Thursday, July 21, 2022

ದುಶ್ಚಟಗಳಿಗೆ ಬಲಿಯಾದ ಸಾವಿರಾರು ಕುಟುಂಬಗಳಿಗೆ ಹೊಸ ಬದುಕು

ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ತಾಲೂಕು ಶಾಖೆ, ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನವಜೀವನೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಿ. ಆನಂದಕುಮಾರ್ ಉದ್ಘಾಟಿಸಿದರು.
          ಭದ್ರಾವತಿ, ಜು. ೨೧ : ದುಶ್ಚಟಗಳಿಗೆ ಬಲಿಯಾದ ಸಾವಿರಾರು ಕುಟುಂಬಗಳಿಗೆ ಹೊಸ ಬದುಕು ಕಟ್ಟಿಕೊಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಜನಜಾಗೃತಿ ವೇದಿಕೆ ಮೂಲಕ ಯಶಸ್ವಿಯಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸಂಟ್ ಪಾಯಿಸ್ ಹೇಳಿದರು.
      ಅವರು ಗುರುವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ತಾಲೂಕು ಶಾಖೆ, ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನವಜೀವನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
      ಮದ್ಯವ್ಯಸನ್ಯಕ್ಕೆ ಬಲಿಯಾದ ಸುಮಾರು ೯೦ ಸಾವಿರ ಮಂದಿ ಕುಡಿತ ಬಿಟ್ಟು ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಸಂಘಟಿತರಾಗಿ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವಂತಾಗಬೇಕು. ಆಗ ಮಾತ್ರ ಜನಜಾಗೃತಿ ವೇದಿಕೆ ಕಾರ್ಯ ಸಾರ್ಥಕಗೊಳ್ಳುತ್ತದೆ ಎಂದರು.
      ಟ್ರಸ್ಟ್ ಜಿಲ್ಲಾ ನಿರ್ದೇಶಕ ಜೆ. ಚಂದ್ರಶೇಖರ್ ಮಾತನಾಡಿ, ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಜವಾಬ್ದಾರಿ ಪೋಷಕರದ್ದಾಗಿದೆ. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಥಾರ ಸಹ ಮುಖ್ಯವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹಾಗು ಅಮ್ಮನವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಟ್ರಸ್ಟ್ ಕಾಳಜಿ ವಹಿಸಿದ್ದು, ಆ ಮೂಲಕ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದರು.
      ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಜಿ. ಆನಂದಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟ್ ಚಿತ್ರದುರ್ಗ ಜಿಲ್ಲೆಯ ಪ್ರಾದೇಶಿಕ ನಿರ್ದೇಶಕಿ ಬಿ. ಗೀತಾ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಆರ್. ಕರುಣಾಮೂರ್ತಿ, ಪಾಲಾಕ್ಷಪ್ಪ, ಗೊಂದಿ ಜಯರಾಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಪ್ರಕಾಶ್ ಸ್ವಾಗತಿಸಿದರು.

No comments:

Post a Comment