Friday, April 11, 2025

ಪೇಪರ್‌ಟೌನ್ ಹೈ ಸ್ಕೂಲ್ ಮಾನ್ಯತೆ ರದ್ದು, ನೆನಪಿನಲ್ಲಿ ಉಳಿದ ಪ್ರತಿಷ್ಠಿತ ಶಾಲೆ

ಭದ್ರಾವತಿ ಕಾಗದನಗರದ ಪೇಪರ್‌ಟೌನ್ ಹೈ ಸ್ಕೂಲ್.

   ಭದ್ರಾವತಿ: ಒಂದು ಕಾಲದಲ್ಲಿ ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ಕಾಗದನಗರ ಪ್ರೌಢಶಾಲೆ(ಪೇಪರ್‌ಟೌನ್ ಹೈ ಸ್ಕೂಲ್) ಮಾನ್ಯತೆ ಹಿಂಪಡೆಯಲಾಗಿದೆ. ಇದರಿಂದಾಗಿ ಪ್ರತಿಷ್ಠಿತ ಶಾಲೆ ಇದೀಗ ಕೇವಲ ನೆನಪಾಗಿ ಉಳಿದುಕೊಂಡಿದೆ. 
     ಸುಮಾರು ೭ ದಶಕಗಳ ಇತಿಹಾಸ ಹೊಂದಿರುವ ಶಾಲೆ ಇದೀಗ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮಾನ್ಯತೆ ಕಳೆದುಕೊಂಡಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಆರಂಭದೊಂದಿಗೆ ಕಾರ್ಮಿಕರು ಹಾಗು ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಶಾಲೆಯಲ್ಲಿ ಪ್ರತಿ ವರ್ಷ ಸಾವಿರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ಅಲ್ಲದೆ ಈ ಶಾಲೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಪರಿಣಿತ ಶಿಕ್ಷಕರ ತಂಡವನ್ನು ಈ ಶಾಲೆ ಹೊಂದಿತ್ತು. 
    ಈ ಶಾಲೆಯ ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ ಹಾಗು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಲವು ಸಾಧನೆಗಳನ್ನು ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ಗಮನ ಸೆಳೆಯುತ್ತಿದ್ದರು. ಅಲ್ಲದೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸಾವಿರಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಶಾಲೆಯಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಪೈಪೋಟಿ ನಡೆಸುತ್ತಿದ್ದರು. ನೂರಾರು ಉತ್ತಮ ಶಿಕ್ಷಕರು ಇಂದಿಗೂ ವಿದ್ಯಾರ್ಥಿಗಳ ನೆನಪಿನಲ್ಲಿ ಉಳಿದುಕೊಂಡಿದ್ದಾರೆ. 
  ಕಾರ್ಖಾನೆ ಅವನತಿಯೊಂದಿಗೆ ಶಾಲೆ ಸಹ ಹಂತ ಹಂತವಾಗಿ ತನ್ನ ವೈಭವ ಕಳೆದುಕೊಳ್ಳುತ್ತಾ ಬಂದಿದ್ದು, ಇದೀಗ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮಾನ್ಯತೆ ಕಳೆದುಕೊಂಡಿದೆ. ಈ ಹಿನ್ನಲೆಯಲ್ಲಿ ಮಾ.೧೫ರಂದು ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶದ ಜ್ಞಾಪನ ಪತ್ರ ಹೊರಡಿಸಿದ್ದು, ಈಗಾಗಲೇ ಮಾನ್ಯತೆ ರದ್ದುಪಡಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಎಲ್ಲಾ ಕ್ರಮಗಳನ್ನು ಸಹ ಹಂತ ಹಂತವಾಗಿ ಪೂರೈಸಲಾಗಿದೆ.  ವಿದ್ಯಾರ್ಥಿಗಳು ಹಾಗು ಶಿಕ್ಷಕರಿಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ.  
 

No comments:

Post a Comment