Friday, August 5, 2022

ಕುವೆಂಪು ವಿ.ವಿ ಅಧ್ಯಾಪಕೇತರ ನೌಕರರ ಮುಷ್ಕರ ೬ನೇ ದಿನಕ್ಕೆ

ಕುವೆಂಪು ವಿಶ್ವ ವಿದ್ಯಾಲಯ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಹಲವು ತಿಂಗಳುಗಳಿಂದ ಬಾಕಿ ಇರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ವಿಶ್ವ ವಿದ್ಯಾಲಯದ ಕೇಂದ್ರ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದಂದು ಸಹ ಮುಂದುವರೆಯಿತು.
    ಭದ್ರಾವತಿ, ಆ. ೫: ಕುವೆಂಪು ವಿಶ್ವ ವಿದ್ಯಾಲಯ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಹಲವು ತಿಂಗಳುಗಳಿಂದ ಬಾಕಿ ಇರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕಿನ ಶಂಕರಘಟ್ಟದಲ್ಲಿರುವ ವಿಶ್ವ ವಿದ್ಯಾಲಯದ ಕೇಂದ್ರ ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿರುವ ಅನಿರ್ಧಿಷ್ಟಾವಧಿ ಮುಷ್ಕರ ಶನಿವಾರ ೬ನೇ ದಿನಕ್ಕೆ ಕಾಲಿಟ್ಟಿದೆ.
    ಸರ್ವೋಚ್ಛ ನ್ಯಾಯಾಲಯದ ತೀರ್ಪು ಮತ್ತು ರಾಜ್ಯ ಸರ್ಕಾರದ ಆದೇಶದ ಮೇಲೆ ಜು.೯, ೨೦೨೦ರಂದು ಸಿಂಡಿಕೇಟ್ ಸಭೆ ನಡೆದಿದ್ದು, ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಇದುವರೆಗೂ ಸಂಪೂರ್ಣವಾಗಿ ಅನುಷ್ಠಾನಗೊಳಿಸಿಲ್ಲ. ಬಡ್ತಿ ಹೊಂದಿರುವ ನೌಕರರಿಗೆ ವೇತನ ನಿಗದಿಕರಣ, ಉಪ ಕುಲಸಚಿವ ಹುದ್ದೆಗಳಿಗೆ ಮತ್ತು ಇತರೆ ಖಾಲಿ ಹುದ್ದೆಗಳಿಗೆ ಬಡ್ತಿ ಕೈಗೊಂಡಿರುವುದಿಲ್ಲ. ಅಲ್ಲದೆ ಉಳಿದ ವಿಲೀನಿಕರಣ ನೌಕರರಿಗೆ ಸೌಲಭ್ಯ ವಿಸ್ತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮುಷ್ಕರ ಜು.೩೦ರಿಂದ ಆರಂಭಗೊಂಡಿದ್ದು, ಈ ನಡುವೆಯು ಮುಷ್ಕರ ಸ್ಥಳಕ್ಕೆ ಆಗಮಿಸಿದ್ದ ವಿಶ್ವ ವಿದ್ಯಾಲಯದ ಕುಲಪತಿಗಳು, ಕುಲಸಚಿವರು ಆ.೧ರೊಳಗೆ ಬೇಡಿಕೆ ಈಡೇರಿಸಿಕೊಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಮುಷ್ಕರ ಸ್ಥಗಿತಗೊಳಿಸಲಾಗಿತ್ತು. ಆದರೆ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳದ ಕಾರಣ ಪುನಃ ಆ.೧ರಿಂದ ಮುಷ್ಕರ ನಡೆಯುತ್ತಿದ್ದು, ವರಮಹಾಲಕ್ಷ್ಮೀ ಹಬ್ಬದಂದು ಶುಕ್ರವಾರ ಸಹ ಮುಷ್ಕರ ಮುಂದುವರೆಯಿತು.  
    ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಸುವುದಾಗಿ ಮುಷ್ಕರ ನಿರತರು ಬಿಗಿಪಟ್ಟು ಹಿಡಿದಿದ್ದು, ಆಡಳಿತ ಮಂಡಳಿಗೆ ಇದೀಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
    ಸಂಘದ ಅಧ್ಯಕ್ಷ ಶ್ರೀನಿವಾಸ್ ಮುಷ್ಕರದ ನೇತೃತ್ವ ವಹಿಸಿದ್ದರು. ಉಪಾಧ್ಯಕ್ಷ ಪಿ. ಮಹೇಶ್, ಕಾರ್ಯದರ್ಶಿ ಅಬ್ದುಲ್ ಅಲಿ, ಖಜಾಂಚಿ ಚಂದ್ರಶೇಖರ್, ಸಹಕಾರ್ಯದರ್ಶಿ ಎಂ. ಸಿದ್ದರಾಮ, ನಿರ್ದೇಶಕರಾದ ಬಿ.ಎಂ ಅಮೀರ್, ಕೆಂಪರಾಜ್, ಎಸ್. ಸುಶೀಲಾ, ಎಚ್.ಎಸ್ ರೇಖಾ ಸೇರಿದಂತೆ ಅಧ್ಯಾಪಕೇತರ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

No comments:

Post a Comment