಜದವರು ಪಾಲ್ಗೊಳ್ಳಲಿದ್ದಾರೆ. ಅಂದೋಲನದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಒಂದು ವೇಳೆ ಇದಕ್ಕೆ ವಿರೋಧ ವ್ಯಕ್ತವಾದಲ್ಲಿ ಮುಂದಿನ ಹೋರಾಟ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರೇಮ್‌ಕುಮಾರ್, ಶಂಕರ್‌ನಾಯ್ಕ, ಚಂದ್ರು, ವೀರೇಶ್, ನಾಗನಾಯ್ಕ, ಸುಮಾಬಾಯಿ, ಸೋಮಿಬಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment