ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿಗುವಿನ ವಾತಾವರಣ
ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ವಸ್ತ್ರದೊಂದಿಗೆ ಕಾಲೇಜಿಗೆ ಆಗಮಿಸಿ ಹಿಜಾಬ್ ವಿರುದ್ಧ ಹೋರಾಟ ನಡೆಸುತ್ತಿರುವುದು.
ಭದ್ರಾವತಿ, ಫೆ. ೧: ಮಂಗಳೂರಿನಲ್ಲಿ ನಡೆಯುತ್ತಿದ್ದ ಹಿಜಾಬ್(ಬುರ್ಖಾ) ವಿರುದ್ಧದ ಹೋರಾಟ ನಗರದಲ್ಲೂ ಆರಂಭಗೊಂಡಿದ್ದು, ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಳೆದ ಕೆಲವು ದಿನಗಳಿಂದ ಈ ಸಂಬಂಧ ಹೋರಾಟ ಆರಂಭಗೊಂಡಿದೆ.
ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬರುತ್ತಿರುವ ವಿದ್ಯಾರ್ಥಿನಿಯರನ್ನು ಹೊರ ಹಾಕುವಂತೆ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದಿರುವ ಹಿಂದೂ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಾಲೇಜಿನಲ್ಲಿ ಅಹಿತಕರ ವಾತಾವರಣ ನಿರ್ಮಾಣಗೊಂಡಿದೆ.
ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಬರುವುದಾದರೇ ನಾವು ಸಹ ಕೇಸರಿ ವಸ್ತ್ರದೊಂದಿಗೆ ಕಾಲೇಜಿಗೆ ಬರುವುದಾಗಿ ಹಠಕ್ಕೆ ಬಿದ್ದಿರುವ ಹಿಂದೂ ವಿದ್ಯಾರ್ಥಿಗಳು ಮಂಗಳವಾರ ಕೇಸರಿ ವಸ್ತ್ರದೊಂದಿಗೆ ಕಾಲೇಜಿಗೆ ಆಗಮಿಸಿದ್ದು, ಇದರಿಂದಾಗಿ ಮತ್ತಷ್ಟು ಬಿಗುವಿನ ವಾತಾವರಣ ಉಂಟಾಗಿದೆ. ಈ ನಡುವೆ ಕಾಲೇಜಿನ ಪ್ರಾಂಶುಪಾಲರು ಕಾಲೇಜಿನಲ್ಲಿ ಯಾವುದೇ ರೀತಿ ವಸ್ತ್ರ ಸಂಹಿತೆ ನಿಗದಿಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಪೊಲೀಸರು ವಾತಾವರಣ ತಿಳಿಗೊಳಿಸಲು ಹರಸಾಹಸ ಪಡುತ್ತಿದ್ದು, ವಿವಾದ ಮುಂದುವರೆಯುವ ಲಕ್ಷಣಗಳು ಎದ್ದು ಕಾಣುತ್ತಿದೆ.
ಇವೆಲ್ಲದರ ನಡುವೆ ರಾಷ್ಟ್ರೀಯ ಬಜರಂಗದಳ ಜಿಲ್ಲಾಧ್ಯಕ್ಷ ಚಂದನ್‌ರಾವ್, ಗ್ರಾಮಾಂತರ ಅಧ್ಯಕ್ಷ ನವೀನ್, ರಾಮ್ ಸೇನೆ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಉಮೇಶ್ ಮತ್ತು ಓಂ ಹಿಂದೂ ಕೋಟೆ ಸಂಘಟನೆ ತಾಲೂಕು ಅಧ್ಯಕ್ಷ ಮಂಜುನಾಥ್, ಕೇಸರಿಪಡೆ ಅಧ್ಯಕ್ಷ ಗಿರೀಶ್ ಸೇರಿದಂತೆ ಇನ್ನಿತರರು ಕಾಲೇಜು ಆಡಳಿತ ಮಂಡಳಿಯೊಂದಿಗೆ ಈ ಸಂಬಂಧ ಚರ್ಚಿಸಿದ್ದು, ಈ ಸಂಘಟನೆಗಳು ಇದೀಗ ಹಿಂದೂ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿವೆ.
ಹಿಜಾಬ್ ಹೋರಾಟ ರೂಪುಗೊಳ್ಳಲು ಕಾರಣ?
ಕಳೆದ ಕೆಲವು ದಿನಗಳ ಹಿಂದೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯೋರ್ವಳೊಂದಿಗೆ ಹಿಂದೂ ವಿದ್ಯಾರ್ಥಿಯೋರ್ವ ಮಾತನಾಡುತ್ತಿದ್ದಾನೆಂಬ ಕಾರಣಕ್ಕೆ ಆ ವಿದ್ಯಾರ್ಥಿ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ನಡೆಸಿದ್ದು, ಈ ಹಿನ್ನಲೆಯಲ್ಲಿ ಉಂಟಾದ ವಿವಾದ ಇದೀಗ ಹಿಜಾಬ್ ವಿರುದ್ಧದ ಹೋರಾಟಕ್ಕೆ ಕಾರಣ ಎನ್ನಲಾಗಿದೆ.
ಪ್ರಾಂಶುಪಾಲರ ಸ್ಪಷ್ಟನೆ:
ಕಾಲೇಜಿನ ಪ್ರಾಂಶುಪಾಲ ಡಾ. ಉಮಾಶಂಕರ್ ಪತ್ರಿಕೆಗೆ ಮಾಹಿತಿ ನೀಡಿ, ಕೆಲವರು ಕಾಲೇಜಿನ ಬಗ್ಗೆ ತಪ್ಪು ಸಂದೇಶ ನೀಡಲು ಯತ್ನಿಸುತ್ತಿದ್ದಾರೆ. ಕಾಲೇಜಿನಲ್ಲಿ ೨೦೧೦ರಿಂದ ವಸ್ತ್ರ ಸಂಹಿತೆ ಜಾರಿಯಲ್ಲಿದ್ದು, ಕಾಲೇಜಿನ ತರಗತಿಗಳಿಗೆ ಕಡ್ಡಾಯವಾಗಿ ಸಮವಸ್ತ್ರದಲ್ಲಿಯೇ ಆಗಮಿಸಬೇಕು. ಬುಧವಾರ ಮತ್ತು ಶನಿವಾರ ಸಮವಸ್ತ್ರ ಕಡ್ಡಾಯಗೊಳಿಸಿಲ್ಲ. ಈ ನಡುವೆ ಇದೀಗ ಹಿಜಾಬ್ ಧರಿಸುವ ಸಂಬಂಧ ವಿನಾಕಾರಣ ಕಾಲೇಜಿನಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿದೆ. ಇದಕ್ಕೂ ಸಹ ಇದೀಗ ಪರಿಹಾರ ಕಂಡುಕೊಳ್ಳಲಾಗಿದೆ. ಹಿಜಾಬ್ ಸಮವಸ್ತ್ರವಲ್ಲ ಎಂಬುದು ನಮಗೂ ತಿಳಿದಿದೆ. ಕಾಲೇಜಿಗೆ ಬರುತ್ತಿರುವ ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಿಕೊಂಡು ಬರುತ್ತಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಹಿಜಾಬ್ ಬದಲಿಸಿ ಸಮವಸ್ತ್ರದಲ್ಲಿ ತರಗತಿಗೆ ಹೋಗಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದರು.
No comments:
Post a Comment