ಭಾನುವಾರ, ಫೆಬ್ರವರಿ 23, 2025

ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಅಪಹರಣ


    ಭದ್ರಾವತಿ : ಪತಿ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ಬೈಪಾಸ್ ರಸ್ತೆ ಬಳಿ ನಡೆದಿದೆ. 
    ಕಳೆದ ೨ ದಿನಗಳ ಹಿಂದೆ ಸಿರಿಯೂರು ಗ್ರಾಮದ ನಿವಾಸಿ ಹನುಮಂತೇಗೌಡರವರು ತಮ್ಮ ಪತ್ನಿ ಭಾಗ್ಯಮ್ಮರ ಜೊತೆ ರಾತ್ರಿ ೮ ಗಂಟೆ ಸಮಯದಲ್ಲಿ ನ್ಯೂಕಾಲೋನಿಯಲ್ಲಿರುವ ಸಂಬಂಧಿಕರ ಮಗಳ ಮನೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಪುನಃ ಹಿಂದಿರುಗಿ ತಮ್ಮ ಗ್ರಾಮಕ್ಕೆ ತೆರಳುವಾಗ ರಾತ್ರಿ ೯.೪೫ರ ಸಮಯದಲ್ಲಿ ಜಿಂಕ್‌ಲೈನ್, ಶ್ರೀ ಮಾದೇಶ್ವರ ದೇವಸ್ಥಾನ ರಸ್ತೆ ಮೂಲಕ ಬೈಪಾಸ್ ಬಳಿ ಬಂದಾಗ ವಾಹನ ದಟ್ಟಣೆ ಅಧಿಕವಾದ ಹಿನ್ನಲೆಯಲ್ಲಿ ಹನುಮಂತೇಗೌಡರು ತಮ್ಮ ದ್ವಿಚಕ್ರ ವಾಹನ ಚಾಲನೆ ನಿಧಾನಗೊಳಿಸಿದ್ದಾರೆ. ಇದೆ ಸಂದರ್ಭದಲ್ಲಿ ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ವಾಹನದಲ್ಲಿ ಬರುತ್ತಿದ್ದ ಇಬ್ಬರು ಅಪರಿಚಿತರು ಭಾಗ್ಯಮ್ಮರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. 
    ಸುಮಾರು ೩೫ ಗ್ರಾಂ ತೂಕದ ೨ ಎಳೆಯ, ೨ ತಾಳಿ ಇರುವ ಸುಮಾರು ೧.೭೫ ಲಕ್ಷ ರು. ಮೌಲ್ಯದ ಮಾಂಗಲ್ಯ ಸರ ಅಪಹರಿಸಲಾಗಿದ್ದು, ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಅಪರಿಚಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ