ಬುಧವಾರ, ಸೆಪ್ಟೆಂಬರ್ 22, 2021

ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಚನ್ನಪ್ಪ

ಭದ್ರಾವತಿ ನಗರಸಭೆ ವಾರ್ಡ್ ನಂ.೮ರ ಸೀಗೆಬಾಗಿಯಲ್ಲಿ  ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಕೋವಿಡ್-೧೯ ಎದುರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸುರಕ್ಷಾ ಹಾಗು ಪ್ರತಿರಕ್ಷಣಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಸೆ. ೨೨: ಕಟ್ಟಡ ಹಾಗು ಇತರೆ ನಿರ್ಮಾಣ ಕಾರ್ಮಿಕರು ಕೇಂದ್ರ ಹಾಗು ರಾಜ್ಯ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಭವಿಷ್ಯದ ಬದುಕಿನ ಕಡೆ ಹೆಚ್ಚು ಗಮನ ಹರಿಸಬೇಕೆಂದು ನಗರಸಭಾ ಸದಸ್ಯ ಚನ್ನಪ್ಪ ಹೇಳಿದರು.
    ಅವರು ಬುಧವಾರ ನಗರಸಭೆ ವಾರ್ಡ್ ನಂ.೮ರ ಸೀಗೆಬಾಗಿಯಲ್ಲಿ  ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕೋವಿಡ್-೧೯ ಎದುರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸುರಕ್ಷಾ ಹಾಗು ಪ್ರತಿರಕ್ಷಣಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಕಟ್ಟಡ ಹಾಗು ಇತರೆ ನಿರ್ಮಾಣ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಬಹಳ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ಕಡ್ಡಾಯವಾಗಿ ಗುರುತಿನ ಚೀಟಿ ಪಡೆದುಕೊಂಡು ಕೇಂದ್ರ ಹಾಗು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಕೊಡಿಸುವ ಜೊತೆಗೆ ಕುಟುಂಬದ ಆರೋಗ್ಯ ರಕ್ಷಣೆಗೆ ಹೆಚ್ಚಿನ ಗಮನ ಹರಿಸಬೇಕು. ತಮ್ಮ ಮಕ್ಕಳು ಸಹ ಉತ್ತಮ ಭವಿಷ್ಯ ಕಾಣುವಂತಾಗಬೇಕೆಂದರು.
    ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು ಪ್ರಾಸ್ತಾವಿಕ ನುಡಿಗಳನ್ನಾಡಿ, ಸರ್ಕಾರ ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಕಾರ್ಮಿಕರಿಗೆ ಶಾಶ್ವತವಾದ ಯೋಜನೆಗಳು ಲಭಿಸುತ್ತಿಲ್ಲ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರೂ ಸಹ ನಿಜವಾದ ಫಲಾನುಭವಿಗಳಿಗೆ ಲಭಿಸುತ್ತಿಲ್ಲ. ಅಲ್ಲದೆ ಕಾರ್ಮಿಕರ ಹಲವಾರು ಬೇಡಿಕೆಗಳಿದ್ದು, ನಾವುಗಳು ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಂಘಟನೆ ಹೆಚ್ಚು ಬಲಬೇಕಾಗಿದೆ ಎಂದರು.
    ಯೂನಿಯನ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆವಹಿಸಿದ್ದರು. ನಗರಸಭಾ ಸದಸ್ಯರಾದ ಮಣಿ ಎಎನ್‌ಎಸ್, ಜಾರ್ಜ್, ಬಷೀರ್ ಅಹಮದ್, ಯೂನಿಯನ್ ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ತಾಂತ್ರಿಕ ಸಲಹೆಗಾರ ಮನೋಹರ್, ಸೀಗೆಬಾಗಿ ಭಾಗದ ಅಧ್ಯಕ್ಷ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ