ಭದ್ರಾವತಿಗೆ ಆಗಮಸಿದ್ದ ರಾಮ್ ಸೇನ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ಪತ್ರಿಕೆಯೊಂದಿಗೆ ಮಾತನಾಡಿದರು.
ಭದ್ರಾವತಿ, ಫೆ. ೨೮: ಯುವ ಸಮುದಾಯ ಯಾವುದೇ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಕುಟುಂಬಕ್ಕೆ ಮೊದಲ ಆದ್ಯತೆ ನೀಡಬೇಕೆಂಬುದು ರಾಮ್ ಸೇನಾ ಕರ್ನಾಟಕ ಸಂಘಟನೆಯ ಆಶಯವಾಗಿದೆ ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ತಿಳಿಸಿದರು.
ಅವರು ಪತ್ರಿಕೆಯೊಂದಿಗೆ ಮಾತನಾಡಿ, ಸಮಾಜದಲ್ಲಿ ಉತ್ತಮ ಕುಟುಂಬ ನಿರ್ಮಾಣ ಮಾಡುವುದೇ ಸಂಘಟನೆ ಧ್ಯೇಯವಾಗಿದೆ. ಇಂತಹ ಧ್ಯೇಯ ಹೊಂದಿರುವ ಸಂಘಟನೆಯಲ್ಲಿ ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ, ಹೆಂಡತಿ, ಮಕ್ಕಳು ಹೀಗೆ ಎಲ್ಲರನ್ನು ಒಳಗೊಂಡಿರುವ ಕುಟುಂಬದ ಜವಾಬ್ದಾರಿ ಯುವ ಸಮುದಾಯ ಹೊರಬೇಕು. ಈ ಹಿನ್ನಲೆಯಲ್ಲಿ ಯುವ ಸಮುದಾಯ ಮೊದಲು ಉದ್ಯೋಗ ಹೊಂದುವ ಜೊತೆಗೆ ಆರ್ಥಿಕವಾಗಿ ಬಲಗೊಳ್ಳಬೇಕು. ಕುಟುಂಬಕ್ಕಾಗಿ ಸಮಯ ಮೀಸಲಿಡಬೇಕು. ಮೊದಲ ಆದ್ಯತೆ ಕುಟುಂಬಕ್ಕೆ ನೀಡಬೇಕು. ಉಳಿದ ಸಮಯವನ್ನು ಸಂಘಟನೆಗಾಗಿ ಮೀಸಲಿಡಬೇಕು. ಯಾವುದೇ ಕಾರಣಕ್ಕೂ ಕುಟುಂಬ ತೊರೆದು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬಾರದು. ಇಂತಹ ಕಾರ್ಯಕರ್ತರ ಅಗತ್ಯ ನಮ್ಮ ಸಂಘಟನೆಗೆ ಬೇಕಿಲ್ಲ ಎಂದರು.
ಧರ್ಮ ರಕ್ಷಣೆ, ರಾಷ್ಟ್ರ ನಿರ್ಮಾಣಕ್ಕಾಗಿ ಕಾನೂನು ಕೈಗೆತ್ತಿಕೊಳ್ಳಲು ಸಿದ್ದ:
ದೇವರಿಗೆ ಸರಿಸಮಾನವಾದ ಸತ್ಯ, ಧರ್ಮ, ನ್ಯಾಯದ ದಾರಿಯಲ್ಲಿ ಸಾಗುವುದೇ ಧರ್ಮ ಎಂಬ ಪರಿಕಲ್ಪನೆಯನ್ನು ಸಂಘಟನೆ ಹೊಂದಿದೆ. ಪ್ರತಿಯೊಬ್ಬರಲ್ಲೂ ಉತ್ತಮ ಸಂಸ್ಕಾರ, ಆಧ್ಯಾತ್ಮಿಕ ಚಿಂತನೆಗಳು ಬೆಳೆಯಬೇಕು. ಈ ಕಾರ್ಯ ಪ್ರತಿ ಮನೆಗಳಿಂದ ಆರಂಭಗೊಳ್ಳಬೇಕು. ಇದು ಸಂಘಟನೆಯ ಉದ್ದೇಶಗಳಲ್ಲಿ ಒಂದಾಗಿದ್ದು, ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತ ಇದನ್ನು ಅಳವಡಿಸಿಕೊಂಡು ತಮ್ಮ ಸುತ್ತಲಿನ ಪರಿಸರದಲ್ಲೂ ಈ ಕುರಿತು ಜಾಗೃತಿ ಮೂಡಿಸಬೇಕು. ಆ ಮೂಲಕ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು. ನಮ್ಮ ಧರ್ಮ ಹಾಗೂ ರಾಷ್ಟ್ರ ಉಳಿಯಬೇಕಾದರೆ ನಮ್ಮ ಆಶಯಗಳಿಗೆ ಆಳುವ ಸರ್ಕಾರ ಪೂರಕವಾಗಿ ಸ್ಪಂದಿಸಬೇಕು. ಇಲ್ಲವಾದಲ್ಲಿ ಕಾನೂನು ಕೈಗೆತ್ತಿಗೊಳ್ಳುವುದು ಅನಿವಾರ್ಯವಾಗುತ್ತದೆ. ಈ ಹಿಂದೆ ಕೆಲವು ಬಾರಿ ಸಂಘಟನೆ ಕಾನೂನು ಕೈಗೆತ್ತಿಕೊಂಡಿದೆ. ಮುಂದೆ ಸಹ ಕೈಗೆತ್ತಿಗೊಳ್ಳಲಿದೆ. ಯಾವುದೇ ಧರ್ಮದ ವಿರುದ್ಧ ನಮ್ಮ ಹೋರಾಟವಿಲ್ಲ. ಬದಲಿಗೆ ಧರ್ಮ ವಿರೋಧಿಗಳ, ದೇಶದ್ರೋಹಿಗಳ ವಿರುದ್ಧ ನಮ್ಮ ಹೋರಾಟವಾಗಿದೆ ಎಂದರು.
ಅಯೋಧ್ಯೆ ಶ್ರಿರಾಮಜ್ಮನಭೂಮಿಯಲ್ಲಿ ಹೊಸ ಬೆಳಕು:
ಆಯೋಧ್ಯೆ ಶ್ರೀರಾಮ ಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ದೇಶಾದ್ಯಂತ ಕೋಟ್ಯಾಂತರ ಜನರು ತಮ್ಮದೇ ಆದ ರೀತಿಯಲ್ಲಿ ಸೇವೆಯನ್ನು ಸಮರ್ಪಿಸುತ್ತಿದ್ದಾರೆ. ಇದೆ ರೀತಿ ಸಂಘಟನೆ ಸಹ ತನ್ನದೇ ಆದ ಅಳಿಲು ಸೇವೆಯನ್ನು ಸಲ್ಲಿಸುತ್ತಿದೆ. ಶ್ರೀರಾಮ ಪುನರ್ ಪ್ರತಿಷ್ಠಾಪನೆಗೊಂಡು ಸಿಂಹಾಸನವೇರುವ ಗತವೈಭವವನ್ನು ದೇಶದ ಜನರು ಎದುರು ನೋಡಿದ್ದಾರೆ. ಅಂದು ಈ ದೇಶದಲ್ಲಿ ಹೊಸ ಬೆಳಕು ಮೂಡುವ ವಿಶ್ವಾಸವಿದೆ. ಜೊತೆಗೆ ರಾಮನ ಸೈನಿಕರಂತೆ ಈ ಸಂಘಟನೆ ಕಾರ್ಯಕರ್ತರು ಸಹ ದೇಶಾದ್ಯಂತ ವಿಸ್ತಾರಗೊಳ್ಳುವ ದಿನಗಳು ಬರಲಿವೆ ಎಂದರು.
ಕನ್ನಡ ಭಾಷೆಗೆ ಗೌರವ:
ಕನ್ನಡ ಅತ್ಯದ್ಭುತ ಭಾಷೆಯಾಗಿದ್ದು, ಈ ಭಾಷೆ ತನ್ನದೇ ಆದ ವಿಶಿಷ್ಟತೆಹೊಂದಿದೆ. ಕನ್ನಡ ಭಾಷೆ ಹಾಗು ತಾಯಿ ಭುವನೇಶ್ವರಿಗೆ ಸಂಘಟನೆ ಎಂದೆಂಗೂ ಗೌರವ ಸಲ್ಲಿಸುತ್ತದೆ. ಕನ್ನಡ ಪರ ಹೋರಾಟಗಳಲ್ಲೂ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ದೇಶದ ಚಿಂತನೆಯಲ್ಲಿ ನಮ್ಮ ಹೋರಾಟಗಳು ನಡೆಯುತ್ತಿವೆ ಎಂದರು.
ಬೆಳಗಾವಿಯಲ್ಲಿ ರಾಜಕೀಯ ಪ್ರೇರಿತ ಗೊಂದಲ:
ಬೆಳಗಾವಿಯಲ್ಲಿ ಮರಾಠಿಗರು, ಕನ್ನಡಿಗರ ನಡುವೆ ಯಾವುದೇ ಗೊಂದಲಗಳಿಲ್ಲ. ಎಲ್ಲರೂ ಒಗ್ಗಟ್ಟಾಗಿ ಬದುಕುತ್ತಿದ್ದಾರೆ. ಇಲ್ಲಿ ರಾಜಕೀಯ ಪ್ರೇರಿತ ಗೊಂದಲಗಳು ರೂಪುಗೊಳ್ಳುತ್ತಿವೆ. ಈ ನಿಟ್ಟಿಲ್ಲಿ ರೂಪುಗೊಂಡ ಹೋರಾಟಗಳಿಗೆ ಸಂಘಟನೆ ಬೆಂಬಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ಬೆಳಗಾವಿ ವಿವಾದ ಬಗೆಹರಿಯುವ ವಿಶ್ವಾಸವಿದೆ ಎಂದರು.
ಯಾವುದೇ ಸರ್ಕಾರದಿಂದ ರೈತರಿಗೆ ಮೋಸವಾಗಿಲ್ಲ :
ರೈತರ ಹೆಸರಿನಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ ಹೋರಾಟವಾಗಿದೆ. ನಿಜವಾದ ರೈತ ತನ್ನ ಕಾಯಕವನ್ನು ಮರೆತು ಎಂದಿಗೂ ಬೇಡಿಕೆಗಾಗಿ ಹೋರಾಟ ನಡೆಸಿಲ್ಲ. ಮುಂದೆಯೂ ಸಹ ನಡೆಸುವುದಿಲ್ಲ ಎಂಬ ವಿಶ್ವಾಸವಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಸರ್ಕಾರವಿರಲಿ ರೈತರಿಗೂ ಎಂದಿಗೂ ಅನ್ಯಾಯವಾಗಿಲ್ಲ. ಪ್ರಸ್ತುತ ಹೋರಾಟ ನಡೆಸುತ್ತಿರುವವರು ರೈತರಲ್ಲದವರು ಹಾಗು ಭೂಮಿಯನ್ನು ಲೀಸ್‌ಗೆ ಕೊಟ್ಟವರಾಗಿದ್ದು ಈ ಹಿನ್ನಲೆಯಲ್ಲಿ ನಮ್ಮ ಸಂಘಟನೆ ಹೋರಾಟ ಬೆಂಬಲಿಸುತ್ತಿಲ್ಲ ಎಂದರು.
ಸಂಘಟನೆ ಮೂಲಕ ಜಾತಿ ವಿಷಬೀಜ ನಿರ್ಮೂಲನೆ :
ಜಾತಿ ವ್ಯವಸ್ಥೆ ತೊಲಗಬೇಕು. ಜಾತಿ ಎಂಬ ವಿಷಬೀಜ ನಿರ್ಮೂಲನೆ ಮಾಡಬೇಕೆಂಬ ಧ್ಯೇಯೋದ್ದೇಶ ಸಹ ಸಂಘಟನೆ ಗುರಿಯಾಗಿಸಿಕೊಂಡಿದೆ. ಸಮಾಜದ ಎಲ್ಲರನ್ನು ಒಗ್ಗೂಡಿಸಿಕೊಂಡು ಸಂಘಟನೆಯನ್ನು ವಿಸ್ತಾರಗೊಳಿಸಲಾಗುತ್ತಿದೆ. ಸಂಘಟನೆಯ ಮುಖಂಡರು, ಕಾರ್ಯಕರ್ತರೆಲ್ಲರ ಮನಸ್ಥಿತಿ ಒಂದೇ ರೀತಿಯಾಗಿದೆ. ಸಂಘಟನೆಗಾಗಿ ದುಡಿಯುತ್ತಿರುವ ಎಲ್ಲರೂ ಸಮಾಜದಲ್ಲಿ ಒಂದಲ್ಲ ಒಂದು ನೋವು ಅನುಭವಿಸಿ ಬಂದವರಾಗಿದ್ದಾರೆ. ಎಲ್ಲೂ ಸಹ ಸ್ವಾತಃ ಎಂಬುದು ಇಲ್ಲ. ಎಲ್ಲೋ ಅಲ್ಪಸ್ವಲ್ಪ ದೋಷಗಳಿರಬಹುದು ಅವೆಲ್ಲನ್ನೂ ಸರಿಪಡಿಸಿಕೊಂಡು ಸಂಘಟನೆಯನ್ನು ಇನ್ನಷ್ಟು ಸದೃಢವಾಗಿ ಕಟ್ಟುವ ವಿಶ್ವಾಸ ಹೊಂದಿದ್ದೇನೆ ಎಂದರು.
ರಾಮ್ ಸೇನಾ ಕರ್ನಾಟಕ ಸಂಘಟನೆ ರಾಜ್ಯ ಕಾರ್ಯದರ್ಶಿ ಮಂಜುನಾಥ ಗುಲ್ಜಾರ್, ಸಂತೋಷ್‌ಶೆಟ್ಟಿ, ಜಿಲ್ಲಾಧ್ಯಕ್ಷ ಉಮೇಶ್‌ಗೌಡ ಉಪಸ್ಥಿತರಿದ್ದರು.
, ಜೈ ಶಿವಾಜಿ ಜೈ, ಜೈ ಶ್ರೀರಾಮ್
ReplyDelete